NDTVಯ ಶೇ. 29ರಷ್ಟು ಶೇರು ಖರೀದಿಸಿದ ಅದಾನಿ ಸಮೂಹ

Update: 2022-08-23 16:17 GMT

ಹೊಸದಿಲ್ಲಿ: ಎನ್‌ಡಿಟಿವಿ(NDTV) ಸುದ್ದಿವಾಹಿನಿಯ ಮಾಲಕ ಸಂಸ್ಥೆಯಾದ ನ್ಯೂಡೆಲ್ಲಿ ಟೆಲಿವಿಶನ್ ಲಿಮಿಟೆಡ್‌ನ ಶೇ. 29ರಷ್ಟು ಶೇರುಗಳನ್ನು ಪರೋಕ್ಷವಾಗಿ ಖರೀದಿಸಿರುವ ಅದಾನಿ(Adani) ಉದ್ಯಮ ಸಮೂಹವು ಇನ್ನೂ 493 ಕೋಟಿ ರೂ. ಮೌಲ್ಯದ ಶೇ.26ರಷ್ಟು ಶೇರುಗಳನ್ನು ಖರೀದಿಸುವ ಕೊಡುಗೆಯನ್ನು ಮುಂದಿಟ್ಟಿದೆ.

ಎಎಂಜಿ ಮೆಡಿಯಾ ನೆಟ್‌ವರ್ಕ್ಸ್ ಹಾಗೂ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಹಾಗೂ ವಿಶ್ವಪ್ರಧಾನ್ ಕಮರ್ಶಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಎನ್‌ಡಿಟಿವಿಯ 1.67,62,530 ಈಕ್ವಿಟಿ ಶೇರುಗಳನ್ನು ಪ್ರತಿಶೇರಿಗೆ 294 ರೂ. ದರದಲ್ಲಿ ಖರೀದಿಸುವ ಕೊಡುಗೆಯನ್ನು ನೀಡಿವೆ. ಈ ಮೂರು ಕಂಪೆನಿಗಳು ಪ್ರಸಕ್ತ ಅದಾನಿ ಉದ್ಯಮ ಸಮೂಹದ ಒಡೆತನಕ್ಕೆ ಸೇರಿದ್ದಾಗಿವೆ.

ಅದಾನಿ ಲಿಮಿಟೆಡ್ ಸಂಸ್ಥೆಯು ಮಂಗಳವಾರ ಹೇಳಿಕೆಯೊಂದನ್ನು ನೀಡಿ, ತಾನು 114 ಕೋಟಿ ರೂ.ಗೆ ವಿಶ್ವಪ್ರಧಾನ್ ಕಮರ್ಶಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಅನ್ನು ಖರೀದಿಸಿರುವುದಾಗಿ ತಿಳಿಸಿತ್ತು. ವಿಸಿಪಿಎಲ್ ಕಂಪೆನಿಯು ಎನ್‌ಡಿಟಿವಿಯ ಶೇರುಹೋಲ್ಡಿಂಗ್ ಸಂಸ್ಥೆ ಆರ್‌ಆರ್‌ಪಿಆರ್ ಮೇಲೆ ಒಡೆತನವನ್ನು ಹೊಂದಿದೆ. ಇದರೊಂದಿಗೆ ಎನ್‌ಡಿಟಿವಿಯ ಪ್ರವರ್ತಕ ಸಂಸ್ಥೆಯಾದ ಆರ್‌ಆರ್‌ಪಿಆರ್‌ನ ಶೇ.99.5 ಶೇಕಡಾ ಶೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ತನ್ನ ಹಕ್ಕನ್ನು ಅದಾನಿ ಮಾಲಕತ್ವದ ವಿಸಿಪಿಎಲ್ ಚಲಾಯಿಸಿದೆ.

24x7, ಎನ್‌ಡಿಟಿವಿಯ ಶೇರುಗಳ ಖರೀದಿಯೊಂದಿಗೆ, ದೇಶದ ಮಾಧ್ಯಮ ಜಗತ್ತಿನಲ್ಲಿ ಹೊಸ ಯುಗಕ್ಕೆ ನಾಂದಿಯಾಗಲಿದೆಯೆಂದು ಎಎಂಜಿ ಮೆಡಿಯಾ ನೆಟ್‌ವರ್ಕ್ಸ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ್ ಪುಗಲಿಯಾ ತಿಳಿಸಿದ್ದಾರೆ. ಭಾರತದ ಪ್ರಮುಖ ಸುದ್ದಿ ಮಾಧ್ಯಮ ಸಂಸ್ಥೆಗಳಲ್ಲೊಂದಾದ ಎನ್‌ಡಿಟಿವಿ ಲಿಮಿಟೆಡ್ ಕಂಪೆನಿಯು ಎನ್‌ಡಿಟಿವಿ, ಎನ್‌ಡಿಟಿವಿ ಇಂಡಿಯಾ ಹಾಗೂ ಎನ್‌ಡಿಟಿವಿ ಪ್ರಾಫಿಟ್ ಹೀಗೆ ಮೂರು ರಾಷ್ಟ್ರೀಯ ಸುದ್ದಿವಾಹಿನಿಗಳನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News