ಉಕ್ರೇನ್‍ ರೈಲು ನಿಲ್ದಾಣದ ಮೇಲೆ ರಾಕೆಟ್ ದಾಳಿ: ಕನಿಷ್ಠ 22 ಮಂದಿ ಮೃತ್ಯು

Update: 2022-08-25 02:35 GMT

ಕೀವ್: ಉಕ್ರೇನ್‍ನ ಸ್ವಾತಂತ್ರ್ಯ ದಿನವಾದ ಬುಧವಾರ ರಷ್ಯನ್ ಪಡೆಗಳು ಉಕ್ರೇನ್‍ನ ರೈಲು ನಿಲ್ದಾಣದ ಮೇಲೆ ನಡೆಸಿದ ರಾಕೆಟ್ ದಾಳಿಯಲ್ಲಿ ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ. ರಷ್ಯಾ ಕ್ರೂರ ಪ್ರಯತ್ನವನ್ನು ಮಾಡಬಹುದು ಎಂದು ಉಕ್ರೇನ್ ಅಧ್ಯಕ್ಷ ವ್ಲಾದಿಮಿರ್ ವೊಲೊದಿಮಿರ್ (Volodymyr Zelenskyy) ಕೆಲ ದಿನಗಳ ಹಿಂದಷ್ಟೇ ಎಚ್ಚರಿಕೆ ನೀಡಿದ್ದರು ಎಂದು timesofindia.com ವರದಿ ಮಾಡಿದೆ.

ಉಕ್ರೇನ್‍ನ ಕೇಂದ್ರ ನಿಪ್ರೊಪೆಸ್ಟ್ರೊವಸ್ ಪ್ರದೇಶದಲ್ಲಿರುವ 3500 ಜನಸಂಖ್ಯೆ ಹೊಂದಿದ ಚಾಪ್ಲಿನ್ ಪಟ್ಟಣದಲ್ಲಿ ಈ ಮಾರಕ ದಾಳಿ ನಡೆದಿದೆ ಎಂದು ಝೆಲೆನ್ಸ್ಕಿಯವರ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವೀಡಿಯೊ ಮೂಲಕ ಸ್ಪಷ್ಟಪಡಿಸಿದೆ. ಇದಕ್ಕೂ ಮುನ್ನ ನಿನ್ನೆ 11 ವರ್ಷದ ಮಗು ರಾಕೆಟ್ ದಾಳಿಯಲ್ಲಿ ಮೃತಪಟ್ಟಿರುವುದಾಗಿ ಅಧ್ಯಕ್ಷರ ಕಚೇರಿಯ ಪ್ರಕಟಣೆ ಹೇಳಿತ್ತು.

"ಚಾಪ್ಲಿನ್ ಇಂದು ನಮ್ಮ ನೋವು" ಎಂದು ದೈನಂದಿನ ವೀಡಿಯೊ ಸಂದೇಶದಲ್ಲಿ ಉಕ್ರೇನ್ ಅಧ್ಯಕ್ಷರು ಹೇಳಿದ್ದಾರೆ. ಈ ಘಟನೆಯಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಆದರೆ ರಾಕೆಟ್ ದಾಳಿಯಲ್ಲಿ ಐದು ರೈಲು ಬೋಗಿಗಳಿಗೆ ಹಾನಿಯಾಗಿದ್ದು, 22 ಮಂದಿ ಗಾಯಗೊಂಡಿದ್ದಾರೆ ಎಂದು ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.

1991ರಲ್ಲಿ ಸೋವಿಯತ್ ಒಕ್ಕೂಟದಿಂದ ಸ್ವಾತಂತ್ರ್ಯ ಪಡೆದ ದಿನವನ್ನು ಸಾರ್ವತ್ರಿಕ ರಜೆ ಮೂಲಕ ಉಕ್ರೇನ್‍ನಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಇದೇ ವೇಳೆ ಈ ದಾಳಿ ನಡೆದಿದೆ. ಉಭಯ ದೇಶಗಳ ನಡುವಿನ ಯುದ್ಧ ಬುಧವಾರ ಆರು ತಿಂಗಳನ್ನು ಪೂರ್ಣಗೊಳಿಸಿದಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News