ಸಾವರ್ಕರ್ ಬ್ರಿಟಿಷರಿಗೆ ‘ನಾನು ನಿಮ್ಮ ಸೇವಕ’ ಎಂದಿದ್ದರು!

Update: 2022-08-19 03:51 GMT

ನಾಡಿನ ಯುವಜನರು, ವಿವೇಕವಂತರು ತುಸು ಆಸಕ್ತಿವಹಿಸಿ ಮೂಲ ಇತಿಹಾಸದ ಪುಟಗಳನ್ನು ಅಧ್ಯಯನ ಮಾಡಿ ಸತ್ಯವೇನೆಂದು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಬಾಬಾ ಸಾಹೇಬರು ಹೇಳಿದಂತೆ ‘‘ಇತಿಹಾಸವನ್ನು ಅರಿಯದವರು ಇತಿಹಾಸವನ್ನು ನಿರ್ಮಾಣ ಮಾಡಲಾರರು’’ ಎಂದಾಗುತ್ತದೆ. ವಿವೇಕ ಇರುವವರು ಸರಿಯಾದ ದಿಕ್ಕಿನಲ್ಲಿ ಇತಿಹಾಸವನ್ನು ಅರ್ಥ ಮಾಡಿಕೊಳ್ಳದಿದ್ದರೆ ಸುಳ್ಳುಗಳು ಸತ್ಯವಾಗುತ್ತವೆ ಸತ್ಯಗಳನ್ನು ಸುಳ್ಳುಗಳೆಂದು ಬಿಂಬಿಸುವ ದೆವ್ವಗಳು ಸಮಾಜದಲ್ಲಿ ಕುಣಿಯಲಾರಂಭಿಸುತ್ತವೆ.



ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು, ಬ್ರಿಟಿಷರಿಗೆ ಗುಲಾಮಗಿರಿ ಮಾಡಿದವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಇತಿಹಾಸವನ್ನು ತಿರುಚುವ ದುಷ್ಟ ಹುನ್ನಾರವನ್ನು ಬಿಜೆಪಿ ಮುಂದುವರಿಸಿದೆ. ತಮ್ಮ ರಾಜಕೀಯ ಅಜೆಂಡಾಗಳಿಗೆ ಯಾವೊಬ್ಬ ಪೂರ್ವಸೂರಿಯೂ ಗತಿಯಿಲ್ಲ ಎಂಬುದನ್ನು ಬಿಜೆಪಿ ಪದೇ ಪದೇ ತೋರ್ಪಡಿಸುತ್ತಿದೆ.

 ಬಿಜೆಪಿಯವರು ಮೊದಲು ಭಗತ್‌ಸಿಂಗ್‌ರನ್ನು ಆಶ್ರಯಿಸಿದರು. ಆದರೆ ನಿಜವಾದ ಸ್ವಾತಂತ್ರ್ಯವೀರ, ಮಹಾನ್ ದೇಶಪ್ರೇಮಿಯಾಗಿದ್ದ, ಚಿಂತನೆಗಳಲ್ಲಿ ಹುಟ್ಟಾ ಎಡಪಂಥೀಯರಾಗಿದ್ದ, ಸಮಾಜವಾದಿಯಾಗಿದ್ದ ಮತ್ತು ‘ನಾನೇಕೆ ನಾಸ್ತಿಕ?’ ಎಂದು ಪುಸ್ತಕ ಬರೆದ ಭಗತ್‌ಸಿಂಗ್‌ರು ತಮ್ಮ ಪುರೋಹಿತಶಾಹಿ, ಸನಾತನವಾದಿ ಮತ್ತು ತಾರತಮ್ಯವಾದಿ ಕೊಳಕು ಮನಸ್ಥಿತಿಗೆ ಸಂಪೂರ್ಣ ವಿರುದ್ಧವಾದ ನಿಲುವು ಹೊಂದಿದ್ದರು. ಮಹಾ ಮಾನವತಾವಾದಿಯೂ, ಸಮಾನತಾವಾದಿಯೂ ಆಗಿದ್ದ ಭಗತ್‌ಸಿಂಗ್‌ರ ಚಿಂತನೆಗಳು ತಮಗೆ ಢಿಕ್ಕಿ ಹೊಡೆದು ಪುಡಿ ಮಾಡುತ್ತಿವೆ ಎಂದ ಕೂಡಲೇ ಅವರನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು.
ಕೆಲವು ಕಾಲ ಸ್ವಾಮಿ ವಿವೇಕಾನಂದರನ್ನು ಗುತ್ತಿಗೆ ತೆಗೆದುಕೊಂಡವರಂತೆ ಓಡಾಡಿದರು. ಆದರೆ ಸ್ವಾಮಿ ವಿವೇಕಾನಂದರು ಈ ದೇಶದ ಎಲ್ಲ ಶಾಪಗಳಿಗೆ ಸ್ಥಗಿತತೆಯಲ್ಲಿ, ಅಮಾನವೀಯತೆಯಲ್ಲಿ ಕೊಳೆಯುತ್ತಿರುವ ಮನುವಾದಿಗಳಾದ ಪುರೋಹಿತಶಾಹಿಗಳೇ ಕಾರಣ ಹಾಗಾಗಿ ಅವರನ್ನು ಕಡಲುಗಳಾಚೆಗೆ ಎಸೆದರೆ ಮಾತ್ರ ಇಲ್ಲಿ ನೆಮ್ಮದಿ ಸಾಧ್ಯ ಎಂದಿದ್ದರು, ಹಾಗಾಗಿ ನಿಧಾನಕ್ಕೆ ಬಿಜೆಪಿಯವರು ಸ್ವಾಮಿ ವಿವೇಕಾನಂದರನ್ನೂ ಬಿಟ್ಟುಕೊಟ್ಟರು.

