×
Ad

ಉಡುಪಿ ಜಿಲ್ಲಾ ಡಿ.ದೇವರಾಜ ಅರಸು ಪ್ರಶಸ್ತಿಗೆ ಮಲ್ಪೆ ರಾಘವೇಂದ್ರ ಆಯ್ಕೆ

Update: 2022-08-19 20:06 IST
ಮಲ್ಪೆ ರಾಘವೇಂದ್ರ

ಉಡುಪಿ : ಜಿಲ್ಲಾ ಮಟ್ಟದ ಪ್ರಥಮ ಡಿ. ದೇವರಾಜ ಅರಸು ಪ್ರಶಸ್ತಿಗೆ ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಮಲ್ಪೆ ರಾಘವೇಂದ್ರ ಆಯ್ಕೆಯಾಗಿದ್ದಾರೆ. ಇವರಿಗೆ ಆ.20ರಂದು ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಡಿ.ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮ ದಲ್ಲಿ 50,000ರೂ. ನಗದು ಹಾಗೂ ಫಲಕದೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಚಲನಚಿತ್ರ, ಸಾಹಿತ್ಯ, ಯಕ್ಷಗಾನ ಹೀಗೆ ಹಲವು ಕ್ಷೇತ್ರಗಳಲ್ಲಿ ದುಡಿದಿರುವ 88ರ ಹರೆಯದ ಮಲ್ಪೆ ರಾಘವೇಂದ್ರ, 40 ವರ್ಷ ಶಿಕ್ಷಕರಾಗಿ ದುಡಿದಿದ್ದು, ಕಾಜಾರಗುತ್ತು ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ 1992ರಲ್ಲಿ ನಿವೃತ್ತರಾಗಿದ್ದರು. 

1985ರಲ್ಲಿ ಜಿಲಾ ಮಟ್ಟದ ಶ್ರೇಷ್ಠ ಶಿಕ್ಷಕ, 1986ರಲ್ಲಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪಡೆದ ರಾಘವೇಂದ್ರ, 1987ರಲ್ಲಿ ರಾಷ್ಟ್ರಪತಿ ಆರ್. ವೆಂಕಟರಾಮನ್‌ರಿಂದ ರಾಷ್ಟ್ರಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಅದೇ ವರ್ಷ ರಾಷ್ಟ್ರೀಯ ಬಾಲಶಿಕ್ಷಾ ಪುರಸ್ಕಾರವನ್ನು ಸಹ ಅವರು ಪಡೆದಿದ್ದರು.

ಮಲ್ಪೆ ಗೋಳಿದಡಿ ಎಂಬ ಬಿಲ್ಲವ ಮನೆತನದಲ್ಲಿ ೧೯೩೪ರ ಮೇ ೧೮ರಂದು ಜನಿಸಿದ್ದ ರಾಘವೇಂದ್ರರ ತಂದೆ ಕಲ್ಮಾಡಿ ಕಿಟ್ಟ ಪೂಜಾರಿ ಹಾಗೂ ತಾಯಿ ರಾಮ ಪೂಜಾರ್ತಿ. ಸಮಾಜದ ದಲಿತ-ಹಿಂದುಳಿದವರನ್ನು ಶಿಕ್ಷಿತರನ್ನಾಗಿ ಮಾಡುವ ಗುರಿಯೊಂದಿಗೆ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿದ ಅವರು ೧೯೫೨ರಲ್ಲಿ ಶಿಕ್ಷಕ ತರಬೇತು ಪಡೆದು ಕುದ್ರುಕೆರೆ, ಬೊಮ್ಮಾರಬೆಟ್ಟು, ಮಲ್ಪೆ ಕನ್ನಡ ಶಾಲೆ, ಹಿರಿಯಡ್ಕ ಶಾಲೆಗಳಲ್ಲಿ ಶಿಕ್ಷಕರಾಗಿ ದುಡಿದ ಬಳಿಕ 1976ರಿಂದ ನಿವೃತ್ತಿಯವರೆಗೆ ಕಾಜಾರಗುತ್ತು ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು.

ಉಡುಪಿ ತಾಲೂಕು ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಜಿಲ್ಲಾ ಉಪಾಧ್ಯಕ್ಷರಾಗಿ, ಮಲ್ಪೆ ವಿಠೋಬ ದೇವಸ್ಥಾನದ ಅಧ್ಯಕ್ಷರಾಗಿ, ಹಿರಿಯಡ್ಕ ಸಾಹಿತ್ಯ ಸಂಘದ ಅಧ್ಯಕ್ಷರಾಗಿ, ಹಿರಿಯಡ್ಕ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷರಾಗಿ, ಕಟಪಾಡಿ ವಿಶ್ವನಾಥ ದೇವಸ್ಥಾನದ ಪ್ರತಿಷ್ಠಾ ಸಮಿತಿಯ ಕಾರ್ಯದರ್ಶಿಯಾಗಿ, ಮಲ್ಪೆ ಯುವಕ ಮಂಡಲದ ಅಧ್ಯಕ್ಷರಾಗಿ, ಹಳೇ ವಿದ್ಯಾರ್ಥಿ ಸಂಘಗಳ ಸ್ಥಾಪಕರಾಗಿ, ನಟ, ನಾಟಕಕಾರ, ಸ್ವಯಂಸೇವಕ, ಯಕ್ಷಗಾನ ವೇಷಧಾರಿ, ಕಾದಂಬರಿಕಾರ, ವಾಗ್ಮಿ, ಮಲ್ಪೆ, ಕಲ್ಮಾಡಿ ಹಾಗೂ ಕಾಜಾರಗುತ್ತುಗಳಲ್ಲಿ ಯಕ್ಷಗಾನ ಸಂಘಗಳ ಸ್ಥಾಪನೆಗೆ ಪ್ರೇರಣೆ ನೀಡಿದ್ದ ಮಲ್ಪೆ ರಾಘವೇಂದ್ರರು ಸದ್ಯ ಹಿರಿಯಡ್ಕದಲ್ಲಿ ವಿಶ್ರಾಂತ ಜೀವನ ನಡೆಸುತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News