ಲಡಾಕ್ ಗಡಿಯಲ್ಲಿ ಭಾರತೀಯ ಸೇನೆಗೆ ಅತ್ಯಾಧುನಿಕ ಸ್ವದೇಶಿ ಶಸ್ತ್ರಾಸ್ತ್ರಗಳ ಹಸ್ತಾಂತರ

Update: 2022-08-16 17:21 GMT

ಹೊಸದಿಲ್ಲಿ,ಆ.16: ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನಾದ ಜೊತೆ ಉದ್ವಿಗ್ನ ವಾತಾವರಣ ನೆಲೆಸಿರುವ ನಡುವೆಯೇ, ಪೂರ್ವ ಲಡಾಖ್ನಲ್ಲಿ ಕದನ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಯತ್ನವಾಗಿ ಭಾರತೀಯ ಸೇನೆಗೆ ಅತ್ಯಾಧುನಿಕ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಂಗಳವಾರ ಹಸ್ತಾಂತರಿಸಿದ್ದಾರೆ.

 ಸೇನೆಗೆ ಹಸ್ತಾಂತರಿಸಲಾದ ನೂತನ ಉಪಕರಣಗಳಲ್ಲಿ ಮಾನವರಹಿತ ವೈಮಾನಿಕ ವ್ಯವಸ್ಥೆಗಳು, ಕ್ಷಿಪ್ರ ಪ್ರತಿಕ್ರಿಯಾತ್ಮಕ ಯುದ್ಧ ವಾಹನಗಳು, ಗಸ್ತು ದೋಣಿಗಳು ಹಾಗೂ ಕಣ್ಗಾವಲು ಉಪಕರಣಗಳು ಸೇರಿವೆಯೆಂದು ಮೂಲಗಳು ತಿಳಿಸಿವೆ.

 ಸೈನಿಕರ ಸುರಕ್ಷತೆಯ ಸಂಚಾರ ವಾಹನಗಳು, ಸ್ವಯಂಚಾಲಿತ ಸಂವಹನ ವ್ಯವಸ್ಥೆ, ಟ್ಯಾಂಕ್ಗಳ ಉನ್ನತ ದೃಷ್ಟಿ ಸಾಧನಗಳು, ಅತ್ಯಾಧುನಿಕ ಥರ್ಮಲ್ ಇಮೇಜರ್ಗಳನ್ನು ಕೂಡಾ ಸೇನೆಗೆ ಹಸ್ತಾಂತರಿಸಲಾಗಿದೆ.

       ನೂತನ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ನಾಥ್ ಸಿಂಗ್ ಅವರು ಅತ್ಯಾಧುನಿಕ ಯುದ್ಧೋಪಕರಣಗಳು ಹಾಗೂ ವ್ಯವಸ್ತೆಗಳು ಭಾರತೀಯ ಸೇನೆಯ ಕಾರ್ಯಾಚರಣೆಯ ಸನ್ನ ದ್ಧತೆಯನ್ನು ವೃದ್ದಿಸಲಿದೆ ಹಾಗೂ ಅವರ ದಕ್ಷತೆಯನ್ನು ಹೆಚ್ಚಿಸಲಿದೆ ಎಂದರು. ‘‘ಖಾಸಗಿ ಮತ್ತಿತರ ಸಂಸ್ಥೆಗಳ ಜೊತೆಗಿನ ಪಾಲುದಾರಿಕೆಯೊಂದಿಗೆ ದೇಶದ ಸ್ವಾವಲಂಬನೆಯ ಸಾಮರ್ಥ್ಯ ಹೆಚ್ಚುತ್ತಿರುವುದಕ್ಕೆ ಇದೊಂದು ಉಜ್ವಲ ಉದಾಹರಣೆಯಾಗಿದೆ’’ ಎಂದವರು ತಿಳಿಸಿದರು.

  ಪೂರ್ವ ಲಡಾಕ್ನ ಗಡಿಯಲ್ಲಿರುವ ಪ್ಯಾಂಗಾಂಗ್ ತ್ಸೊ ಸರೋವರದ ಮೇಲೆ ಕಟ್ಟುನಿಟ್ಟಿನ ಕಣ್ಗಾವಲಿಗಾಗಿ ನೂತನ ದೋಣಿಗಳು, ಅತ್ಯಾಧುನಿಕ ಕಣ್ಗಾವಲು ಸಾಧನ ಮತ್ತಿತರ ಉಪಕರಣಗಳನ್ನು ಕೂಡಾ ನಿಯೋಜಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News