ಒಂದಷ್ಟು ಕಾಲ ಸುಭಾಷ್ ಚಂದ್ರ ಬೋಸರನ್ನು ಆತುಕೊಂಡರು. ಆದರೆ ಬೋಸರು ತಮ್ಮ ಸೈನ್ಯದ ತುಕಡಿಗಳಿಗೆ ಗಾಂಧೀಜಿ, ನೆಹರೂ, ಆಝಾದ್, ಸುಭಾಷ್ ಮತ್ತು ಝಾನ್ಸಿ ಬ್ರಿಗೇಡುಗಳೆಂದು ನಾಮಕರಣ ಮಾಡಿ ತಮ್ಮ ಹಿರಿಯ ಹಾಗೂ ಓರಗೆಯ ನಾಯಕರನ್ನು ಗೌರವಿಸಿದರು. ಗಾಂಧೀಜಿಯವರನ್ನು ಬಾಪೂ ಎಂದು ಮೊದಲು ಕರೆದಿದ್ದೆ ಸುಭಾಷ್‌ಚಂದ್ರರು ಕೊಲ್ಕೊತಾ ಮೇಯರ್ ಆಗುವ ಅವಕಾಶ ಬಂದಾಗ ಹಿಂದೂ ಮಹಾ ಸಭಾ ಬೆಂಬಲ ಕೊಡುತ್ತೇನೆ ಎಂದಾಗ ಯಾವುದೇ ಕಾರಣಕ್ಕೂ ಕೋಮುವಾದಿಗಳ ಬೆಂಬಲ ಬೇಡವೆಂದರು. ಸುಭಾಷರ ಫಾರ್ವರ್ಡ್ ಬ್ಲಾಕ್ ಸಂಪೂರ್ಣವಾಗಿ ಸೋಷಿಯಲಿಸ್ಟ್ ಆದರ್ಶಗಳನ್ನು ಮೈಗೂಡಿಸಿಕೊಂಡಿತ್ತು. ಅದು ಇವತ್ತಿಗೂ ಹಾಗೆಯೇ ಇದೆ. ಸುಭಾಷರ ಐಎನ್‌ಎಯ ನಾಯಕರ, ಸೈನಿಕರ ಕುರಿತು ಬ್ರಿಟಿಷರು ವಿಚಾರಣೆ ಪ್ರಾರಂಭ ಮಾಡಿದಾಗ ತಾನೇ ವಕಾಲತ್ತು ವಹಿಸುತ್ತೇನೆಂದು ಪಂಡಿತ್ ಜವಾಹರ್ ಲಾಲ್ ನೆಹರೂರವರು ಸ್ವತಃ ಕರಿಕೋಟು ಹಾಕಿಕೊಂಡು ಮುನ್ನಡೆದಾಗ ಆಗಿನ ಹಿರಿಯ ವಕೀಲರು ಮುಂದೆ ಬಂದರು. ಟಾಗೋರರು ರಚಿಸಿದ ಜನಗಣಮನವನ್ನು ರಾಷ್ಟ್ರಗೀತೆಯಾಗಿ ಮಾಡಿದ್ದೇ ಸುಭಾಷ್‌ಚಂದ್ರ ಬೋಸ್. ಬೋಸರು ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟಿ ಹೋರಾಟ ಮಾಡಲು ದೇಶ ವಿದೇಶಗಳಲ್ಲಿ ಜೀವದ ಭಯ ತೊರೆದು ಓಡಾಡುತ್ತಿದ್ದಾಗ, ಕಾಂಗ್ರೆಸ್ ಸಂಘಟನೆಯ ನಾಯಕರು ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ ನಡೆಸುತ್ತಿದ್ದಾಗ, ದೇಶ ಭಕ್ತರೆಂದು ಹೇಳಿಕೊಳ್ಳುವ ಸಾವರ್ಕರ್ ಅವರು ‘‘ಬ್ರಿಟಿಷರೇ ನಾವು ನಿಮ್ಮ ಜೊತೆ ಇದ್ದೇವೆ’’ ಎಂದು ಹೇಳಿ ಬ್ರಿಟಿಷರ ಯುದ್ಧಕ್ಕೆ ಬೇಕಾದ ಸೈನ್ಯದ ನೇಮಕಾತಿಗೆ ಬೆಂಬಲವಾಗಿ ನಿಂತರು. ಇದೆಲ್ಲ ಬಿಜೆಪಿಯವರಿಗೆ ಯಾರಾದರೂ ಹೇಳಿಕೊಡಬೇಕಾಗಿದೆ. ಏನು ಮಾಡಿದರೂ ಯಾರೊಬ್ಬ ಪೂರ್ವಸೂರಿಯೂ ತಮ್ಮ ನೆರವಿಗೆ ಬರದಿದ್ದಾಗ ಮಾಮೂಲಿಯಂತೆ ಸಾವರ್ಕರ್‌ರನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಲು ಬಿಜೆಪಿಯವರು ಹೊರಟಿದ್ದಾರೆ. ಸರಕಾರ ಜನರ ತೆರಿಗೆಯಲ್ಲಿ ಜಾಹೀರಾತು ನೀಡುವಾಗ ತಮ್ಮ ಪಕ್ಷದ ಜಾಹೀರಾತಿನಂತೆ ನೀಡಿದೆ. ದೇಶದ ಪ್ರಜಾತಂತ್ರದ, ಸಂವಿಧಾನದ ಆಶಯ ಗಳನ್ನು ಸಮರ್ಥವಾಗಿ ಈಡೇರಿಸಿದ, ಅಭಿವೃದ್ಧಿಗೆ ಭದ್ರಬುನಾದಿ ಹಾಕಿದ ನೆಹರೂರವರನ್ನು ಬಿಜೆಪಿಯವರು ಸರಕಾರಿ ಜಾಹೀರಾತುಗಳಲ್ಲಿ ಕೈಬಿಟ್ಟಿದ್ದಾರೆ.
ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ, ದೇಶಪ್ರೇಮಿ ಎಂದು ಹೇಗೆ ಕರೆಯಬೇಕು? ಯಾಕೆ ಕರೆಯಬೇಕು? ಎಂದು ಬಿಜೆಪಿಯವರು ಹೇಳಬೇಕು. ಈ ಕುರಿತು ಮುಕ್ತವಾದ ಬಹಿರಂಗ ಚರ್ಚೆ ನಡೆಯಲಿ. ಆರೆಸ್ಸೆಸ್‌ಗೆ ಸಂಪೂರ್ಣ ತಲೆಬಾಗಿದ್ದೇನೆಂದು ಹೇಳುತ್ತಿರುವ ಬೊಮ್ಮಾಯಿಯವರೇ ಈ ಚರ್ಚೆಯ ನೇತೃತ್ವ ವಹಿಸಲಿ. ಸನಾತನವಾದಿ ಪುರೋಹಿತಶಾಹಿ ಮೌಲ್ಯಗಳು ಹಾಗೂ ದ್ವೇಷಯುತವಾದ ವಿಚಾರಗಳನ್ನು ಬಿಟ್ಟರೆ ಸಾವರ್ಕರ್ ಅವರಿಂದ ದೇಶದ ಜನರು ಏನು ಕಲಿಯಲು ಸಾಧ್ಯ?
 
