ಹರ್ಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಸಿಬಿಐ ತನಿಖೆಗೆ ಆಗ್ರಹಿಸಿದ ಕುಟುಂಬ
ಚಂಡೀಗಢ: ಗೋವಾದಲ್ಲಿ ಹರ್ಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿನ ಬಗ್ಗೆ ಅವರ ಕುಟುಂಬ ಪ್ರಶ್ನೆಗಳನ್ನು ಎತ್ತಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದೆ.
42 ವರ್ಷದ ಸೋನಾಲಿ ಫೋಗಟ್ ಸೋಮವಾರ ರಾತ್ರಿ ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ ಪೊಲೀಸರು "ಅಸ್ವಾಭಾವಿಕ ಸಾವು" ಎಂದು ಪ್ರಕರಣ ದಾಖಲಿಸಿದ್ದಾರೆ.
“ಸೋನಾಲಿ ಫೋಗಟ್ ತನ್ನ ತಾಯಿಗೆ ಕರೆ ಮಾಡಿ ಆಹಾರ ಸೇವಿಸಿದ ನಂತರ ಹುಷಾರಿಲ್ಲ ಎಂದು ಹೇಳಿದ್ದಾಳೆ . ತಾನು ಅಶಾಂತಿ ಅನುಭವಿಸುತ್ತಿದ್ದೇನೆ ಎಂದು ಹೇಳಿದ್ದಳು. ತನ್ನ ವಿರುದ್ಧ ಯಾರೋ ಪಿತೂರಿ ನಡೆಸುತ್ತಿರುವಂತೆ, ಏನೋ ಸರಿಯಿಲ್ಲ ಎಂದು ಭಾವಿಸಿದ್ದಳು. ನಂತರ ಬೆಳಿಗ್ಗೆ ಆಕೆ ಇನ್ನಿಲ್ಲ ಎಂಬ ಸುದ್ದಿ ನಮಗೆ ಬಂದಿತು" ಎಂದು ಸೋನಾಲಿಯ ಸಹೋದರಿ ರಾಮನ್ ಹರ್ಯಾಣದ ಹಿಸಾರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ನನ್ನ ಸಹೋದರಿಗೆ ಹೃದಯಾಘಾತವಾಗಿರಲಾರದು. ಆಕೆ ತುಂಬಾ ಫಿಟ್ ಆಗಿದ್ದಳು. ಸಿಬಿಐನಿಂದ ಸೂಕ್ತ ತನಿಖೆಗೆ ನಾವು ಒತ್ತಾಯಿಸುತ್ತೇವೆ. ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ನನ್ನ ಕುಟುಂಬ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಆಕೆಗೆ ಅಂತಹ ಯಾವುದೇ ವೈದ್ಯಕೀಯ ಸಮಸ್ಯೆ ಇರಲಿಲ್ಲ" ಎಂದು ಆಕೆಯ ಸಹೋದರಿ ರಾಮನ್ ಸುದ್ದಿ ಏಜೆನ್ಸಿ ANI ಗೆ ತಿಳಿಸಿದ್ದಾರೆ
ಸಹೋದರಿ ಸಾವಿನ ಹಿಂದಿನ ಸಂಜೆ ನನಗೆ ಆಕೆಯಿಂದ ಕರೆ ಬಂದಿತು. ಅವಳು ವಾಟ್ಸಾಪ್‌ನಲ್ಲಿ ಮಾತನಾಡಲು ಬಯಸುವುದಾಗಿ ಹೇಳಿದ್ದಳು ಮತ್ತು ಏನೋ ನಡೆಯುತ್ತಿದೆ ಎಂದು ಹೇಳಿದ್ದಳು ... ನಂತರ, ಆಕೆ ಕರೆಯನ್ನು ಕಟ್ ಮಾಡಿ ನಂತರ ಪಿಕ್ ಮಾಡಲಿಲ್ಲ’’ ಎಂದು ರಾಮನ್ ಹೇಳಿದ್ದಾರೆ.