ಬಿಹಾರ: ನೂತನ ಸಚಿವರಾಗಿ 31 ಮಂದಿ ಪ್ರಮಾಣವಚನ ಸ್ವೀಕಾರ

Update: 2022-08-16 15:12 GMT
Photo:ANI

ಪಾಟ್ನಾ,ಆ.16: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಕೇಂದ್ರ ಸಂಪುಟವನ್ನು ವಿಸ್ತರಿಸಿದ್ದು,ಖಾತೆಗಳ ಹಂಚಿಕೆಯಲ್ಲಿ ಸಿಂಹಪಾಲನ್ನು ಪಾಲುದಾರ ಪಕ್ಷವಾದ ಆರ್ಜೆಡಿ ಪಡೆದುಕೊಂಡಿದೆ. ನೂತನ ಸಚಿವರಿಗೆ ರಾಜ್ಯಪಾಲ ಫಗುಚೌಹಾಣ್ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.

   

ಇಂದು ಒಟ್ಟು 31 ಸಚಿವರು ಬಿಹಾರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದು, ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಆರೋಗ್ಯ, ರಸ್ತೆ ಕಾಮಗಾರಿ, ನಗರಾಭಿವೃದ್ಧಿ, ವಸತಿ ಹಾಗೂ ಗ್ರಾಮೀಣಾಭಿವೃದ್ಧಿಯ ಖಾತೆಗಳು ದೊರೆತಿವೆ.

ಇನ್ನೋರ್ವ ಆರ್ಜೆಡಿ ನಾಯಕ, ತೇಜಸ್ವಿ ಯಾದವ್ ಅವರ ಸಹೋದರ ತೇಜ್ ಪ್ರತಾಪ್ ಯಾದವ್ ಅವರಿಗೆ ಪರಿಸರ ಖಾತೆಯನ್ನು ನೀಡಲಾಗಿದೆ.

  

ಮುಹಮ್ಮದ್ ಝಾಮಾ ಖಾನ್, ಜಯಂತ್ ರಾಜ್, ಶೀಲಾ ಕುಮಾರಿ, ಸುನಿಲ್ ಕುಮಾರ್, ಸಂಜಯ್ ಝಾ, ಮದನ್ ಸಾಹ್ನಿ, ಶ್ರವಣ ಕುಮಾರ್, ಅಶೋಕ್ಚೌಧುರಿ, ಲೇಶಿ ಸಿಂಗ್, ವಿಜಯ್ ಕುಮಾರ್ ಚೌಧರಿ ಹಾಗೂ ಬಿಜೇಂದ್ರ ಯಾದವ್ ಒಳಗೊಂಡಂತೆ ಜೆಡಿಯು ತನ್ನ ಹಿಂದಿನ ಸಂಪುಟದ ಬಹುತೇಕ ಸಚಿವರನ್ನು ಉಳಿಸಿಕೊಂಡಿದೆ

ಆರ್ಜೆಡಿಯಿಂದ ತೇಜ್ ಪ್ರತಾಪ್ ಯಾದವ್, ಅಲೋಕ್ ಮೆಹ್ತಾ, ಸುರೇಂದ್ರ ಪ್ರಸಾದ್ ಯಾದವ್ ಹಾಗೂ ರಮಾನಂದ ಯಾದವ್, ಕುಮಾರ್ ಸರ್ವಜೀತ್, ಲಲಿತ್ ಯಾದವ್, ಸಮೀರ್ ಕುಮಾರ್ ಮಹಾಸೇಥ್, ಚಂದ್ರಶೇಖರ್, ಜಿತೇಂದ್ರ ಕುಮಾರ್ ರಾಯ್, ಅನಿತಾ ದೇವಿ ಹಾಗೂ ಸುಧಾಕರ ಸಿಂಗ್, ಇಸ್ರಾಯೆಲ್ ಮನ್ಸೂರಿ ಸುರೇಂದ್ರ ರಾಮ್ , ಕಾರ್ತಿಕೇಯ ಸಿಂಗ್, ಶಾನವಾಝ್ ಆಲಂ, ಶಮೀಮ್ ಅಹ್ಮದ್ ಅವರು ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

   

    ಇಬ್ಬರು ಕಾಂಗ್ರೆಸ್ ಶಾಸಕರಾದ ಅಫಾಕ್ ಆಲಂ ಹಾಗೂ ಮುರಾರಿ ಲಾಲ್ ಗೌತಮ್ ಅವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಲಾಗಿದೆ. ಇನ್ನೊಂದು ಮಿತ್ರಪಕ್ಷವಾದ ಜಿತನ್ ರಾಮ್ ಮಾಂಜಿಯವರ ಹಿಂದೂಸ್ತಾನಿ ಅವಾಮಿ ಮೋರ್ಚಾದಿಂದ ಸಂತೋಷ್ ಸುಮನ್ ಹಾಗೂ ಪಕ್ಷೇತರ ಶಾಸಕ ಸುಮಿತ್ ಕುಮಾರ್ ಸಿಂಗ್ ಕೂಡಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಿಹಾರ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ 36 ಸಚಿವರನ್ನು ಹೊಂದಲು ಅವಕಾಶವಿದೆ. ಆದಾಗ್ಯೂ ಭವಿಷ್ಯದಲ್ಲಿ ಸಂಪುಟ ವಿಸ್ತರಣೆಯ ಉದ್ದೇಶದಿಂದ ಕೆಲವು ಸಚಿವ ಖಾತೆಗಳನ್ನು ಭರ್ತಿ ಮಾಡಲಾಗಿಲ್ಲವೆಂದು ಮೂಲಗಳು ತಿಳಿಸಿವೆ.

ಈ ತಿಂಗಳ ಆರಂಭದಲ್ಲಿ ಬಿಜೆಪಿ ಜೊತೆ ಮೈತ್ರಿ ಕಡಿದುಕೊಂಡ ನಿತೀಶ್ ಅವರು ಆರ್ಜೆಡಿ, ಕಾಂಗ್ರೆಸ್ ಮತ್ತಿತರ ಪಕ್ಷಗಳ ಬೆಂಬಲದೊಂದಿಗೆ ಮಹಾಮೈತ್ರಿ ಸರಕಾರವನ್ನು ರಚಿಸಿದ್ದರು. ಮುಖ್ಯಮಂತ್ರಿ ನಿತೀಶ್ ಹಾಗೂ ತೇಜಸ್ವಿ ಯಾದವ್ ಅವರು ಆಗಸ್ಟ್ 10ರಂದು ಪ್ರಮಾಣವಚನ ಸ್ವೀಕರಿಸಿದ್ದರು.

ನಿತೀಶ್ ನೇತೃತ್ವದ ಬಿಹಾರದ ಮಹಾಮೈತ್ರಿ ಸರಕಾರವು 164 ಶಾಸಕರ ಬೆಂಬಲವನ್ನು ಹೊಂದಿದ್ದು. ಆಗಸ್ಟ್ 24ರಂದು ವಿಧಾನಸಭೆಯಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News