"ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳ ಘೋಷಣೆ ವಿಚಾರದಲ್ಲಿ ಸರ್ವ ಪಕ್ಷ ಸಭೆ ಯಾಕೆ ಕರೆಯಲಾಗುತ್ತಿಲ್ಲ?"

Update: 2022-08-24 15:57 GMT
Photo:PTI

ಹೊಸದಿಲ್ಲಿ,ಆ.24: ಚುನಾವಣಾ ಪ್ರಚಾರದ ಸಂದರ್ಭಗಳಲ್ಲಿ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸಲಾಗುತ್ತಿರುವುದರ ಬಗ್ಗೆ ಚರ್ಚಿಸಲು ಯಾಕೆ ಸರ್ವ ಪಕ್ಷ ಸಭೆಯನ್ನು ಕರೆಯಲಾಗುತ್ತಿಲ್ಲವೆಂದು ಸುಪ್ರೀಂಕೋರ್ಟ್ ಬುಧವಾರ ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ.

  ಚುನಾವಣೆಯ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಘೋಷಿಸುವುದಕ್ಕೆ ಅವಕಾಶ ನೀಡಕೂಡದೆಂದು ಕೋರಿ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಆಲಿಕೆ ನಡೆಸಿದ ಸಂದರ್ಭ ಸುಪ್ರೀಂಕೋರ್ಟ್ ನ್ಯಾಯಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ಬಗ್ಗೆ ಸೂಕ್ತ ನಿರ್ಧಾರವೊಂದನ್ನು ಕೈಗೊಳ್ಳಲು ಸರಕಾರ, ನೀತಿ ಆಯೋಗ, ವಿತ್ತ ಆಯೋಗ, ಕಾನೂನು ಆಯೋಗ, ಚುನಾವಣಾ ಆಯೋಗ, ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಪ್ರತಿಪಕ್ಷ ಸದಸ್ಯರು ಸೇರಿದಂತೆ ಸಂಬಂಧಪಟ್ಟವರನ್ನು ಒಳಗೊಂಡ ತಜ್ಞರ ಸಮಿತಿಯೊಂದನ್ನು ರಚಿಸಬೇಕೆಂದು ಸಿಜೆಐ ಎನ್.ವಿ.ರಮಣ ಸೂಚಿಸಿದರು.

   ಅಶ್ವಿನಿ ಉಪಾಧ್ಯಾಯ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ವಿಕಾಸ್ ಸಿಂಗ್ ಅವರು, ಈ ತಜ್ಞರ ಸಮಿತಿಗೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು. ತರುವಾಯ, ರಾಜಕೀಯ ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆಯನ್ನು ನೀಡುವ ಮೊದಲು ತಮ್ಮಲ್ಲಿರುವ ನಿಧಿಗಳ ಮೂಲವನ್ನು ಬಹಿರಂಗಡಿಸಬೇಕೆಬ ಪ್ರಸ್ತಾವನೆಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದರು.

 ಕೇಂದ್ರ ಸರಕಾರದ ಪರವಾಗಿ ಪರವಾಗಿ ವಾದಿಸಿದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೆಲವು ರಾಜಕೀಯ ಪಕ್ಷಗಳು ಅಧಿಕಾರದಲ್ಲಿರದಿದ್ದರೂ ಮತದಾರರ ಮೇಲೆ ಪ್ರಭಾವ ಬೀರಲು ಉಚಿತಕೊಡುಗೆಗಳ ಭರವಸೆಯನ್ನು ನೀಡುತ್ತವೆ ಎಂದು ಲೈವ್ ಲಾ ವರದಿ ಮಾಡಿದೆ.