 ಕೊಲೆ ಕೇಸೊಂದರಲ್ಲಿ ಜೈಲಿಗೆ ಹೋದ ಸಾವರ್ಕರ್ ಅವರು ಜೈಲಿಗೆ ಹೋದ ಮೇಲೆ ಯಾಕೆ ಒಂದಾದ ಮೇಲೊಂದು ಶರಣಾಗತಿಯ 6 ಪತ್ರಗಳನ್ನು ಬ್ರಿಟಿಷರಿಗೆ ಬರೆದರು? ‘‘ನಾನು ನಿಮ್ಮ ವಿನಮ್ರ ಸೇವಕ ಎಂದು ಯಾಕೆ ಬರೆದರು?’’ ‘‘ನನಗೆ ನೇಣು ಹಾಕಬೇಡಿ, ಬೇಕಿದ್ದರೆ ಗುಂಡು ಹೊಡೆದು ವೀರೋಚಿತವಾಗಿ ಎದುರಿಸಿ’’ ಎಂದು ಬ್ರಿಟಿಷರ ಎದುರು ನಿಂತು ಹುತಾತ್ಮರಾಗಿ ಸ್ವಾತಂತ್ರ್ಯ ಪ್ರೇಮಿ ಎನ್ನಿಸಿಕೊಂಡು ಭಾರತದ ಚರಿತ್ರೆಯಲ್ಲಿ ಅಜರಾಮರರಾದ ಭಗತ್ ಸಿಂಗ್‌ರೆಲ್ಲಿ, ‘‘ನಾನು ನಿಮ್ಮ ವಿನಮ್ರ ಸೇವಕ’’ ಎಂದ ಸಾವರ್ಕರ್‌ರೆಲ್ಲಿ? ಭಗತ್‌ಸಿಂಗರ, ಆಝಾದರ, ರಾಮ್ ಪ್ರಸಾದ್ ಬಿಸ್ಮಿಲ್ಲಾ ಅವರ, ಸುಭಾಷ್, ನೆಹರೂ, ಗಾಂಧೀಜಿ, ಸಂಗೊಳ್ಳಿ ರಾಯಣ್ಣ, ಹಲಗಲಿ ವೀರ ಬೇಡರ ಒಂದು ಅಂಶಕ್ಕಾದರೂ ಸಾವರ್ಕರ್ ಸಮನಾಗುವರೆ?

 ಸಾವರ್ಕರ್ ಅವರು ಬ್ರಿಟಿಷರಲ್ಲಿ ದಮ್ಮಯ್ಯ ಎಂದು ಬೇಡಿಕೊಂಡು ಜೈಲಿನಿಂದ ಬಿಡುಗಡೆಯಾದ ಮೇಲೆ ಮಾಡಿದ್ದೇನು? ತಮ್ಮ ಜೊತೆಯಲ್ಲಿ ಅಂಡಮಾನಿನ ಜೈಲಿನಲ್ಲಿದ್ದ ಕೈದಿಗಳ ಬಿಡುಗಡೆಗೆ ಹೋರಾಟ ಮಾಡಿದರೇ? ಸಾವರ್ಕರ್ ಏಕೆ ಬ್ರಿಟಿಷ್ ಸರಕಾರ ನೀಡುತ್ತಿರುವ ಪಿಂಚಣಿ ಹಣ ಸಾಕಾಗುತ್ತಿಲ್ಲ ಅದನ್ನು ಹೆಚ್ಚಿಸಿ ಎಂದು ದುಂಬಾಲು ಬಿದ್ದರು? ದೇಶದ ಜನ ಸಾಮಾನ್ಯರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡುತ್ತಿದ್ದಾಗ ಬ್ರಿಟಿಷರಲ್ಲಿ ಬೇಡಿಕೊಳ್ಳುವುದು ಸರಿಯೇ? ಬ್ರಿಟಿಷರಿಗಾಗಿ ಸೈನಿಕ ನೇಮಕಾತಿಗಳನ್ನು ತಾವೇ ಮುಂದೆ ನಿಂತು ಮಾಡಿಸಿ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನವನ್ನು ನಾವು ಹೇಗೆ ಮರೆಯಲು ಸಾಧ್ಯ? ದೇಶದ ಜನರಿಂದ ಯಾವ ನೈತಿಕ ನೆಲೆಗಟ್ಟಿನ ಮೇಲೆ ಸಹಾನು ಭೂತಿ, ಪ್ರೀತಿಯನ್ನು ನಿರೀಕ್ಷಿಸಲು ಸಾಧ್ಯ? ಒಂದು ಅಂದಾಜಿನ ಪ್ರಕಾರ 8,000ಕ್ಕೂ ಹೆಚ್ಚು ಜನ ಅಂಡಮಾನಿನ ಜೈಲುಗಳಲ್ಲಿ ತಮ್ಮ ಜೀವನವನ್ನು ದೇಶಕ್ಕಾಗಿ ತ್ಯಾಗ ಮಾಡಿದ ವೀರಯೋಧರೆಲ್ಲಿ? ಈ ಸಾವರ್ಕರ್‌ರೆಲ್ಲಿ?

