ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆಯನ್ನು ರದ್ದುಪಡಿಸಲು ರಾಷ್ಟ್ರಪತಿ ಮುರ್ಮುಗೆ ಪತ್ರ

Update: 2022-08-20 18:28 GMT

ಅಹ್ಮದಾಬಾದ್, ಆ.20:  2002ರ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದ 11 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸುವ ‘ನಾಚಿಕೆಗೇಡಿನ’ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಹಾಗೂ ಗುಜರಾತ್ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಗುಜರಾತ್‌ನ ಮೂವರು ಕಾಂಗ್ರೆಸ್ ಶಾಸಕರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.

ಗಿಯಾಸುದ್ದೀನ್ ಶೇಖ್, ಇಮ್ರಾನ್ ಖೇಡ್‌ವಾಲಾ ಹಾಗೂ ಜಾವೇದ್ ಪಿರ್ಝಾದಾ ಅವರು ರಾಷ್ಟ್ರಪತಿಗೆ ಪತ್ರ ಬರೆದ ಮೂವರು ಕಾಂಗ್ರೆಸ್ ಶಾಸಕರು.  ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆಗೊಳಿಸಿ ಗುಜರಾತ್ ಸರಕಾರ ಹೊರಡಿಸಿರುವ ಆದೇಶವು ನಾಚಿಕೆಗೇಡಿನದ್ದಾಗಿದೆ ಹಾಗೂ  ಸಂವೇದನಾರಹಿತವಾಗಿದೆ ಮತ್ತು ನ್ಯಾಯವನ್ನು ಪಡೆಯಲು ಹೋರಾಡುತ್ತಿರುವವರನ್ನು ನಿರಾಶೆಗೊಳಿಸಿದೆ ಎಂದು ಈ ಮೂವರು ಶಾಸಕರು ಪತ್ರದಲ್ಲಿ ಬಣ್ಣಿಸಿದ್ದಾರೆ.
‘‘ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ ಅಪರಾಧಿಗಳನ್ನು  ಕ್ಷಮಾದಾನದ ನೀತಿಯಡಿ ಬಿಡುಗಡೆಗೊಳಿಸಬಾರದೆಂಬ ಸ್ಪಷ್ಟವಾದ ಮಾರ್ಗಸೂಚಿಯಿದ್ದರೂ, ಗುಜರಾತ್‌ನ ಬಿಜೆಪಿ ಸರಕಾರವು ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳಿಗೆ ಕ್ಷಮಾದಾನ ನೀಡುವ ಮೂಲಕ ತನ್ನ ಸಂವೇದನಾಹೀನತೆಯನ್ನು ಪ್ರದರ್ಶಿಸಿದೆ ’’ ಎಂದು ಪತ್ರದಲ್ಲಿ ತಹೇಳಲಾಗಿದೆ.
ರಾಷ್ಟ್ರಪತಿಯವರು ಮಹಿಳೆಯಾಗಿರುವುದರಿಂದ, ಸ್ತ್ರೀಯೊಬ್ಬರ ನೋವನ್ನು ಅವರು ಅತ್ಯಂತ ಚೆನ್ನಾಗಿ ಅರಿತುಕೊಳ್ಳಬಲ್ಲರು ಎಂದು ಪತ್ರದಲ್ಲಿ ವಿಶ್ವಾಸ  ವ್ಯಕ್ತಪಡಿಸಲಾಗಿದೆ.

ಬಿಲ್ಕಿಸ್ ಬಾನು ಪ್ರಕರಣದ  ಅಪರಾಧಿಗಳಿಗೆ ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಮೂರು ವರ್ಷದ ಪುತ್ರಿ ಸೇರಿದಂತೆ ಕುಟುಂಬದ ಏಳು ಸದಸ್ಯರನ್ನು ಹತ್ಯೆಗೈದುದಕ್ಕಾಗಿ ಅತ್ಯಂತ ಕಠಿಣವಾದ ಶಿಕ್ಷೆಯನ್ನು ನೀಡಬೇಕಾಗಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ಸರಕಾರವು ಇಂತಹ ಹೀನ ಕೃತ್ಯವನ್ನು ಎಸಗಿದವರಿಗೆ ಕ್ಷಮಾದಾ ನೀಡಿದೆ ಎಂದು ಪತ್ರ ಹೇಳಿದೆ.

ರಾಷ್ಟ್ರಪತಿಯವರು ತಕ್ಷಣವೇ ಈ ವಿಚಾರವಾಗಿ ಮಧ್ಯಪ್ರವೇಶಿಸಿ, ಕ್ರಿಮಿನಲ್‌ಗಳಿಗೆ ಕ್ಷಮಾದಾನ ನೀಡುವ ನಾಚಿಕೆಗೇಡಿನ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಹಾಗೂ ಗುಜರಾತ್ ಸರಕಾರಕ್ಕೆ ನಿರ್ದೇಶನ ನೀಡಬೇಕು’’ ಎಂದು ಮೂವರು ಶಾಸಕರು ಕೋರಿದ್ದಾರೆ.
ಅತ್ಯಂತ ಆಘಾತಕಾರಿಯೆಂದರೆ  ತೀವ್ರವಾದಿ ಸಿದ್ಧಾಂತಗಳನ್ನು ಹೊಂದಿರುವ ಜನರು ಇಂತಹ ಕ್ರಿಮಿನಲ್‌ಗಳನ್ನು ಬಿಡುಗಡೆಯನ್ನು ಸಂಭ್ರಮಿಸುತ್ತಿದ್ದಾರೆ ಹಾಗೂ ಅವರನ್ನು ಸನ್ಮಾನಿಸುತ್ತಿರುವುದಾಗಿದೆ. ಇದೊಂದು ಅತ್ಯಂತ ಅಮಾನವೀಯವಾದ ಕೃತ್ಯವಾಗಿದೆ. ಇದೊಂದು ಅಪಾಯಕಾರಿ ಸಂಪ್ರದಾಯವಾಗುವ ಬದಲು ಗುಜರಾತ್ ಸರಕಾರದ ಈ ನಡೆಯನ್ನು ತಡೆಗಟ್ಟುವುದು ಅತ್ಯಂತ ಅಗತ್ಯವಾಗಿದೆ ಎಂದರು.
 ಮಹಿಳೆಯರ ಗೌರವದ ಬಗ್ಗೆ ಪ್ರಧಾನಿ ಮಾತನಾಡುವುದನ್ನು ಗಮನಕ್ಕೆ ತೆಗೆದುಕೊಂಡರೆ ಗುಜರಾತ್ ಸರಕಾರದ ನಿರ್ಧಾರವು ಅತ್ಯಂತ ಆಘಾತಕಾರಿಯಾಗಿದೆ.  ದೇಶದ ಪೌರರು  ಕಾನೂನಿನ ಮೇಲೆ ನಂಬಿಕೆಯನ್ನು ಕಳೆದುಕೊಳ್ಳದಂತೆ ಮಾಡಲು ಹಾಗೂ ಅತ್ಯಾಚಾರ ಸಂತ್ರಸ್ತೆ ಬಿಲ್ಕಿಸ್ ಬಾನು ಅವರು ಪಟ್ಟಂತಹಯಾತನೆ ಇತರ ಮಹಿಳೆಯರಿಗೂ ಬಾರದಂತಾಗಲು ಗುಜರಾತ್ ಸರಕಾರವು ತನ್ನ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕಾಗಿದೆ ಎಂದು ಪತ್ರದಲ್ಲಿ ಈ  ಮೂವರು ಶಾಸಕರು ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News