ವಿದ್ಯಾರ್ಥಿಗಳು ನಾಪತ್ತೆ ವರದಿ ಬಗ್ಗೆ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಪತ್ರಕರ್ತನ ಗುಂಡಿಕ್ಕಿ ಹತ್ಯೆ

Update: 2022-08-23 17:08 GMT

ಮೆಕ್ಸಿಕೋ ಸಿಟಿ, ಆ.೨೩: 8 ವರ್ಷದ ಹಿಂದೆ ಮೆಕ್ಸಿಕೋದ ನಗರದಿಂದ 43ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಬಗ್ಗೆ ವರದಿಯನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಪತ್ರಕರ್ತನನ್ನು ಕೆಲ ಗಂಟೆಗಳ ಬಳಿಕ ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ದಕ್ಷಿಣ ಮೆಕ್ಸಿಕೋದ  ಗ್ಯುರೆರೊ ರಾಜ್ಯದ ಚಿಲ್ಪಾನಿಂಗೊ ನಗರದ ಬಳಿಯ ಪ್ರದೇಶದಲ್ಲಿ 2014ರಲ್ಲಿ ಸರಕಾರ ವಿರೋಧಿ ಪ್ರತಿಭಟನೆಗೆ ಸಜ್ಜಾಗುತ್ತಿದ್ದ 43  ವಿದ್ಯಾರ್ಥಿಗಳು ನಾಪತ್ತೆಯಾಗಿರುವ ಪ್ರಕರಣದ ಕುರಿತ ವರದಿಯನ್ನು ಪತ್ರಕರ್ತ, ಸ್ಥಳೀಯ ಪತ್ರಿಕೆಯೊಂದರ ವರದಿಗಾರ  ಫ್ರೆಡಿಡ್ ರೋಮನ್  ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದರು. ಕೆಲ ಗಂಟೆಗಳ ಬಳಿಕ ಅವರು ಗುಂಡೇಟಿನಿಂದ ಮೃತಪಟ್ಟಿರುವ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. `ಬಾಸ್‌ನ ವಿರುದ್ಧ ಪ್ರಕರಣ ದಾಖಲಿಸದ ಸರಕಾರದ ಅಪರಾಧ' ಎಂಬ ಶೀರ್ಷಿಕೆಯಲ್ಲಿ ಅವರು , ವಿದ್ಯಾರ್ಥಿಗಳ ನಾಪತ್ತೆಗೂ ಮುನ್ನ ಸರಕಾರದ ನಾಲ್ವರು ಉನ್ನತ ಅಧಿಕಾರಿಗಳು ಅದೇ ಸ್ಥಳದಲ್ಲಿ ಒಟ್ಟುಸೇರಿ ಸಮಾಲೋಚನೆ ನಡೆಸಿರುವ ಬಗ್ಗೆ ಉಲ್ಲೇಖಿಸಿದ್ದರು. ಕಳೆದ ವಾರ ಬಿಡುಗಡೆಗೊಂಡಿರುವ ಸತ್ಯಶೋಧನಾ ಸಮಿತಿಯ ವರದಿಯ ಬಳಿಕ ಈ ನಾಲ್ಕೂ ಅಧಿಕಾರಿಗಳನ್ನು ಬಂಧಿಸಲಾಗಿದೆ.

ಅಧಿಕಾರಿಗಳ ಅವ್ಯಹಾರದ ಬಗ್ಗೆ ನಿರಂತರ ವರದಿ ಪ್ರಕಟಿಸುತ್ತಿದ್ದ ರೋಮನ್ ಅವರ ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಮಾಧ್ಯಮಗಳು ಹೇಳಿವೆ. ಸರಕಾರದ ವರದಿ ಪ್ರಕಾರ ಈ ವರ್ಷ ಇದುವರೆಗೆ ಮೆಕ್ಸಿಕೋದಲ್ಲಿ 12 ಪತ್ರಕರ್ತರ ಹತ್ಯೆಯಾಗಿದೆ. ಆದರೆ ಎನ್‌ಜಿಒ ಸಂಸ್ಥೆಯ ಪ್ರಕಾರ, ಇದುವರೆಗೆ 15 ಪತ್ರಕರ್ತರು ಹತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News