​ಬಾಲಕಾರ್ಮಿಕ, ಕಿಶೋರ ಕಾರ್ಮಿಕ ಮಕ್ಕಳ ತಪಾಸಣೆ ನಡೆಸಿ ಸೆ.10ರೊಳಗೆ ವರದಿ ನೀಡಿ: ಉಡುಪಿ ಡಿಸಿ ಕೂರ್ಮಾರಾವ್ ಸೂಚನೆ

Update: 2022-08-18 18:24 GMT

ಉಡುಪಿ, ಆ.18: ಕಾರ್ಮಿಕ ಇಲಾಖೆಯಿಂದ ನಡೆಸಿದ ಸಮೀಕ್ಷೆಯಲ್ಲಿ ಪತ್ತೆ ಮಾಡಲಾದ ಮಕ್ಕಳ ಪಟ್ಟಿಯನ್ನು ತರಬೇತಿಯಲ್ಲಿ ಹಾಜರಾದ ನಿರೀಕ್ಷಕರಿಗೆ ನೀಡಲಾಗಿದ್ದು, ಪಟ್ಟಿಯಲ್ಲಿರುವ ಮಕ್ಕಳ ಪುನರ್ ಪರಿಶೀಲನೆ ನಡೆಸಿ ವರದಿ ಯನ್ನು ಕ್ರೋಢೀಕರಿಸಿ, ತಮ್ಮ ಕಾರ್ಯವ್ಯಾಪ್ತಿಯ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ ತಪಾಸಣೆ ನಡೆಸಿ ಸೆಪ್ಟೆಂಬರ್ 10ರೊಳಗೆ ಕಾರ್ಮಿಕ ಇಲಾಖೆಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದ್ದಾರೆ.

ಮಣಿಪಾಲದ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣ ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬಾಲ್ಯಾವಸ್ಥೆಯ ಮತ್ತು ಕಿಶೋರಾವಸ್ಥೆಯ ಕಾರ್ಮಿಕ ಕಾಯ್ದೆ, 1986ರ ತಿದ್ದುಪಡಿ ಕಾಯ್ದೆ 2016ರ ಕುರಿತು ಕಾಯ್ದೆಯ ಕಲಂ-16 ಮತ್ತು ಕಲಂ-17ರಡಿ ನೇಮಕಗೊಂಡ ನಿರೀಕ್ಷಕರಿಗೆ ಬುಧವಾರ ಆಯೋಜಿಸಿದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಮಾತನಾಡಿ, ಈ ಸಾಲಿನಲ್ಲಿ ಕಾಪು, ಬ್ರಹ್ಮಾವರ ಮತ್ತು ಉಡುಪಿ ವ್ಯಾಪ್ತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕಲಂ-17ರಡಿ ನೇಮಕಗೊಂಡ ಉಳಿದ ತಾಲೂಕುಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೂ ತರಬೇತಿಯನ್ನುಆಯೋಜಿಸುವುದರ ಮೂಲಕ ಉಡುಪಿ ಜಿಲ್ಲೆಯನ್ನು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವ ಪ್ರಯತ್ನ ನಡೆಸಬೇಕು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕಿ ಅಮೃತ ಮ್ತತಿತರರು ಉಪಸ್ಥಿತರಿದ್ದರು.

ಕಾರ್ಮಿಕ ಅಧಿಕಾರಿ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಂಗಳೂರಿನ ವಕೀಲ ನಿಖೇಶ್ ಶೆಟ್ಟಿ, ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ಕಾಯ್ದೆ ಅನುಷ್ಠಾನದ ಕುರಿತು ತರಬೇತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News