ಕಾಬೂಲ್ ಮಸೀದಿಯಲ್ಲಿ ಸ್ಫೋಟ; ಹಲವು ಮಂದಿ ಮೃತಪಟ್ಟಿರುವ ಶಂಕೆ

Update: 2022-08-18 15:45 GMT

  

ಕಾಬೂಲ್, ಆ.17: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಖೈಯರ್ ಖಾನಾ ಪ್ರದೇಶದಲ್ಲಿರುವ ಮಸೀದಿಯಲ್ಲಿ ಬುಧವಾರ ಸಂಜೆ ಸಂಭವಿಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಲ್ಲಿ ಮಸೀದಿಯ ಇಮಾಮ್ ಮಲ್ಲಾ ಅಮೀರ್ ಮುಹಮ್ಮದ್ ಕಾಬೂಲಿ ಸಹಿತ 21 ಮಂದಿ ಮೃತಪಟ್ಟಿದ್ದು ಇತರ 33 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಆತ್ಮಹತ್ಯಾ ಬಾಂಬರ್ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಮದರಸಕ್ಕೆ ಹೊಂದಿಕೊಂಡಿರುವ ಸಿದಿಖಿಯಾ ಮಸೀದಿಯಲ್ಲಿ ಬುಧವಾರ ಸಂಜೆ ಸಂಭವಿಸಿದ ಬಾಂಬ್ ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ವಹಿಸಿಲ್ಲ ಎಂದು ತಾಲಿಬಾನ್ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ. ಮಸೀದಿಯಲ್ಲಿ ಸಂಭವಿಸಿದ ಸ್ಫೋಟದಿಂದ ಪಕ್ಕದಲ್ಲಿದ್ದ ಕಟ್ಟಡದ ಕಿಟಕಿ ಗಾಜುಗಳೂ ಪುಡಿಯಾಗಿವೆ. ತಕ್ಷಣ ಆಂಬ್ಯುಲೆನ್ಸ್ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.

ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿರುವುದರಿಂದ ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದು ಕಾಬೂಲ್ ಪೊಲೀಸ್ ವಕ್ತಾರ ಖಾಲಿದ್ ಝರ್ದಾನ್ ಹೇಳಿದ್ದಾರೆ. ಅಪರಾಧಿಗಳನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News