ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ: 14ನೇ ವರ್ಷದ ಭೂಮಿ ಹಬ್ಬ ಆಚರಣೆ

Update: 2022-08-18 15:13 GMT

ಕುಂದಾಪುರ, ಆ.18:ಪ್ರಕೃತಿಯ ಜೊತೆಗೆ ಅನ್ಯೋನ್ಯವಾಗಿ ಬದುಕುವ ಕೊರಗ ಸಮುದಾಯದವರಿಗೆ ಭೂಮಿ ಸಿಕ್ಕರೆ ಅವರದನ್ನು ಖಂಡಿತವಾಗಿ ಅಭಿವೃದ್ದಿ ಪಡಿಸಿಕೊಂಡು ಬದುಕು ಕಟ್ಟಿಕೊಳ್ಳುತ್ತಾರೆ. ಕೊರಗ ಸಮುದಾಯದ ಆಚರಣೆ ಗಳು, ಸಂಸ್ಕೃತಿ, ಆಹಾರ, ಆಚಾರ-ವಿಚಾರ ಮೊದಲಾದ ಸಂಸ್ಕಾರಗಳನ್ನು ಪರಿಚಯಿಸುವ ಜೊತೆಗೆ ಸಮಾಜದ ಸಮಸ್ಯೆ ಪರಿಹರಿಸಿಕೊಳ್ಳಲು ಭೂಮಿ ಹಬ್ಬ ಆಚರಣೆಯಂತಹ ಕಾರ್ಯಕ್ರಮ ಸಹಕಾರಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅಭಿಪ್ರಾಯಪಟ್ಟಿದ್ದಾರೆ.

ಕುಂದಾಪುರದ ಡಾ.ಬಿ.ಆರ್.ಅಂಬೇಡ್ಕರ್ ಸಭಾಭವನದಲ್ಲಿ ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಗುರುವಾರ ಜರುಗಿದ 14ನೇ ವರ್ಷದ ಭೂಮಿ ಹಬ್ಬವನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಡೋಲು ಬಡಿಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಸಮಾಜದ ಕಟ್ಟಕಡೆಯ ಜನರ ಬದುಕು ಸುಧಾರಿಸಬೇಕು ಎನ್ನುವ ಉದ್ದೇಶ ದಿಂದ ಕೊರಗ ಸಮಾಜದವರ ಜೀವನ ಮಟ್ಟ ಸುಧಾರಿಸಲು ಇಲಾಖೆ ಹಲವು ಯೋಜನೆಗಳನ್ನು ರೂಪಿಸಿದೆ. ಆದರೆ ಇದು ಅಧಿಕಾರಿಗಳಿಂದ ಮಾತ್ರ ಯಶಸ್ವಿ ಯಾಗುವುದಿಲ್ಲ. ಯೋಜನೆಯ ಯಶಸ್ಸಿಗೆ ಸಾಮೂಹಿಕ ಸಹಕಾರ ಹಾಗೂ ಸಹಭಾಗಿತ್ವ ಅತ್ಯಗತ್ಯ ಎಂದರು.

ಕೊರಗ ಸಮಾಜದ ವಿದ್ಯಾರ್ಥಿಗಳು ಹಾಲಿ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ್ದು, ಶೇ.90ಕ್ಕಿಂತಲೂ ಅಧಿಕ ಅಂಕ ಪಡೆದು ಶೈಕ್ಷಣಿಕ ಪ್ರಗತಿ ಸಾಧಿಸಿ ಜಿಲ್ಲೆಗೆ ಹೆಸರು ತಂದಿದ್ದಾರೆ. ಕೊರಗ ಕಾಲನಿಯಲ್ಲಿಯೇ ಅಲ್ಲಿನ ವಿದ್ಯಾರ್ಥಿಗಳಿಗೆ ಮನೆಪಾಠ ಹೇಳುವ ಯೋಜನೆಯನ್ನು ರೂಪಿಸಲಾಗಿದೆ. ಶೈಕ್ಷಣಿಕ ಯೋಜನೆ ಜೊತೆಗೆ ಆರ್ಥಿಕವಾಗಿ ಸಮುದಾಯವನ್ನು ಸದೃಢ ರನ್ನಾಗಿಸಲು ಹೈನುಗಾರಿಕೆ, ಕೋಳಿ-ಕುರಿ ಸಾಕಾಣಿಕೆಗೆ ಪ್ರೋತ್ಸಾಹ ನೀಡಿ ಅಗತ್ಯ ಸಹಕಾರ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಬೆಳ್ವೆ ಅಮ್ಮಣ್ಣಿ ಕೊರಗ, ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ ವಿ., ಕೊರಗ ಸಮಾಜದ ಪ್ರಥಮ ಪಿಹೆಚ್ಡಿ ಪದವಿ ಪಡೆದ ಮಹಿಳೆ ಸಬಿತಾ ಗುಂಡ್ಮಿ, ಉಡುಪಿ ಜಿಲ್ಲಾ ಐಟಿಡಿಪಿ ಯೋಜನಾ ಸಮನ್ವಯಧಿಕಾರಿ ದೂದ್‌ಪೀರ್, ಕುಂದಾಪುರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್. ವರ್ಣೇಕರ್, ಕುಂದಾಪುರ ತಾಲೂಕು ಆಸ್ಪತ್ರೆ ವೈದ್ಯ ಡಾ. ನಾಗೇಶ್, ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಕುಂದಾಪುರ ನಗರ ಕೊರಗ ಅಭಿವೃದ್ಧಿ ಸಂಘ ಅಧ್ಯಕ್ಷ ಶೇಖರ ಕೊರಗ, ಜಿಲ್ಲಾ ಕೊರಗ ಸಮಿತಿ ಮಾಜಿ ಅಧ್ಯಕ್ಷ ಬೊಗ್ರ ಕೊರಗ, ಶೋಭಾ ಬಂಟ್ವಾಳ, ಕಾಸರಗೋಡು ಜಿಲ್ಲಾ ಪ್ರತಿನಿಧಿ ಗೋಪಾಲ ಕೊರಗ, ಪುತ್ತೂರು ಪ್ರತಿನಿಧಿ ಸುರೇಶ್ ಇದ್ದರು.

