ತೀಸ್ತಾ, ಶ್ರೀಕುಮಾರ್ ವಿರುದ್ಧದ ಪ್ರಕರಣ ವಜಾಗೊಳಿಸುವಂತೆ ಸುಪ್ರೀಂಕೋರ್ಟಿಗೆ ಅಂತಾರಾಷ್ಟ್ರೀಯ ವಿದ್ವಾಂಸರ ಆಗ್ರಹ

Update: 2022-08-20 10:27 GMT

 ಹೊಸದಿಲ್ಲಿ: ಝಾಕಿಯಾ ಜಾಫ್ರಿ(Zakia Zafri) ಪ್ರಕರಣದ ತೀರ್ಪು ಹೊರಬಿದ್ದ ಬೆನ್ನಲ್ಲೇ ಅಹ-ಅರ್ಜಿದಾರೆಯಾಗಿದ್ದ ಸಾಮಾಜಿಕ ಹೊರಾಟಗಾರ್ತಿ ತೀಸ್ತಾ ಸೇಟಲ್ವಾಡ್ (Teestha Setalvad) ಹಾಗೂ ಮಾಜಿ ಗುಜರಾತ್ ಐಪಿಎಸ್ ಅಧಿಕಾರಿ ಆರ್ ಬಿ ಶ್ರೀಕುಮಾರ್(RB Srikumar) ಅವರನ್ನು ಬಂಧಿಸಿದ ಕ್ರಮವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಬೇಕೆಂದು ಹನ್ನೊಂದು ಮಂದಿ ಅಂತಾರಾಷ್ಟ್ರೀಯ ವಿದ್ವಾಂಸರು ಶುಕ್ರವಾರ  ಸುಪ್ರೀಂ ಕೋರ್ಟಿಗೆ ಆಗ್ರಹಿಸಿದ್ದಾರಲ್ಲದೆ ಇಬ್ಬರ ವಿರುದ್ಧದ ಪ್ರಕರಣವನ್ನೂ ವಜಾಗೊಳಿಸಬೇಕೆಂದು ಕೋರಿದ್ದಾರೆ.

ಗುಜರಾತ್ ಗಲಭೆಗಳ ಸಂದರ್ಭ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಗೆ ವಿಶೇಷ ತನಿಖಾ ತಂಡ ನೀಡಿದ್ದ ಕ್ಲೀನ್ ಚಿಟ್ ಪ್ರಶ್ನಿಸಿ ಗುಲ್ಬರ್ಗ್ ಹತ್ಯಾಕಾಂಡದಲ್ಲಿ ಮೃತರಾಗಿದ್ದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಹಾಗೂ ಸೇಟಲ್ವಾಡ್ ಅವರ ಎನ್‍ಜಿಒ ಸಿಟಿಜನ್ಸ್ ಫಾರ್ ಪೀಸ್ ಸುಪ್ರೀಂ ಕೋರ್ಟ್ ಕದ ತಟ್ಟಿತ್ತು. ಆದರೆ ಈ ಅರ್ಜಿಯನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್ ವಜಾಗೊಳಿಸಿದ ನಂತರ ತೀಸ್ತಾ ಮತ್ತು ಶ್ರೀಕುಮಾರ್ ಬಂಧನವಾಗಿತ್ತು.

"ಜಾಫ್ರಿ ಮತ್ತು ಸೇಟಲ್ವಾಡ್ ಇಬ್ಬರೂ ಸಿಟ್ ವರದಿಯನ್ನು ಪ್ರಶ್ನಿಸಿ ಸ್ವತಂತ್ರ ತನಿಖೆಗೆ ಆಗ್ರಹಿಸಿದ್ದರಿಂದ ಅವರ ಅರ್ಜೀಯನ್ನು ವಜಾಗೊಳಿಸಿರುವುದು ಅನ್ಯಾಯದ ಕ್ರಮ,'' ಎಂದು ಈ ವಿದ್ವಾಂಸರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರಲ್ಲದೆ ಅರ್ಜಿದಾರರು ``ದುರುದ್ದೇಶ'' ಹೊಂದಿದ್ದಾರೆಂಬ ಅರ್ಥದ ಸುಪ್ರೀಂ ಕೋರ್ಟ್ ಹೇಳಿಕೆಯೂ ಅವರ ಬಂಧನಕ್ಕೆ ಕಾರಣವಾಗಿದೆ ಎಂದು ಹೇಳಿದೆ.

"ನ್ಯಾಯಕ್ಕಾಗಿ ಸೂಕ್ತ ಪ್ರಕ್ರಿಯೆಯ ಮೂಲಕ ನಡೆದ ದೀರ್ಘ ಹೋರಾಟವನ್ನು `ವಿಚಾರವನ್ನು ಜೀವಂತವಾಗಿಡಲು ಯತ್ನʼ ಎಂಬ ಹೇಳಿಕೆ ನಿಂದನಾತ್ಮಕವಾಗಿರುವ ಹೊರತಾಗಿ ಜನರಿಗೆ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಕದ ತಟ್ಟುವುದರಿಂದ ಹಿಂದೇಟು ಹಾಕುವಂತೆ ಮಾಡುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾನು ನೀಡಿದ ಹೇಳಿಕೆಗಳಿಗೆ ಸಂಬಂಧಿಸಿದ ವ್ಯಕ್ತಿಗಳ ಅಭಿಪ್ರಾಯವನ್ನೂ ಸುಪ್ರೀಂ ಕೋರ್ಟ್ ಪಡೆಯದೇ ಇರುವುದಕ್ಕೆ ವಿದ್ವಾಂಸರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಹೇಳಿಕೆಗೆ ಸಹಿ ಹಾಕಿದವರಲ್ಲಿ ಭಿಕು ಪಾರೇಖ್, ನೋಮ್ ಚೋಮಸ್ಕಿ, ಅರ್ಜುನ್ ಅಪ್ಪಾದುರೈ, ವೆಂಡಿ ಬ್ರೌನ್, ಶೆಲ್ಡನ್ ಪೊಲ್ಲೊಕ್, ಕ್ಯಾರೊಲ್ ರೊವಾನೆ, ಚಾಲ್ರ್ಸ್ ಟೇಲರ್, ಮಾರ್ಥ ನುಸ್ಸಬೌಮ್, ರಾಬರ್ಟ್ ಪೊಲ್ಲಿನ್, ಅಕೀಲ್ ಬಿಲ್ಗ್ರಾಮಿ ಮತ್ತು ಜೆರಾಲ್ಡ್ ಎಪ್‍ಸ್ಟೀನ್ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News