ಇಂದಿನ ಬಿಜೆಪಿಯವರು ಒಂದೋ ಮೆದುಳು, ಹೃದಯಗಳನ್ನು ಕಳೆದುಕೊಂಡಿದ್ದಾರೆ ಮತ್ತು ಅಧಿಕಾರ ಲಾಲಸೆಗಾಗಿ ಬಲಿಬಿದ್ದು ಈ ನೆಲದ ಸಕಲ ಪರಂಪರೆಗೆ ದ್ರೋಹ ಬಗೆಯುತ್ತಿದ್ದಾರೆ. ಸಾವರ್ಕರ್‌ರ ‘ಎಸ್ಸೆನ್ಷಿಯಲ್ಸ್ ಆಫ್ ಹಿಂದುತ್ವ’ ಎಂಬ ದ್ವೇಷಕಾರಕ ಪುಸ್ತಕವೊಂದಿದೆ. ಆ ಪುಸ್ತಕವನ್ನು ಶೂದ್ರಾದಿ ಸಮುದಾಯಗಳಿಂದ ಬಿಜೆಪಿಗೆ ಹೋದವರು ಓದಬೇಕು. ಅದನ್ನು ಓದಿದ ನಂತರ ಸಾವರ್ಕರ್‌ರ ಬಗ್ಗೆ ಅವರು ಮಾತನಾಡಬೇಕು. ಯಾಕೆಂದರೆ ಸಾವರ್ಕರ್‌ರ ವಿಚಾರಗಳು ಬಸವಣ್ಣನವರು ಶರಣ ಸಿದ್ದರಾಮರು, ಜೇಡರ ದಾಸಿಮಯ್ಯನವರು, ಅಂಬಿಗರ ಚೌಡಯ್ಯನವರು, ಮಡಿವಾಳ ಮಾಚಿದೇವರು, ಮಾದಾರ ಚೆನ್ನಯ್ಯನವರು, ಡೋಹರ ಕಕ್ಕಯ್ಯನವರು, ಹಡಪದ ಅಪ್ಪಣ್ಣನವರು ಹಾಗೂ ಉಳಿದೆಲ್ಲ ಶರಣ ಚಿಂತಕರು, ಕನಕದಾಸರು, ನಾರಾಯಣಗುರುಗಳು, ಬಾಬಾಸಾಹೇಬ್ ಅಂಬೇಡ್ಕರರು, ಜಗಜೀವನ್‌ರಾಮ್ ಅವರು, ಕುವೆಂಪು ಅವರು, ಅಸಂಖ್ಯಾತ ತತ್ವಪದಕಾರರು ಮುಂತಾದವರು ತಮ್ಮ ಜೀವಿತಾವಧಿಯುದ್ದಕ್ಕೂ ಯಾವ ಪುರೋಹಿತಶಾಹಿ ಮೌಲ್ಯಗಳನ್ನು ವಿರೋಧಿಸಿ ಹೋರಾಟ ಮಾಡಿದ್ದರೋ ಅದೇ ಪುರೋಹಿತಶಾಹಿ, ಮನುವಾದಿ ಚಿಂತನೆಗಳನ್ನು ಸಾವರ್ಕರ್ ಪ್ರತಿಪಾದಿಸಿದ್ದಾರೆ ಹಾಗೂ ಹಿಂದೂ ಮಹಾಸಭಾ, ಆರೆಸ್ಸೆಸ್‌ಗಳು ಈಗಲೂ ಪ್ರತಿಪಾದಿಸುತ್ತಿವೆ. ಇಂತಹ ತತ್ವವನ್ನು ಅನುಷ್ಠಾನ ಮಾಡಲು ಬಿಜೆಪಿ ಎಂಬ ರಾಜಕೀಯ ಸಂಘಟನೆ ಹುಟ್ಟಿಕೊಂಡಿದೆ.
 
ಭಾರತ ವಿಭಜನೆಗೆ ನೆಹರೂ ಅವರು ಕಾರಣ ಎಂಬ ಸುಳ್ಳು ಸಿದ್ಧಾಂತ ವನ್ನು ಬಿಜೆಪಿಯವರು ತೇಲಿಬಿಡುತ್ತಿದ್ದಾರೆ. ವಾಸ್ತವವೇನೆಂದರೆ ಮೊತ್ತ ಮೊದಲಿಗೆ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಮಂಡಿಸಿದ್ದೇ ಸಾವರ್ಕರ್. 1937ರಲ್ಲಿ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ ಹಿಂದೂ ಮಹಾಸಭಾದ ಕಾರ್ಯಕ್ರಮದಲ್ಲಿ ಮೊದಲ ಬಾರಿ ಈ ಕುರಿತು ಮಾತನಾಡಿದರು. ಸಾವರ್ಕರ್ ಅವರು ಈ ಕುರಿತು ಮಾತನಾಡಿದ 3 ವರ್ಷಗಳ ನಂತರ ಮುಹಮ್ಮ್ಮದಲಿ ಜಿನ್ನಾ ಅವರು ದ್ವಿರಾಷ್ಟ್ರ ಸಿದ್ಧಾಂತವನ್ನು ಮಂಡಿಸಿದರು.