ಕಾರ್ಯಕ್ರಮದಲ್ಲಿ ಈ ಬಾರಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಕೊರಗ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಭೂಮಿ ಹಬ್ಬದ ಉಸ್ತುವಾರಿ ಸಮಿತಿ ಅಧ್ಯಕ್ಷ ಹಾಗೂ ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್ ವಿ., ಮರವಂತೆ ಗ್ರಾಪಂ ಅಧ್ಯಕ್ಷೆ ರುಕ್ಮಿಣಿ ಅವರನ್ನು ಗೌರವಿಸಲಾಯಿತು.

ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್. ತೆಂಗಿನ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊರಗ ಸಮಾಜ ಹಿರಿಯ ಮಹಿಳೆ ಗೌರಿ ಕೊರಗ ಭೂಮಿ ಹಬ್ಬದ ಜ್ಯೋತಿ ಬೆಳಗಿದರು. ಕೊರಗ ಸಮಾಜದ ಸಂಪ್ರದಾಯದಂತೆ ಬೇಬಿ ವಂಡ್ಸೆ ಮತ್ತು ಗಿರಿಜಾ ಜನ್ನಾಡಿ ಸವಿಜೇನು ಹಂಚಿದರು.

ಮತ್ತಾಡಿ ಕಾಯರಪಲ್ಕೆ ಮತ್ತು ಸುಶೀಲಾ ನಾಡ ಭೂಮಿ ಹಬ್ಬದ ಸಂದೇಶ ತಿಳಿಸಿದರು. ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ-ಕೇರಳದ ಕಾರ್ಯದರ್ಶಿ ಕೆ. ಪುತ್ರನ್ ಹೆಬ್ರಿ ಪ್ರಾಸ್ತಾವಿಕ ಮಾತನಾಡಿದರು. ಸುನಂದ ಮತ್ತು ತಂಡ ಧ್ಯೇಯ ಗೀತೆ ಹಾಡಿದರು. ಸುರೇಂದ್ರ ಕಳ್ತೂರು ಹಾಗೂ ವಿಮಲಾ ಕಳ್ತೂರು ನಿರೂಪಿಸಿ, ಕೊರಗ ಅಭಿವೃದ್ಧಿ ಸಂಘ ಕೊಕ್ಕರ್ಣೆಯ ಕಾರ್ಯದರ್ಶಿ ಸುಚಿತ್ರಾ ವಂದಿಸಿದರು.

ಶಾಸ್ತ್ರಿ ವೃತ್ತದಿಂದ ನಗರದಲ್ಲಿ ಮೆರವಣಿಗೆ
ಕುಂದಾಪುರ ಶಾಸ್ತ್ರಿ ವೃತ್ತದಿಂದ ನಗರದಲ್ಲಿ ಸಾಗಿದ ಭೂಮಿಹಬ್ಬದ ಮೆರವಣಿಗೆ ಅಂಬೇಡ್ಕರ್ ಭವನದಲ್ಲಿ ಸಮಾಪನಗೊಂಡಿತು. ಶಾಸ್ತ್ರಿ ವೃತ್ತದಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಡೋಲು ಬಡಿದು ಮೆರವಣಿಗೆ ಉದ್ಘಾಟಿಸಿದರು. ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಭೂಮಿ ಹಬ್ಬದ ನಿಮಿತ್ತ ಕೊರಗ ಸಮಾಜದ ವಿವಿಧ ತಂಡಗಳಿಂದ ಡೋಲು, ಚಂಡೆ, ಕೊಳಲು ವಾದನ ನಡೆದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News