ವಿವೇಕ ಮೂಡಿಸಿದ ಸಂಪಾದಕೀಯ

Update: 2022-08-22 18:37 GMT

ಮಾನ್ಯರೇ,

ನಿನ್ನೆಯ ''ಅಕ್ರಮ ಗೋವುಗಳ ತಪಾಸಣೆಯ ಹೆಸರಲ್ಲಿ ಹೆದ್ದಾರಿ ದರೋಡೆ'' ಸಂಪಾದಕೀಯ ನಿಜಕ್ಕೂ ದಿಟ್ಟತನದಿಂದ ಕೂಡಿದ್ದು, ಪರಿಣಾಮಕಾರಿ ಬರಹ. ಅರಿವುಗೇಡಿಗಳಿಗೆ ವಿವೇಕ ಮೂಡಿಸುವಂತಹದ್ದು, ರೈತರು, ದಲಿತರ ಬಗ್ಗೆ ಅತೀವ ಕಳಕಳಿಯಿಂದ ಕೂಡಿರುವಂತಹದ್ದು. ಸಂವಿಧಾನದ ಚೌಕಟ್ಟಿನೊಳಗೇ ಮುಂದೊಂದು ದಿನ ರೈತಾಪಿ ವರ್ಗ ಈ 'ದರೋಡೆಕೋರ'ರ ವಿರುದ್ಧ ಬಂಡೇಳಬಹುದೆಂಬ ವಾಸ್ತವವನ್ನು ಮನದಟ್ಟು ಮಾಡುವಂತಹದ್ದು. ಇಂತಹ 'ದರೋಡೆಕೋರ'ರನ್ನು ಅದೇಗೆ ಒದ್ದು ಮಟ್ಟ ಹಾಕಬೇಕೆನ್ನುವ ನಿಟ್ಟಿನಲ್ಲಿ 'ಸಕಲೇಶಪುರ ಘಟನೆ' ರಾಜ್ಯಾದ್ಯಂತ ರೈತರಿಗೆ, ಬಡವರಿಗೆ ಸ್ಪಷ್ಟ ಸೂಚನೆ ನೀಡಿದಂತಿದೆ. ಪೊಲೀಸರು ಇಂತಹ ಅಶಾಂತಿಗೆ ಅವಕಾಶ ನೀಡಬಾರದೆಂಬ ಬುದ್ಧಿಮಾತನ್ನು ಈ ಸಂಪಾದಕೀಯ ಪದೇ ಪದೇ ಒತ್ತಿ ಹೇಳಿದೆ. ಮಾನವತೆಯ ಬೆಳ್ಳಿ ಬೆಳಕಲ್ಲಿ ಊರುಕೇರಿಗಳ ಜನರೆಲ್ಲರೂ ಒಗ್ಗೂಡಿ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಶಾಂತಿಯಿಂದ ಪರಸ್ಪರ ಹೆಗಲು ನೀಡುತ್ತಾ ಹಿಂದೆ ಇದ್ದಂತೆ ಬದುಕುವ ಆಶಯ ಈ ಸಂಪಾದಕೀಯದಲ್ಲಿ ಎದ್ದು ಕಂಡಿದೆ.

ಹೀಗಾಗಿ ಬರಹ ಬಹಳ ಇಷ್ಟವಾಯಿತು. ಇಂತಹ ನಿಲುವು, ಧೋರಣೆ, ಸ್ಪಷ್ಟತೆಗಳ ಕಾರಣಕ್ಕಾಗಿ ಮಾತ್ರ ನನಗೆ 'ವಾರ್ತಾಭಾರತಿ' ಬಲು ಅಚ್ಚುಮೆಚ್ಚು, ಅಭಿಮಾನ. ಸಕಲೇಶಪುರದಲ್ಲಿ ಈ ಘಟನೆ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಸಂತ್ರಸ್ತರ ಮಾತುಗಳು ಮತ್ತು ಪ್ರತಿಭಟನೆಯ ದೃಶ್ಯಗಳ ವೀಡಿಯೊ ತುಣುಕುಗಳಿಂದ ಕೂಡಿದ ವರದಿ ಕೂಡಾ 'ವಾರ್ತಾಭಾರತಿ'ಯಲ್ಲೇ ಮೊದಲಿಗೆ ಬಂದಿದ್ದನ್ನೂ ನಾನು ಗಮನಿಸಿದ್ದೇನೆ. ಜಾಲತಾಣದ ಮೂಲಕವಾದರೂ ಇವೆಲ್ಲವೂ ಅತಿ ಹೆಚ್ಚು ಜನರಿಗೆ ತಲುಪಿದರೆ ಅದು ಓದುಗರನ್ನು ಜಾಣರನ್ನಾಗಿ ಮಾಡುವ ಮತ್ತು ಮೂರ್ಖತನದ ಕೊಚ್ಚೆಯಿಂದ ಮೇಲೆತ್ತುವ ಜನಪರ ಕೈಂಕರ್ಯದ ನಿಟ್ಟಿನಲ್ಲಿ ಸಾರ್ಥಕ ಹೆಜ್ಜೆಗಳಾಗಲಿವೆ.

Writer - -ವಿಜಯ ಕುಮಾರ್, ಮಡಿಕೇರಿ

contributor

Editor - -ವಿಜಯ ಕುಮಾರ್, ಮಡಿಕೇರಿ

contributor

Similar News