ಇಡಿಯಿಂದ ಆಸ್ತಿ ಮುಟ್ಟುಗೋಲು ವಿರುದ್ಧ ದಿಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ ಪತ್ರಕರ್ತೆ ರಾಣಾ ಅಯ್ಯೂಬ್

Update: 2022-08-17 15:29 GMT

ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದನ್ನು ಪ್ರಶ್ನಿಸಿ ಪತ್ರಕರ್ತೆ ರಾಣಾ ಅಯ್ಯೂಬ್ (Rana Ayyub) ಬುಧವಾರ ದಿಲ್ಲಿ ಹೈಕೋರ್ಟ್‌ನಲ್ಲಿ(Delhi Highcourt) ಅರ್ಜಿ ಸಲ್ಲಿಸಿದ್ದಾರೆ ಎಂದು ಐಎಎನ್‌ಎಸ್ ವರದಿ ಮಾಡಿದೆ.

ಜಾರಿ ನಿರ್ದೇಶನಾಲಯವು ರಾಣಾ ಅಯ್ಯೂಬ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ ಮತ್ತು ಆನ್‌ಲೈನ್ ನಿಧಿಸಂಗ್ರಹ (Online Fundrising) ವೇದಿಕೆಯ ಮೂಲಕ ಚಾರಿಟಿಗಾಗಿ(Charity) ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ. ಫೆಬ್ರವರಿಯಲ್ಲಿ, ಜಾರಿ ನಿರ್ದೇಶನಾಲಯವು ಅವರ 1.77 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿತ್ತು.

ತನ್ನ ಅರ್ಜಿಯಲ್ಲಿ, ರಾಣಾ ಅಯ್ಯೂಬ್‌, ಆಸ್ತಿಯನ್ನು ಜಪ್ತಿ ಮಾಡುವ ತಾತ್ಕಾಲಿಕ ಆದೇಶವನ್ನು ಫೆಬ್ರವರಿ 4 ರಂದು ಅಂಗೀಕರಿಸಲಾಗಿದೆ ಮತ್ತು 180 ದಿನಗಳು ಪೂರ್ಣಗೊಂಡ ನಂತರ ಅವಧಿ ಮುಗಿದಿದೆ ಎಂದು ವಾದಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ನಿಬಂಧನೆಗಳ ಪ್ರಕಾರ, ಜಪ್ತಿ ಮಾಡಿರುವ ಆಸ್ತಿಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಇನ್ನು ಮುಂದೆ ತನ್ನ ವಿರುದ್ಧ ವಿಚಾರಣೆ ನಡೆಸುವ ಅಧಿಕಾರವನ್ನು ಹೊಂದಿಲ್ಲ ಎಂದು ಅವರು ವಾದಿಸಿದ್ದಾರೆ.

ನ್ಯಾಯಾಲಯವು ನವೆಂಬರ್ 17 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

ಎಪ್ರಿಲ್ 4 ರಂದು, ಅಯ್ಯೂಬ್ ವಿರುದ್ಧ ಲುಕ್ಔಟ್ ನೋಟೀಸ್(Look-out Notice) ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಲಂಡನ್ ಗೆ ವಿಮಾನ ಹತ್ತುವುದನ್ನು ತಡೆದ ಕೆಲವು ದಿನಗಳ ನಂತರ, ಹೈಕೋರ್ಟ್ ದೇಶವನ್ನು ತೊರೆಯಲು ಅನುಮತಿ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News