 ‘‘ಉದಾಹರಣೆಗೆ ಒಂದು ರಾಜಕೀಯ ಪಕ್ಷವು, ಯಾರೂ ವಿದ್ಯುತ್ ಶುಲ್ಕ ಪಾವತಿಸಬೇಕೆಂದಿಲ್ಲ ಎಂಬ ಭರವಸೆ ನೀಡುತ್ತದೆ. ಇದರಿಂದ ಜನ ಅಮಿಷಕ್ಕೊಳಗಾಗುತ್ತಾರೆ. ಇಂತಹ ವೆಚ್ಚಗಳನ್ನು ಭರಿಸಲು ಎಲ್ಲಿಂದ ಹಣಬರುತ್ತಿದೆಯೆಂಬುದು ನನಗೂ ತಿಳಿದಿಲ್ಲ. ಆದರೆ ತಿಳುವಳಿಕೆಯುಳ್ಳ ನಿರ್ಧಾರವನ್ನು ಕೈಗಳ್ಳುವಂತಹ ವಾತಾವರಣವನ್ನು ಮತದಾರನು ಹೊಂದಿದ್ದಾನೆಯೇ?’’ ಎಂದವರು ಪ್ರಶ್ನಿಸಿದರು.

ಆಮ್ ಆದ್ಮಿ ಪಕ್ಷದ ಪರವಾಗಿ ವಾದಿಸಿದ ಹಾಜರಾದ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಅವರು ಇದಕ್ಕೆ ಆಕ್ಷೇಪಪಡಿಸಿದರು ಹಾಗೂ ಮತದಾರರನನ್ನು ಎಂದೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲವೆಂದು ಹೇಳಿದರು.

 ‘‘ 1947ರಲ್ಲಿ ನಮ್ಮ ಸಾಕ್ಷರತೆಯ ದರವು ಶೇ.12ರಷ್ಟಿದಾಗಲೂ ನಾವು ಸಾರ್ವತ್ರಿಕವಾಗಿ ವಯಸ್ಕರಿಗೆ ಮತದಾನ ಹಕ್ಕನ್ನು ನೀಡಲಾಗಿತ್ತು ಎಂದರು. ಹೀಗಿರುವಾಗ ಮತದಾರರನ್ನು ಸುಲಭವಾಗಿ ಮೋಸಹೋಗುವವರು ಎಂಬುದಾಗಿ ಭಾವಿಸಬಾರದು ಎಂದರು.

 ಆನಂತರ ಸಿಜೆಐ ಅವರು, ಚುನಾವಣೆಯ ಸಂದರ್ಭ ಉಚಿತಕೊಡುಗೆಗಳನ್ನು ಘೋಷಿಸಲಾಗುತ್ತಿರುವದರ ಬಗ್ಗೆ ಚರ್ಚಿಸಲು ಕೇಂದ್ರ ಸರಕಾರವು ಯಾಕೆ ಸರ್ವ ಪಕ್ಷ ಸಭೆಯನ್ನು ಕರೆಯುತ್ತಿಲ್ಲವೆಂದು ಪ್ರಶ್ನಿಸಿದರು.  ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್ ಮೆಹ್ತಾ ಅವರು, ಉಚಿತ ಕೊಡುಗೆಗಳನ್ನು ಘೋಷಿಸುವುದು ತಮ್ಮ ಮೂಲಭೂತ ಹಕ್ಕೆಂದು ಕೆಲವು ರಾಜಕೀಯ ಪಕ್ಷಗಳು ಭಾವಿಸಿವೆ ಹಾಗೂ ಉಚಿತ ಕೊಡುಗೆಗಳನ್ನು ಘೋಷಿಸುವ ಮೂಲಕವೇ ಅವು ಅಧಿಕಾರಕ್ಕೇರಿವೆ ಎಂದು ಹೇಳಿದರು.

ಅಂತಿಮವಾಗಿ ಭಾರತದ ಮುಖ್ಯ ನ್ಯಾಯಮೂರ್ತಿಯವರು ಪ್ರಕರಣದ ವಿಚಾರಣೆಯನ್ನು ನ್ಯಾ.ಚಂದ್ರಚೂಡ ನೇತೃತ್ವದ ನ್ಯಾಯಪೀಠಕ್ಕೆ ವರ್ಗಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News