ಸಾವರ್ಕರ್ ಅವರು ಅಹಮದಾಬಾದಿನ ಹಿಂದೂ ಮಹಾಸಭಾದ ಅಧಿವೇಶನದಲ್ಲಿ ಹೇಳಿದ ಮಾತುಗಳಿವು: : ""India cannot be assumed today to be a Unitarian and homogeneous nation, but on the contrary, there are two nations in the main; the Hindus and the Moslems, in India''.  (ಭಾರತವನ್ನು ಇಂದು ಏಕರೂಪಿಯಾದ ರಾಷ್ಟ್ರವನ್ನಾಗಿ ಕಲ್ಪಿಸಿಕೊಳ್ಳುವುದು ಅಸಾಧ್ಯದ ಸಂಗತಿ ಯಾಕೆಂದರೆ ಇಲ್ಲಿ ಹಿಂದೂ-ಮುಸ್ಲಿಮ್ ಎಂಬ ಎರಡು ರಾಷ್ಟ್ರಗಳಿವೆ) ಎಂದಿದ್ದರು. ಸಾವರ್ಕರ್ ಇದನ್ನು ಹೇಳಿ 3 ವರ್ಷಗಳ ನಂತರ ಜಿನ್ನಾ ದ್ವಿರಾಷ್ಟ್ರ ಸಿದ್ಧಾಂತವನ್ನು ಮಂಡಿಸಿದರು.
 
 ಹಿಂದೂ ಮಹಾಸಭಾ, ಆರೆಸ್ಸೆಸ್ ಮತ್ತು ಮುಸ್ಲಿಮ್ ಲೀಗ್‌ಗಳು ಅವಳಿ ಜವಳಿಗಳಿದ್ದ ಹಾಗೆ. ಒಂದು ದೇಶ, ಒಂದು ಧರ್ಮ, ಒಂದು ಭಾಷೆ, ಒಂದು ಧಾರ್ಮಿಕ ಗ್ರಂಥ, ಒಬ್ಬರು ಧರ್ಮಪ್ರವರ್ತಕರು ಹೀಗೆ ಏಕರೂಪಿಯಾದ ರಾಷ್ಟ್ರ ಸಿದ್ಧಾಂತವನ್ನು ಈ ಇಬ್ಬರೂ ಮಂಡಿಸುತ್ತಿದ್ದರು. ಈ ವಿಚಾರದಲ್ಲಿ ಇಬ್ಬರದೂ ಒಂದೇ ನಿಲುವು ಆಗಿತ್ತು. ಪರಿಸ್ಥಿತಿ ಈಗಲೂ ಹಾಗೆಯೇ ಇದೆ. ಕೋಮುವಾದಿ ಸಂಘಟನೆಗಳಾಗಿರುವ ಪಿಎಫ್‌ಐ-ಎಸ್‌ಡಿಪಿಐ ಮತ್ತು ಆರೆಸ್ಸೆಸ್- ಬಿಜೆಪಿಗಳು ಅಂತರಂಗದಲ್ಲಿ ಸಖ್ಯ ಸ್ವಭಾವದ ನಿಲುವನ್ನು ಹೊಂದಿವೆ. ಈ ಎರಡೂ ಗುಂಪುಗಳು ಶಾಂತಿ, ನೆಮ್ಮದಿ ಬಯಸುವ ಬೃಹತ್ತಾದ ಜನ ಸಮುದಾಯಗಳ ಬದುಕಿಗೆ ಬೆಂಕಿ ಹಚ್ಚಿ, ಮೈ ಕಾಯಿಸಿಕೊಳ್ಳುವ ಕೆಲಸ ಮಾಡುತ್ತಿವೆ. ಈ ಏಕರೂಪಿಯಾದ ರಾಷ್ಟ್ರ ಮತ್ತು ಧರ್ಮ ಸಿದ್ಧಾಂತವನ್ನು ಆರೆಸ್ಸೆಸ್‌ನ ಮೂಂಜೆಯವರು ಇಟಲಿಯ ಮುಸ್ಸೊಲಿನಿಯವರಿಂದ ಸಿದ್ಧಾಂತವನ್ನು ಕಡತಂದರು. ಇಟಲಿಯಿಂದ ವಿಷದ ಸಿದ್ಧಾಂತವನ್ನು ತಂದು ಇಂದಿಗೂ ಅದನ್ನೇ ರಕ್ತಗತ ಮಾಡಿಕೊಂಡಿರುವ ಹಿಂದುತ್ವವಾದಿ ಸಂಘಟನೆಗಳು ಇಂದು ಕಾಂಗ್ರೆಸ್‌ನ ಮೇಲೆ ಆರೋಪ ಮಾಡುತ್ತಿವೆ.

