ಏಕದಿನ ಸರಣಿ: ಝಿಂಬಾಬ್ವೆ ವಿರುದ್ಧ ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

Update: 2022-08-22 15:54 GMT
Photo: twitter

 ಹರಾರೆ, ಆ.22: ಶುಭಮನ್ ಗಿಲ್ (Shubman Gill )ಚೊಚ್ಚಲ ಶತಕ(ಔಟಾಗದೆ 130 ರನ್, 97 ಎಸೆತ, 15 ಬೌಂಡರಿ, 1 ಸಿಕ್ಸರ್) ಹಾಗೂ ಇಶಾನ್ ಕಿಶನ್ ಅರ್ಧಶತಕ(50 ರನ್, 61 ಎಸೆತ), ಅವೇಶ್ ಖಾನ್(3-66) ನೇತೃತ್ವದಲ್ಲಿ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಭಾರತ ಕ್ರಿಕೆಟ್ ತಂಡ (Indian cricket team) ಝಿಂಬಾಬ್ವೆ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯವನ್ನು 13 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಮತ್ತೊಮ್ಮೆ ಝಿಂಬಾಬ್ವೆ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತದ ನಾಯಕ ಕೆ.ಎಲ್.ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಪ್ರವಾಸಿಗರು ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದರು. ಗೆಲ್ಲಲು 290 ರನ್ ಗುರಿ ಪಡೆದ ಝಿಂಬಾಬ್ವೆ ಸಿಕಂದರ್ ರಾಝಾ ಏಕಾಂಗಿ ಹೋರಾಟದ(115 ರನ್, 95 ಎಸೆತ, 9 ಬೌಂಡರಿ, 3 ಸಿಕ್ಸರ್)ಹೊರತಾಗಿಯೂ 49.3 ಓವರ್‌ಗಳಲ್ಲಿ 276 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಭಾರತದ ಪರ ಅವೇಶ್‌ಖಾನ್(3-66) ಯಶಸ್ವಿ ಬೌಲರ್ ಎನಿಸಿಕೊಂಡರೆ, ಕುಲದೀಪ್ ಯಾದವ್(2-38), ಅಕ್ಷರ್ ಪಟೇಲ್(2-30) ಹಾಗೂ ದೀಪಕ್ ಚಹಾರ್(2-75) ತಲಾ ಎರಡು ವಿಕೆಟ್ ಪಡೆದು ತಂಡ ಗೆಲುವಿನ ನೆರವಾದರು.

ಶಿಖರ್ ಧವನ್(40 ರನ್, 68 ಎಸೆತ)ಜೊತೆಗೆ ಇನಿಂಗ್ಸ್ ಆರಂಭಿಸಿದ ರಾಹುಲ್(30 ರನ್, 46 ಎಸೆತ)ಮೊದಲ ವಿಕೆಟಿಗೆ 63 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಗಿಲ್ ಹಾಗೂ ಇಶಾನ್ ಕಿಶನ್ 3ನೇ ವಿಕೆಟಿಗೆ 140 ರನ್ ಜೊತೆಯಾಟ ನಡೆಸಿ ತಂಡದ ಮೊತ್ತ ಹಿಗ್ಗಿಸಲು ನೆರವಾದರು. ಝಿಂಬಾಬ್ವೆ ಪರ ಬ್ರಾಡ್ ಇವಾನ್ಸ್ ಮೊದಲ ಬಾರಿ ಐದು ವಿಕೆಟ್ ಗೊಂಚಲು(5-54) ಕಬಳಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News