ಜನನ ದರ ಕಡಿಮೆ ಮಟ್ಟಕ್ಕೆ: ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ ವಿಶೇಷ ಭತ್ಯೆ ಘೋಷಿಸಿದ ಚೀನಾ

Update: 2022-08-16 15:24 GMT
photo : NDTV

ಬೀಜಿಂಗ್, ಆ.16: ಚೀನಾದಲ್ಲಿ ಜನನ ದರ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿರುವ ಕಾರಣ 2025ರಿಂದ ಜನಸಂಖ್ಯೆಯು ಕುಗ್ಗಲು ಆರಂಭವಾಗಲಿದೆ ಎಂಬ ತಜ್ಞರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಕುಟುಂಬಗಳು ಹೆಚ್ಚಿನ ಮಕ್ಕಳನ್ನು ಹೊಂದುವುದನ್ನು ಪ್ರೋತ್ಸಾಹಿಸಲು ಹಲವು ಸವಲತ್ತು ಹಾಗೂ ಭತ್ಯೆಗಳನ್ನು ಚೀನಾ ಸರಕಾರ ಮಂಗಳವಾರ ಘೋಷಿಸಿದೆ.

ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಚೀನಾದಲ್ಲಿ ವಯಸ್ಸಾದವರ ಪ್ರಮಾಣದಲ್ಲಿ ಹೆಚ್ಚಳ, ನಿಧಾನಗತಿಯ ಆರ್ಥಿಕ ಪ್ರಗತಿ ಮತ್ತು ದಶಕದಲ್ಲೇ ಅತ್ಯಂಕ ಕನಿಷ್ಟ ಜನನ ಪ್ರಮಾಣದಿಂದ ಜನಸಂಖ್ಯಾ ಬಿಕ್ಕಟ್ಟು ಸೃಷ್ಟಿಯಾಗಿದೆ. ಅತ್ಯಂತ ಕಠಿಣವಾಗಿ ಜಾರಿಯಲ್ಲಿದ್ದ ‘ಒಂದೇ ಮಗು’ ನಿಯಮವನ್ನು ಚೀನಾ 2016ರಲ್ಲಿ ಕೈಬಿಟ್ಟು ದಂಪತಿ 3 ಮಕ್ಕಳನ್ನು ಹೊಂದಲು ಅವಕಾಶ ನೀಡಿದ್ದರೂ ಕಳೆದ 5 ವರ್ಷದಲ್ಲಿ ಜನನ ಪ್ರಮಾಣ ಇಳಿಮುಖವಾಗುತ್ತಾ ಸಾಗಿದೆ.

ರಾಷ್ಟ್ರೀಯ ಆರೋಗ್ಯ ಆಯೋಗ ಕಳೆದ ಮಂಗಳವಾರ ಜಾರಿಗೊಳಿಸಿದ ಕಾರ್ಯನೀತಿ ಮಾರ್ಗಸೂಚಿಯಲ್ಲಿ, ಸಂತಾನೋತ್ಪತ್ತಿ ಆರೋಗ್ಯದ ಮೇಲಿನ ವೆಚ್ಚವನ್ನು ಹೆಚ್ಚಿಸಲು ಮತ್ತು ರಾಷ್ಟ್ರವ್ಯಾಪಿ ಶಿಶುಪಾಲನಾ ಸೇವೆಗಳನ್ನು ಸುಧಾರಿಸುವಂತೆ ಕೇಂದ್ರ ಮತ್ತು ಪ್ರಾಂತೀಯ ಸರಕಾರಗಳನ್ನು ಆಗ್ರಹಿಸಿತ್ತು.

ಯುವ ಕುಟುಂಬಗಳಿಗೆ ಸಬ್ಸಿಡಿ, ತೆರಿಗೆ ರಿಯಾಯಿತಿ, ಉತ್ತಮ ಆರೋಗ್ಯ ವಿಮೆ, ಶಿಕ್ಷಣ, ವಸತಿ ಮತ್ತು ಉದ್ಯೋಗದ ನೆರವು ಒದಗಿಸುವ ಮೂಲಕ ಸಕ್ರಿಯ ಫಲವತ್ತತೆ ಬೆಂಬಲ ಕ್ರಮಗಳನ್ನು ಸ್ಥಳೀಯ ಸರಕಾರ ಜಾರಿಗೊಳಿಸಬೇಕು. ಶಿಶುಪಾಲನಾ ಸೇವೆಗಳ ತೀವ್ರ ಕೊರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ವರ್ಷಾಂತ್ಯದೊಳಗೆ 2ರಿಂದ 3 ವರ್ಷದ ಮಕ್ಕಳಿಗೆ ಸಾಕಷ್ಟು ನರ್ಸರಿಗಳನ್ನು ಒದಗಿಸಲು ಎಲ್ಲಾ ಪ್ರಾಂತಗಳೂ ಕ್ರಮ ಕೈಗೊಳ್ಳಬೇಕು ಎಂದು ಮಾರ್ಗಸೂಚಿ ಸಲಹೆ ನೀಡಿದೆ. ಚೀನಾದ ಶ್ರೀಮಂತ ನಗರಗಳು ತೆರಿಗೆ ಮತ್ತು ವಸತಿ ಸಾಲ, ಶೈಕ್ಷಣಿಕ ಸವಲತ್ತು ಹಾಗೂ ನಗದು ಪ್ರೋತ್ಸಾಹ ಧನದ ಮೂಲಕ ಮಹಿಳೆಯರು ಹೆಚ್ಚಿನ ಮಕ್ಕಳನ್ನು ಹೊಂದಲು ಪ್ರೋತ್ಸಾಹ ನೀಡುತ್ತಿವೆ.

ಕಳೆದ ವರ್ಷ ಚೀನಾದ ಜನನ ಪ್ರಮಾಣ 1 ಸಾವಿರ ಜನರಿಗೆ 7.52 ಜನನಕ್ಕೆ ಇಳಿದಿದ್ದು ಇದು 1949ರಲ್ಲಿ ಕಮ್ಯುನಿಸ್ಟ್ ಚೀನಾ ಸ್ಥಾಪನೆಗೊಂಡ ಬಳಿಕದ ಅತ್ಯಂತ ಕನಿಷ್ಟ ದರವಾಗಿದೆ ಎಂದು ‘ನ್ಯಾಷನಲ್ ಬ್ಯೂರೋ ಆಫ್ ಸ್ಟ್ಯಾಟಿಸ್ಟಿಕ್ಸ್’ನ ಅಂಕಿಅಂಶ ತಿಳಿಸಿದೆ. ಹೆಚ್ಚುತ್ತಿರುವ ಜೀವನ ವೆಚ್ಚ ಮತ್ತು ಸಣ್ಣ ಕುಟುಂಬಕ್ಕೆ ಒಗ್ಗಿಕೊಂಡಿರುವ ಹಿನ್ನೆಲೆಯಲ್ಲಿ ಆಗಿರುವ ಸಾಂಸ್ಕೃತಿಕ ಬದಲಾವಣೆ ಶಿಶುಗಳ ಜನನ ಪ್ರಮಾಣ ಕಡಿಮೆಯಾಗಲು ಕಾರಣ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News