×
Ad

ಬಿಲ್ಕಿಸ್ ಬಾನು ಪ್ರಕರಣದ ತಪ್ಪಿತಸ್ಥರ ಬಿಡುಗಡೆಗೊಳಿಸಿ ಗೃಹ ಸಚಿವಾಲಯದ ಮಾರ್ಗದರ್ಶಿ ಉಲ್ಲಂಘಿಸಿದ ಗುಜರಾತ್ ಸರಕಾರ

Update: 2022-08-17 13:48 IST
Photo: Twitter

ಹೊಸದಿಲ್ಲಿ: ಗುಜರಾತ್‍ನಲ್ಲಿ 2002 ಗಲಭೆಗಳ(Gujarat Riot) ಸಂದರ್ಭ ನಡೆದ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದಲ್ಲಿ ದೋಷಿಗಳೆಂದು ಘೋಷಿತರಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಸ್ವಾತಂತ್ರ್ಯದಿನದಂದು ಗೋಧ್ರಾ ಉಪಕಾರಾಗೃಹದಿಂದ ರಾಜ್ಯ ಸರಕಾರದ ಅನುಮತಿಯೊಂದಿಗೆ ಬಿಡುಗಡೆಗೊಳಿಸಿರುವುದು ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು newindianexpress ವರದಿ ಮಾಡಿದೆ.

ಅತ್ಯಾಚಾರ ಪ್ರಕರಣಗಳ ಅಪರಾಧಿಗಳು ಮತ್ತು  ಜೀವಾವಧಿ ಶಿಕ್ಷೆಗೊಳಗಾಗದವರ ಶಿಕ್ಷೆ ಕಡಿತಗೊಳಿಸಿ ಬಿಡುಗಡೆಗೊಳಿಸುವ ಹಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದ್ದರೂ ಗುಜರಾತ್ ಸರಕಾರ ದೇಶಾದ್ಯಂತ ಸುದ್ದಿಯಾಗಿದ್ದ ಬಿಲ್ಕಿಸ್ ಬಾನು ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿದೆ.

ಬಿಲ್ಕಿಸ್ ಬಾನು ಅವರ ಇಡೀ ಕುಟುಂಬವನ್ನು ಕೊಲೆಗೈಯ್ಯುವ ಮುನ್ನ ಆಕೆಯ ಮೇಲೆ ಈ 11 ಮಂದಿ ಸಾಮೂಹಿಕ ಅತ್ಯಾಚಾರಗೈದಿದ್ದರು ಎಂಬುದು ಸಾಬೀತಾಗಿತ್ತು.

ಗೃಹ ಸಚಿವಾಲಯ ತನ್ನ ಜೂನ್ 10, 2022 ರ ಅಧಿಸೂಚನೆಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ 12 ವಿಭಾಗದ ಅಪರಾಧಿಗಳನ್ನು ಹೊರತುಪಡಿಸಿ 8 ವಿಭಾಗದ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಆಗಸ್ಟ್ 15, 2022, ಜನವರಿ 26, 2023  ಹಾಗೂ ಆಗಸ್ಟ್ 15,2023ರಂದು ಬಿಡುಗಡೆಗೊಳಿಸಬಹುದೆಂದು ಹೇಳಿತ್ತು.

ಈ ಅಧಿಸೂಚನೆಯಲ್ಲಿ ತಿಳಿಸಲಾದಂತೆ ಮರಣದಂಡನೆ ಶಿಕ್ಷೆಯು ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆಗೊಂಡವರಿಗೆ, ಜೀವಾವಧಿ ಶಿಕ್ಷೆಗೊಳಗಾದವರಿಗೆ, ಉಗ್ರವಾದ, ವರದಕ್ಷಿಣೆ ಸಾವು, ನಕಲಿ ನೋಟು, ಅತ್ಯಾಚಾರ, ಮಾನವ ಕಳ್ಳಸಾಗಣಿಕೆ, ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅಕ್ರಮ ಹಣ ವರ್ಗಾವಣೆ, ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುವವರಿಗೆ ಈ ಯೋಜನೆ ಅನ್ವಯವಾಗದು ಎಂದು ತಿಳಿಸಲಾಗಿತ್ತು.

ಹೀಗಿದ್ದರೂ ಬಿಲ್ಕಿಸ್ ಬಾನು ಪ್ರಕರಣದ ತಪ್ಪಿತಸ್ಥರನ್ನು ಬಿಡುಗಡೆಗೊಳಿಸಿರುವ ಕ್ರಮವನ್ನು ಸಮರ್ಥಿಸಿರುವ ಗುಜರಾತ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್ ಕುಮಾರ್ "ಅಪರಾಧಿಗಳು ಈಗಾಗಲೇ 14 ವರ್ಷ ಜೈಲಿನಲ್ಲಿ ಕಳೆದಿರುವುದರಿಂದ ಹಾಗೂ ಅವರ ವಯಸ್ಸು, ಅಪರಾಧದ ಸ್ವರೂಪ, ಜೈಲಿನಲ್ಲಿ ಅವರ ನಡವಳಿಕೆ ಮತ್ತಿತರ ಅಂಶಗಳನ್ನು ಪರಿಗಣಿಸಿ ಬಿಡುಗಡೆಗೊಳಿಸಲಾಗಿದೆ,''ಎಂದಿದ್ದಾರೆ.‌

ಇದನ್ನೂ ಓದಿ: ಬಿಲ್ಕಿಸ್‌ ಬಾನು ಪ್ರಕರಣದ ತಪ್ಪಿತಸ್ಥರ ಬಿಡುಗಡೆ: 'ಬಿಜೆಪಿಯ ಸಮಾಧಾನಕ ರಾಜಕಾರಣ' ಎಂದ ಉವೈಸಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News