ಭಯೋತ್ಪಾದಕರ ದಾಳಿಗೆ ಕಾಶ್ಮೀರಿ ಪಂಡಿತ ಬಲಿ

Update: 2022-08-16 09:09 GMT
PHOTO :IANS

ಶ್ರೀನಗರ: ಶೋಪಿಯಾನ್ ಜಿಲ್ಲೆಯ ಸೇಬಿನ ತೋಟದಲ್ಲಿ ಇಂದು ಕಾಶ್ಮೀರಿ ಪಂಡಿತನೊಬ್ಬನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ಗುಂಡಿನ ದಾಳಿಯಲ್ಲಿ ಪಂಡಿತನ ಸಹೋದರ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುದ್ಗಾಮ್‌ನ ಸರಕಾರಿ ಕಚೇರಿಯಲ್ಲಿ ಕಾಶ್ಮೀರಿ ಪಂಡಿತನೊಬ್ಬನ ಹತ್ಯೆಗೆ ಪಂಡಿತ್ ಸಮುದಾಯದಿಂದ ವ್ಯಾಪಕ ಪ್ರತಿಭಟನೆ ವ್ಯಕ್ತವಾದ  ಸುಮಾರು ಮೂರು ತಿಂಗಳ ನಂತರ ಇದು ಸಂಭವಿಸಿದೆ.

"ಶೋಪಿಯಾನ್‌ನ ಚೋಟಿಪೋರಾ ಪ್ರದೇಶದ ಸೇಬಿನ ತೋಟದಲ್ಲಿ ಭಯೋತ್ಪಾದಕರು ನಾಗರಿಕರ ಮೇಲೆ ಗುಂಡು ಹಾರಿಸಿದ್ದಾರೆ. ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ ಹಾಗೂ  ಒಬ್ಬರು ಗಾಯಗೊಂಡಿದ್ದಾರೆ’’ ಎಂದು ಕಾಶ್ಮೀರ ಪೊಲೀಸರು ತನ್ನಅಧಿಕೃತ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಉಗ್ರರ ದಾಳಿಗೆ ಬಲಿಯಾದವರನ್ನು ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಅವರ ಸಹೋದರ ಪಿಂಟು ಕುಮಾರ್ ಗಾಯಗೊಂಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಿಂದ ಕಾಶ್ಮೀರವು ಉದ್ದೇಶಿತ ಹತ್ಯೆಗಳ ಸರಣಿಗೆ ಸಾಕ್ಷಿಯಾಗಿದೆ. ಬಲಿಯಾದವರಲ್ಲಿ ಹಲವರು ವಲಸೆ ಕಾರ್ಮಿಕರು ಅಥವಾ ಕಾಶ್ಮೀರಿ ಪಂಡಿತರಾಗಿದ್ದರು.

ಅಕ್ಟೋಬರ್‌ನಲ್ಲಿ, ಐದು ದಿನಗಳಲ್ಲಿ ಏಳು ನಾಗರಿಕರು ಕೊಲ್ಲಲ್ಪಟ್ಟರು .  ಅವರಲ್ಲಿ ಒಬ್ಬ ಕಾಶ್ಮೀರಿ ಪಂಡಿತ, ಒಬ್ಬ ಸಿಖ್ ಹಾಗೂ  ಇಬ್ಬರು ವಲಸಿಗ ಹಿಂದೂಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News