ಸೊಮಾಲಿಯಾ ಹೋಟೆಲ್ ಗೆ ಮುತ್ತಿಗೆ ಹಾಕಿ‌, 13 ಮಂದಿಯನ್ನು ಕೊಲೆಗೈದ ಅಲ್-ಶಬಾಬ್ ಉಗ್ರರ ಹತ್ಯೆ: ವರದಿ

Update: 2022-08-21 15:59 GMT
photo credit: AFP

ಮೊಗದಿಶು, ಆ.21: ಸೊಮಾಲಿಯಾ ರಾಜಧಾನಿ ಮೊಗದಿಶುವಿನ ಖ್ಯಾತ ಹಯಾತ್ ಹೋಟೆಲ್‌ಗೆ ಮುತ್ತಿಗೆ ಹಾಕಿದ್ದ ಅಲ್-ಶಬಾಬ್ ಸಂಘಟನೆಯ ಉಗ್ರರನ್ನು ಹತ್ಯೆ ಮಾಡಿದ್ದು ಹೋಟೆಲ್ ಮೇಲಿನ ಮುತ್ತಿಗೆಯನ್ನು 30 ಗಂಟೆಗಳ ಕಾರ್ಯಾಚರಣೆಯ ಬಳಿಕ ಅಂತ್ಯಗೊಳಿಸಲಾಗಿದೆ ಎಂದು ಸೊಮಾಲಿಯಾದ ಭದ್ರತಾ ಪಡೆ ರವಿವಾರ ಘೋಷಿಸಿದೆ.

ಶುಕ್ರವಾರ ರಾತ್ರಿಯಿಂದ ಆರಂಭವಾದ ಈ ಮುತ್ತಿಗೆ ಪ್ರಕರಣದಲ್ಲಿ ಕನಿಷ್ಟ 13 ನಾಗರಿಕರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ.ಮಕ್ಕಳು, ಮಹಿಳೆಯರ ಸಹಿತ ಹಲವರು ಹೋಟೆಲ್ನ ಶೌಚಾಲಯದಲ್ಲಿ ಸುಮಾರು 24 ಗಂಟೆ ಬಚ್ಚಿಟ್ಟುಕೊಂಡು ತಮ್ಮ ಜೀವವನ್ನು ಉಳಿಸಿಕೊಂಡಿದ್ದಾರೆ ಎಂದು ಸೊಮಾಲಿಯಾದ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ಹೋಟೆಲ್ನ 2ನೇ ಮಹಡಿಯಲ್ಲಿ ಉಗ್ರರು ಹಲವರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದರು. ಅಲ್ಲದೆ ಮಹಡಿಯೇರುವ ಮೆಟ್ಟಿಲುಗಳನ್ನು ಸ್ಫೋಟಿಸಿದ್ದರು ಎಂದು ಸೊಮಾಲಿಯಾ ಗುಪ್ತಚರ ವಿಭಾಗದ ಅಧಿಕಾರಿ ಹೇಳಿದ್ದಾರೆ.ಈ ಘಟನೆಯಲ್ಲಿ ಹತ್ಯೆಯಾದ ಉಗ್ರರ ಸಂಖ್ಯೆ ಹಾಗೂ ಮೃತಪಟ್ಟ ನಾಗರಿಕರ ಸಂಖ್ಯೆಯ ಬಗ್ಗೆ ಸರಕಾರ ಅಧಿಕೃತ ಹೇಳಿಕೆ ನೀಡಲಿದೆ. ಉಗ್ರರ ಸ್ಫೋಟ ಮತ್ತು ಆ ಬಳಿಕದ ಕಾರ್ಯಾಚರಣೆಯಲ್ಲಿ ಹೋಟೆಲ್‌ಗೆ ವ್ಯಾಪಕ ಹಾನಿಯಾಗಿದೆ ಎಂದವರು ವಿವರಿಸಿದ್ದಾರೆ.

ದಾಳಿಯನ್ನು ಅಮೆರಿಕ ಖಂಡಿಸಿದ್ದು ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಸೊಮಾಲಿಯಾ ಮತ್ತು ಆಫ್ರಿಕನ್ ಯೂನಿಯನ್ ನೇತೃತ್ವದಲ್ಲಿ ನಡೆಯುವ ಪ್ರಯತ್ನಗಳಿಗೆ ಬೆಂಬಲ ಮುಂದುವರಿಸುವುದಾಗಿ ಘೋಷಿಸಿದೆ.ಮೃತರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ಸಲ್ಲಿಸುವ ಜತೆಗೆ ಗಾಯಗೊಂಡವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇವೆ ಮತ್ತು ಸೊಮಾಲಿಯಾದ ಭದ್ರತಾ ಪಡೆಗಳನ್ನು ಶ್ಲಾಘಿಸುತ್ತೇವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

ಅಲ್‌ಖೈದಾ ಜತೆ ಸಂಪರ್ಕ ಹೊಂದಿರುವ ಅಲ್ ಶಬಾಬ್ ಸಂಘಟನೆ ಈ ಕೃತ್ಯದ ಹೊಣೆ ವಹಿಸಿಕೊಂಡಿದೆ ಎಂದು ವರದಿಯಾಗಿದೆ. ಸೊಮಾಲಿಯಾ ಸರಕಾರದ ವಿರುದ್ಧ ಅಲ್ಶಬಾಬ್ ಸಂಘಟನೆ ಕಳೆದ 10 ವರ್ಷದಿಂದ ಸಂಘರ್ಷದಲ್ಲಿ ತೊಡಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News