ಷರತ್ತಿನೊಂದಿಗೆ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಶವಪರೀಕ್ಷೆಗೆ ಸಮ್ಮತಿಸಿದ ಕುಟುಂಬದ ಸದಸ್ಯರು
ಪಣಜಿ: ಗೋವಾದಲ್ಲಿ ಬಿಜೆಪಿ ನಾಯಕಿ ಸೋನಾಲಿ ಫೋಗಟ್ (BJP Leader Sonali Phogat death)ನಿಧನರಾದ ಎರಡು ದಿನಗಳ ನಂತರ ವೀಡಿಯೊ ಗ್ರಾಫ್ ಮಾಡಬೇಕೆಂಬ ಷರತ್ತಿನೊಂದಿಗೆ ಶವಪರೀಕ್ಷೆ ಅಥವಾ ವಿಧಿವಿಜ್ಞಾನ ಪರೀಕ್ಷೆಗೆ ಒಪ್ಪಿದ್ದೇವೆ ಎಂದು ಕುಟುಂಬದ ಸದಸ್ಯರು ಹೇಳಿದ್ದಾರೆ.
ಶವಪರೀಕ್ಷೆಯನ್ನು ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬುಧವಾರ ನಿಗದಿಪಡಿಸಲಾಗಿತ್ತು.
ಆದರೆ, ಸೋನಾಲಿ ಫೋಗಟ್ ಅವರ ಸಹೋದರ ರಿಂಕು ಢಾಕಾ ಅವರು ತನ್ನ ಸಹೋದರಿ ಇಬ್ಬರು ಸಹಚರರಿಂದ ಕೊಲೆಯಾಗಿದ್ದಾರೆ ಎಂದು ಬುಧವಾರ ಆರೋಪಿಸಿದ್ದಾರೆ. ಇಬ್ಬರು ವ್ಯಕ್ತಿಗಳ ವಿರುದ್ಧ ಗೋವಾ ಪೊಲೀಸರು ಎಫ್‌ಐಆರ್ ಅಥವಾ ಪೊಲೀಸ್ ಪ್ರಕರಣ ದಾಖಲಿಸಿದ ನಂತರವೇ ಕುಟುಂಬದವರು ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುತ್ತಾರೆ ಎಂದು ಅವರು ಹೇಳಿದ್ದರು.
ಸಂಪೂರ್ಣ ಕಾರ್ಯವಿಧಾನವನ್ನು ವೀಡಿಯೊ-ಗ್ರಾಫ್ ಮಾಡುವ ಷರತ್ತಿನೊಂದಿಗೆ ಕುಟುಂಬವು ಶವಪರೀಕ್ಷೆಗೆ ಒಪ್ಪಿಗೆ ನೀಡಿದೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ನಮ್ಮ ದೂರಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎನ್ನುವುದಾಗಿ ಇಂದು ಬೆಳಿಗ್ಗೆ ಸೋನಾಲಿ ಫೋಗಟ್ ಅವರ ಸೋದರಳಿಯ ಮೊಹಿಂದರ್ ಫೋಗಟ್ ಅವರು ಪಿಟಿಐಗೆ ತಿಳಿಸಿದರು.
ಟಿಕ್ ಟಾಕ್‌ನಲ್ಲಿ ಖ್ಯಾತಿ ಪಡೆದ ಹರ್ಯಾಣದ ಹಿಸಾರ್‌ನ ಬಿಜೆಪಿ ನಾಯಕಿ ಸೋನಾಲಿ ಫೋಗಟ್ (42ವರ್ಷ) ಅವರು ಮಂಗಳವಾರ ಬೆಳಿಗ್ಗೆ ಉತ್ತರ ಗೋವಾ ಜಿಲ್ಲೆಯ ಅಂಜುನಾ ಪ್ರದೇಶದ ಸೇಂಟ್ ಆಂಥೋನಿ ಆಸ್ಪತ್ರೆಯಲ್ಲಿ ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಬಳಿಕ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.