ಶೈಕ್ಷಣಿಕ ಸಂಸ್ಥೆಗಳಲ್ಲಿ ಗಣೇಶ ಚತುರ್ಥಿ ಹೆಸರಲ್ಲಿ ತಾರತಮ್ಯಕ್ಕೆ ಮುಸ್ಲಿಂ ಒಕ್ಕೂಟ ಖಂಡನೆ

Update: 2022-08-18 13:18 GMT
ಕೆ. ಅಶ್ರಫ್

ಮಂಗಳೂರು, ಆ.18: ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ಸಂಕೇತಗಳನ್ನು ಪ್ರದರ್ಶಿಸುವಂತಿಲ್ಲ ಎಂದು ರಾಜ್ಯ ಹೈಕೋರ್ಟ್ ಇತ್ತೀಚೆಗೆ ಹಿಜಾಬ್‌ಗೆ ಸಂಬಂಧಿಸಿದ ನೀಡಿದ ತೀರ್ಪಿನ ಬಳಿಕವೂ ಸರಕಾರ ಶಾಲೆಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುಕ್ತ ಅವಕಾಶವಿದೆ ಎಂದು ಆದೇಶಿಸಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರಕಾರದ ಈ ನಡೆಯು ಹೈಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಈಗಾಗಲೇ ರಾಜ್ಯದ ಜನತೆ ಸರಕಾರಿ ಪ್ರೇರಿತ ಮತೀಯ ತಾರತಮ್ಯ ನೀತಿಯಿಂದ ಬೇಸತ್ತಿದ್ದಾರೆ. ಜನರ ನೈಜ ಮೂಲಭೂತ ಸಮಸ್ಯೆಗಳ ಬಗ್ಗೆ ಪರಿಹಾರ ಲಭಿಸದೆ, ನಿರುದ್ಯೋಗ, ಬೆಲೆಯೇರಿಕೆಯಂತಹ ಸಮಸ್ಯೆಗಳಿಂದ ರೋಸಿ ಹೋಗಿದ್ದಾರೆ. ಜನರ ನೈಜ ಆವಶ್ಯಕತೆಗಳನ್ನು ಸರಕಾರ ಪೂರೈಸದೆ ಜನರು ಸರಕಾರದ ವಿರುದ್ಧ ರೊಚ್ಚಿಗೆದ್ದು ಬಿಜೆಪಿ ಆಡಳಿತವನ್ನು ಸರಾಸಗಟಾಗಿ ತಿರಸ್ಕರಿಸಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ.

ಸಚಿವ ಮಾಧುಸ್ವಾಮಿ ತಮ್ಮ ಆಡಿಯೋದಲ್ಲಿ ಸರಕಾರವನ್ನು ಇನ್ನೆಂಟು ತಿಂಗಳು ಮ್ಯಾನೇಜ್ ಮಾಡಿ ದೂಡುತ್ತಿದ್ದೆವೆ ಎಂದು ಹೇಳಿಕೆ ನೀಡಿ ರಾಜ್ಯದಲ್ಲಿ ಸರಕಾರ ಅಸ್ತಿತ್ವದಲ್ಲಿ ಇಲ್ಲ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇಂತಹ ಬೆಳವಣಿಗೆಗಳಿಂದ ಕಂಗಾಲಾಗಿರುವ ಬಿಜೆಪಿ ಜನರನ್ನು ಮತೀಯವಾಗಿ ವಿಂಗಡಿಸುತ್ತಿದೆ ಎಂದು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News