ಸಾವರ್ಕರ್ ಎರಡು ರಾಷ್ಟ್ರದ ವಿಚಾರವನ್ನು ಮಂಡಿಸಿದ ಮೇಲೆ ಜಿನ್ನಾ ಈ ವಾದವನ್ನು ಸಮರ್ಥವಾಗಿ ಬಳಸಿಕೊಂಡರು. 1936-37ರಲ್ಲಿ ಪ್ರಾಂತೀಯ ಚುನಾವಣೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸಂಘಟನೆಯು ಬಹುಮತವನ್ನು ಪಡೆದಿತ್ತು. ವಾಯುವ್ಯ, ಸಿಂಧ್ ಪ್ರಾಂತಗಳಲ್ಲಿ ಮುಸ್ಲಿಮ್ ಲೀಗ್‌ಗೆ ಒಂದೇ ಒಂದು ಸೀಟು ಗಳಿಸಿಕೊಳ್ಳಲಾಗಲಿಲ್ಲ. ಪಂಜಾಬ್ ಪ್ರಾಂತಗಳಲ್ಲಿ ಒಂದೇ ಒಂದು ಸೀಟು ಗೆದ್ದಿತ್ತು. ಆ ಚುನಾವಣೆಯಲ್ಲಿ ಶೇ.5 ರಷ್ಟು ಮುಸ್ಲಿಮರು ಮಾತ್ರ ಮುಸ್ಲಿಮ್ ಲೀಗನ್ನು ಬೆಂಬಲಿಸಿದ್ದರು. ಬಂಗಾಲ ಪ್ರಾಂತದಲ್ಲಿ ಸಣ್ಣ ಬೆಂಬಲ ದೊರೆತಿತ್ತು. ಆದರೆ ಆಗ ಹಿಂದೂ ಮಹಾ ಸಭಾ ಮುಸ್ಲಿಮ್ ಲೀಗಿನೊಂದಿಗೆ ಸೇರಿಕೊಂಡು ಆಡಳಿತ ನಡೆಸಿತ್ತು. ಅಧಿಕಾರ ಲಾಲಸೆಗೆ ಬಿದ್ದಿದ್ದ ಸಾವರ್ಕರ್‌ರಿಗೆ ಮುಸ್ಲಿಮ್ ಲೀಗ್‌ನೊಂದಿಗೆ ಸೇರಿಕೊಂಡು ಸರಕಾರ ರಚಿಸಲು ಯಾವುದೇ ಸಮಸ್ಯೆ ಇರಲಿಲ್ಲ.

1936-37ರ ಚುನಾವಣೆಯ ದಯನೀಯ ಸೋಲಿನ ನಂತರ ಜಿನ್ನಾ ಅವರು, ಇಸ್ಲಾಮ್ ಅಪಾಯದಲ್ಲಿದೆ ಎಂದು ಬೊಬ್ಬೆ ಹಾಕತೊಡಗಿದರು. ಇದರ ಫಲವಾಗಿ 1945-46ರಲ್ಲಿ ನಡೆದ ಚುನಾವಣೆಗಳಲ್ಲಿ ಮುಸ್ಲಿಮ್ ಲೀಗ್ ಗಣನೀಯ ಸಾಧನೆ ಮಾಡಿತು. ಒಟ್ಟು 430 ಸ್ಥಾನಗಳಲ್ಲಿ 108 ಸ್ಥಾನಗಳಿಗಿಂತ ಹೆಚ್ಚು ಸೀಟುಗಳನ್ನು ಗೆದ್ದುಕೊಂಡಿತು. ಶೇ. 21ರಷ್ಟು ಮತಗಳನ್ನು ಗಳಿಸಿಕೊಂಡಿತು. ಆ ಮೂಲಕ ಪ್ರತ್ಯೇಕ ರಾಷ್ಟ್ರದ ಬೇಡಿಕೆಗೆ ಬಲ ಬಂದಂತಾಯಿತು.
 ಕಾಂಗ್ರೆಸ್ ಸಂಘಟನೆಯು 1942ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತೀವ್ರವಾಗಿ ತೊಡಗಿದ್ದಾಗ, ಹಿಂದೂ ಮಹಾಸಭಾ ಬ್ರಿಟಿಷರೊಂದಿಗೆ ಸೇರಿಕೊಂಡಿತ್ತು. ‘‘ಹಿಂದೂ ಮಹಾಸಭಾವು ನಿಮ್ಮಿಂದಿಗೆ (ಬ್ರಿಟಿಷರೊಂದಿಗೆ) ಜವಾಬ್ದಾರಿಯುತವಾದ ಸಹಕಾರವನ್ನು ನೀಡಲು ಸಿದ್ಧರಿದ್ದೇವೆ’’ ಎಂದು ಸಾವರ್ಕರ್ ಹೇಳಿದ್ದರು. ಈ ರೀತಿಯ ನಡವಳಿಕೆ ಸ್ವಾತಂತ್ರ್ಯ ವೀರರಿಗೆ ಲಾಯಕ್ಕಾದುದೆ? ಎಂದು ದೇಶದ ಜನರು ತೀರ್ಮಾನಿಸಬೇಕು.

ನಾಡಿನ ಯುವಜನರು, ವಿವೇಕವಂತರು ತುಸು ಆಸಕ್ತಿವಹಿಸಿ ಮೂಲ ಇತಿಹಾಸದ ಪುಟಗಳನ್ನು ಅಧ್ಯಯನ ಮಾಡಿ ಸತ್ಯವೇನೆಂದು ತಿಳಿದು ಕೊಳ್ಳಬೇಕು. ಇಲ್ಲದಿದ್ದರೆ ಬಾಬಾ ಸಾಹೇಬರು ಹೇಳಿದಂತೆ ‘‘ಇತಿಹಾಸವನ್ನು ಅರಿಯದವರು ಇತಿಹಾಸವನ್ನು ನಿರ್ಮಾಣ ಮಾಡಲಾರರು’’ ಎಂದಾಗುತ್ತದೆ. ವಿವೇಕ ಇರುವವರು ಸರಿಯಾದ ದಿಕ್ಕಿನಲ್ಲಿ ಇತಿಹಾಸವನ್ನು ಅರ್ಥ ಮಾಡಿಕೊಳ್ಳದಿದ್ದರೆ ಸುಳ್ಳುಗಳು ಸತ್ಯವಾಗುತ್ತವೆ ಸತ್ಯಗಳನ್ನು ಸುಳ್ಳುಗಳೆಂದು ಬಿಂಬಿಸುವ ದೆವ್ವಗಳು ಸಮಾಜದಲ್ಲಿ ಕುಣಿಯಲಾರಂಭಿಸುತ್ತವೆ.
 
ಈ ದೇಶದ ಇತಿಹಾಸವನ್ನು ಓದಿ ಅರ್ಥ ಮಾಡಿಕೊಂಡಿರುವವರು ಯಾರೂ ಸಾವರ್ಕರ್ ಅಂಥವರನ್ನು ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರೆಂದು ಕರೆಯಲು ಸಾಧ್ಯವಿಲ್ಲ. ಯಾಕೆಂದರೆ ಅವರು ಬ್ರಿಟಿಷರ ಜೊತೆ ಇದ್ದರು. ಜನರು ಬ್ರಿಟಿಷರ ಗುಂಡು, ಲಾಠಿ, ಫಿರಂಗಿಗಳಿಗೆ ಎದೆಯೊಡ್ಡಿ ನಿಂತಿದ್ದರು. ನಾಡಿನ ಯುವಜನರು ಎಚ್ಚೆತ್ತುಕೊಳ್ಳದೆ ಹೋದರೆ ಈ ನೆಲ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ. ಬಿಜೆಪಿಯವರು ದೇಶದ ಸಮಸ್ತವನ್ನೂ ಕಾರ್ಪೊರೇಟ್ ಧಣಿಗಳಿಗೆ ಕೊಟ್ಟು ರಾಜ್ಯ ಮತ್ತು ದೇಶದ ಆರ್ಥಿಕತೆಯನ್ನು ಸಂಪೂರ್ಣ ಬರ್ಬಾದು ಮಾಡುತ್ತಿದ್ದಾರೆ. ಯುವಕರು- ಹಿಂದುಳಿದವರು, ದಲಿತರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಭ್ರಷ್ಟಾಚಾರ ತುದಿಮುಟ್ಟಿದೆ. ಇವುಗಳನ್ನೆಲ್ಲ ಮರೆಮಾಚಿ ಬಿಜೆಪಿಯವರು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

Writer - ಸಿದ್ದರಾಮಯ್ಯ

contributor

Editor - ಸಿದ್ದರಾಮಯ್ಯ

contributor

Similar News