"ನ್ಯಾಯಾಧೀಶರು 50 ಪ್ರಕರಣಗಳನ್ನು ವಿಲೇವಾರಿ ಮಾಡಿದರೆ 100 ಹೊಸ ಪ್ರಕರಣ ದಾಖಲಾಗುತ್ತವೆ"

Update: 2022-08-20 15:22 GMT

ಹೊಸದಿಲ್ಲಿ,ಆ.20: ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳ ಸಂಖ್ಯೆ ಐದು ಕೋಟಿಯನ್ನು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರಣ ರಿಜಿಜು ಅವರು,ಜನರು ಈಗ ಹೆಚ್ಚು ಜಾಗ್ರತರಾಗಿರುವುದರಿಂದ ಮತ್ತು ವಿವಾದಗಳನ್ನು ಬಗೆಹರಿಸಿಕೊಳ್ಳಲು ನ್ಯಾಯಾಲಯಗಳನ್ನು ಸಂಪರ್ಕಿಸುತ್ತಿರುವುದರಿಂದ ನ್ಯಾಯಾಧೀಶರೋರ್ವರು 50 ಪ್ರಕರಣಗಳನ್ನು ವಿಲೇವಾರಿಗೊಳಿಸಿದರೆ ಹೊಸದಾಗಿ 100 ಪ್ರಕರಣಗಳು ದಾಖಲಾಗುತ್ತಿವೆ ಎಂದು ಶನಿವಾರ ಇಲ್ಲಿ ಹೇಳಿದರು.

 ‌

ಸಶಸ್ತ್ರ ಪಡೆಗಳ ನ್ಯಾಯಾಧಿಕರಣದ ಕಾರ್ಯ ನಿರ್ವಹಣೆ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ರಿಜಿಜು,ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸರಕಾರವು ತಂತ್ರಜ್ಞಾನದ ಮೊರೆಹೋಗುತ್ತಿದೆ ಎಂದರು. ರಕ್ಷಣಾ ಸಚಿವ ರಾಜನಾಥ ಸಿಂಗ್ ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು.

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರದಲ್ಲಿ ರಿಜಿಜು,ದೇಶಾದ್ಯಂತ ನ್ಯಾಯಾಲಯಗಳಲ್ಲಿ 4.83 ಕೋಟಿಗೂ ಅಧಿಕ ಪ್ರಕರಣಗಳು ಬಾಕಿಯಿವೆ. ಈ ಪೈಕಿ ನಾಲ್ಕು ಕೋಟಿಗೂ ಅಧಿಕ ಪ್ರಕರಣಗಳು ಕೆಳ ನ್ಯಾಯಾಲಯಗಳಲ್ಲಿದ್ದರೆ,72,000ಕ್ಕೂ ಅಧಿಕ ಪ್ರಕರಣಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಾಗಿವೆ ಎಂದು ತಿಳಿಸಿದ್ದರು.

 ಮಧ್ಯಸ್ಥಿಕೆ ಕುರಿತು ಪ್ರಸ್ತಾವಿತ ಕಾನೂನು ಸಹ ಪರ್ಯಾಯ ವಿವಾದ ಪರಿಹಾರ ಕಾರ್ಯವಿಧಾನಗಳಿಗೆ ನವೀಕೃತ ಗಮನದೊಂದಿಗೆ ನ್ಯಾಯಾಲಯದಲ್ಲಿ ಬಾಕಿಯಿರುವ ವ್ಯಾಜ್ಯಗಳ ಸಂಖ್ಯೆಯನ್ನು ಕಡಿಮೆ ಮಾಡಲು ನೆರವಾಗಲಿದೆ ಎಂದು ರಿಜಿಜು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News