ಉತ್ತರಪ್ರದೇಶ: ಗರ್ಭಿಣಿ ಮಹಿಳೆಯ ಸಾಮೂಹಿಕ ಅತ್ಯಾಚಾರ
ಲಕ್ನೊ: ಉತ್ತರ ಪ್ರದೇಶದ ಗರ್ಭಿಣಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ(Pregnant woman gangrape in UP) ನಡೆದ ಘಟನೆ ವರದಿಯಾಗಿದೆ.
ಫರೂಕಾಬಾದ್ ಜಿಲ್ಲೆಯಲ್ಲಿ ಬಸ್ ಟರ್ಮಿನಲ್‌ನಿಂದ ತನ್ನನ್ನು ಅಪಹರಿಸಿ ಪಕ್ಕದ ಹರ್ದೋಯ್ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ನಾಲ್ವರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಗರ್ಭಿಣಿ ಮಹಿಳೆಯೊಬ್ಬರು ಶುಕ್ರವಾರ ಆರೋಪಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಮುಂಜಾನೆ ಅಪಹರಣಕಾರರು ನಿದ್ರೆಗೆ ಜಾರಿದ ನಂತರ, ಕೋಣೆಯ ಬಾಗಿಲು ತೆರೆದಿದ್ದ ಕಾರಣ ಅಲ್ಲಿಂದ ಪರಾರಿಯಾಗಿ ಬಂದೆ ಎಂದು ಮಹಿಳೆ ಹೇಳಿದ್ದಾರೆ.
ಎರಡು ತಿಂಗಳ ಗರ್ಭಿಣಿ ಮಹಿಳೆ ಬಹದ್ದೂರ್‌ಪುರ ಗ್ರಾಮಕ್ಕೆ 12 ಕಿಲೋಮೀಟರ್ ನಡೆದುಕೊಂಡು ಹೋಗಿ ಅಲ್ಲಿ ಗ್ರಾಮಸ್ಥರಿಗೆ ತನಗಾದ ಕಷ್ಟವನ್ನು ವಿವರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಫರೂಕಾಬಾದ್‌ನ ರಾಜೇಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಆದರೆ ಶುಕ್ರವಾರ ಸಂಜೆಯವರೆಗೂ ಪೊಲೀಸರು ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಎಫ್‌ಐಆರ್ ದಾಖಲಿಸಿರಲಿಲ್ಲ.
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಫರೂಕಾಬಾದ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅಶೋಕ್ ಕುಮಾರ್ ಮೀನಾ ತಿಳಿಸಿದ್ದಾರೆ.
ಉತ್ತರಪ್ರದೇಶದ ಬರೇಲಿಯ 30ರ ಹರೆಯದ ಮಹಿಳೆ ಆಗಸ್ಟ್ 16 ರಂದು ಬರೇಲಿಯಿಂದ ಸಹರಾನ್‌ಪುರಕ್ಕೆ ಬಸ್‌ನಲ್ಲಿ ತೆರಳಿದ್ದಳು. ಅಲ್ಲಿಂದ ಪತಿಯ ಮನೆ ಸಹರಾನ್‌ಪುರಕ್ಕೆ ಮತ್ತೊಂದು ಬಸ್‌ನಲ್ಲಿ ಹೋಗಲು ಫರೂಕಾಬಾದ್ ಬಸ್ ಟರ್ಮಿನಲ್ ತಲುಪಿದ್ದಳು.
ತಾನು ಬಸ್ ಗಾಗಿ ಕಾಯುತ್ತಿದ್ದಾಗ, ನಾಲ್ಕು ಜನರು ತನ್ನ ಬಳಿಗೆ ಬಂದು ಮುಖದ ಮೇಲೆ ಏನೋ ಒಂದು ವಸ್ತು ಎಸೆದಾಗ ಪ್ರಜ್ಞೆ ಕಳೆದುಕೊಂಡೆ. ಪ್ರಜ್ಞೆ ಬಂದಾಗ ನಾನು ಹುಲ್ಲಿನ ಬಣವೆಯನ್ನು ಸಂಗ್ರಹಿಸಿದ ಕೋಣೆಯಲ್ಲಿದ್ದೆ. ಬಾಗಿಲನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ನಾಲ್ವರು ಪುರುಷರು ಪಕ್ಕದಲ್ಲಿ ಕುಳಿತಿದ್ದರು ಎಂದು ಪೊಲೀಸರಿಗೆ ಮಹಿಳೆ ತಿಳಿಸಿದ್ದಾಳೆ.
ಪ್ರತಿರೋಧ ವ್ಯಕ್ತಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಸೆರೆಯಲ್ಲಿದ್ದಾಗ ಮೂರು ದಿನಗಳ ಕಾಲ ತನಗೆ ತಿನ್ನಲು ಏನನ್ನೂ ನೀಡಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ.