ಆರ್ಥಿಕ ಕೊರತೆಯಿಂದ ಗುತ್ತಿಗೆದಾರರಿಗೆ ಹಣ ಪಾವತಿ ಬಾಕಿ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Update: 2022-08-25 10:03 GMT

ಉಡುಪಿ: ಗುತ್ತಿಗೆದಾರರ ಸಂಘದವರು ಕಮಿಷನ್ ವಿಚಾರದಲ್ಲಿ ಸರಕಾರವನ್ನು ಟೀಕಿಸಿದ್ದಾರೆ. ನಮ್ಮ ಇಲಾಖೆಯ ವಸತಿ, ಶಿಕ್ಷಣ, ಶಾಲಾ ಕಟ್ಟಡದ ಹಣ ಪಾವತಿ ಬಾಕಿ ಇದೆ ಎಂದು ಹೇಳಿದ್ದಾರೆ. ಸುಮಾರು 1000 ಕೋಟಿ ರೂ. ನೀಡಲು ಬಾಕಿ ಇರುವುದು ನಿಜ. ಕೊರೋನದಿಂದ ಉಂಟಾಗಿರುವ ಎರಡು ವರ್ಷಗಳ ಆರ್ಥಿಕ ಕೊರತೆ ಯಿಂದ ಬಾಕಿ ಇರಿಸಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ  ಹೇಳಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಆರ್ಥಿಕ ವರ್ಷದಲ್ಲಿ 700 ಕೋಟಿ ನೀಡಲಾಗಿದೆ. ಈಗಾಗಲೇ 110ಕೋಟಿ ರೂ. ಎರಡು ಕಂತುಗಳ ಹಣ ಬಿಡುಗಡೆಯಾಗಿದೆ. ಜೇಷ್ಠತೆಯ ಆಧಾರದಲ್ಲಿ ಹಣ ಬಿಡುಗಡೆ ಮಾಡಿದ್ದೇವೆ. ಈ ಕುರಿತು ವೆಬ್‌ಸೈಟ್‌ನಲ್ಲಿ ಘೋಷಣೆ ಮಾಡಿ ದ್ದೇವೆ. ಮೊದಲು ಕೊಟ್ಟವರು, ಕೊನೆಗೆ ಕೊಟ್ಟವರು, ಆಮಿಷ ಒಡ್ಡಿದವರು ಯಾವುದನ್ನು ಕೂಡ ಪರಿಗಣಿಸಿಲ್ಲ. ಯಾರಿಗೆ ಹಣ ಬಿಡುಗಡೆ ಮಾಡಿದ್ದೇವೆ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಜೇಷ್ಠತೆಯ ಪಟ್ಟಿ ತಪ್ಪಿಹೋಗಿದ್ದರೆ ಬೇಕಾದರೆ ಹೇಳಲಿ ಎಂದರು.

ಕೊರೋನ ಕಾರಣದಿಂದ ಹಣ ಬಿಡುಗಡೆಯಾಗಿರಲಿಲ್ಲ. ಈಗಾಗಲೇ ಎರಡು ಕಂತು ಬಿಡುಗಡೆಯಾಗಿದೆ. ಮತ್ತೆರಡು ಕಂತು ಬಿಡುಗಡೆ ಮಾಡುತ್ತೇವೆ. ಬಾಕಿ ಹಣವನ್ನು ಮರು ಹೊಂದಾಣಿಕೆ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಬೇರೆ ಯಾವುದಾದರೂ ಇಲಾಖೆಯಲ್ಲಿ ಹಣ ಉಳಿದಿದ್ದರೆ ಹೊಂದಾಣಿಕೆ ಮಾಡುತ್ತೇವೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಇಲಾಖೆ ಯಲ್ಲಿ ಭ್ರಷ್ಟಾಚಾರ ಆಗಿದ್ದರೆ ಬಹಿರಂಗವಾಗಿ ಹೇಳಲಿ ಎಂದು ಅವರು ಸವಾಲು ಹಾಕಿದರು.

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಆರೋಪ ಮಾಡುವ ತನಿಖೆಗೆ ಆಗ್ರಹಿಸುವ ಅಧಿಕಾರ ಇದೆ. ಒಂದು ಸರಕಾರದ ಮೇಲೆ ಆರೋಪ ಮಾಡುವಾಗ, ವಿರೋಧ ಪಕ್ಷಕ್ಕೆ ಹೋಗಿ ದೂರು ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು,  ಹೈಕೋರ್ಟಿನಲ್ಲೂ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಬಹುದು. ಬೇಕಿದ್ದರೆ ಲೋಕಾಯುಕ್ತಕ್ಕೆ ದೂರು ಕೊಟ್ಟು ತನಿಖೆಗೆ ಒತ್ತಾಯಿಸಬಹುದು ಎಂದರು.

ವಿನಾಕಾರಣ ಶೇ.100, ಶೇ.50 ಎಂದು ಆರೋಪಿಸಬಾರದು.  ಯಾರಿಗೆ ಕೊಟ್ಟಿದ್ದಾರೆ ಎಂದು ಬಹಿರಂಗಪಡಿಸಲಿ. ಇದೆಲ್ಲವು ಕೇವಲ ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ ಎಂದು ಅನಿಸುತ್ತದೆ. ಸರಕಾರಕ್ಕೆ ಅಪಮಾನ, ಆಗೌರವ ಮಾಡುವ ಉದ್ದೇಶ ಇದರ ಹಿಂದೆ ಇದೆ. ಆಧಾರ ಕೊಡದಿದ್ದರೆ ಬೇಡ, ಸಾಕ್ಷಿ ಕೊಡದಿದ್ದರೆ ಬೇಡ ಆತ್ಮ ಸಾಕ್ಷಿಗೆ ಸರಿಯಾಗಿ ನಡೆದುಕೊಳ್ಳಲಿ ಎಂದು ಸಚಿವರು ತಿಳಿಹೇಳಿದರು.

ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಈಶ್ವರಪ್ಪ ರಾಜೀನಾಮೆ ಕೊಟ್ಟಿದ್ದಾರೆ. ತನಿಖೆಯಲ್ಲಿ ಈಶ್ವರಪ್ಪ ನಿರ್ದೋಷಿ ಎಂದು ಹೇಳಲಾಗಿದೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲು ಕುಟುಂಬದವರಿಗೆ ಅವಕಾಶ ಇದೆ. ನಾನು ಮತ್ತೊಮ್ಮೆ ನಿರ್ದೋಷಿಯಾಗಿ ಹೊರ ಬರುತ್ತೇನೆ ಎಂದು ಈಶ್ವರಪ್ಪ ಈಗಾಗಲೇ ಹೇಳಿದ್ದಾರೆ. ಈ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಅವರು ತಿಳಿಸಿದರು.

"ನಿರ್ದಿಷ್ಟ ವಿಚಾರಗಳಿದ್ದರೆ ದಾಖಲೆ ಸಹಿತ ಆರೋಪ ಮಾಡಲಿ. ಸರಕಾರದ ಮೇಲೆ ಈ ರೀತಿ ಗೂಬೆ ಕೂರಿಸುವುದು ಸರಿಯಲ್ಲ. ನನ್ನ ಇಲಾಖೆಯಲ್ಲಿ ಶೇ.40-50 ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ತೋರಿಸಲಿ. ವ್ಯವಸ್ಥೆಯನ್ನು ಸರಿಪಡಿಸುವ ಬದಲು ಗೊಂದಲ ಮೂಡಿಸಲಾಗುತ್ತಿದೆ. ಕೆಂಪಣ್ಣ ಸೇರಿದಂತೆ ಉಳಿದವರೆಲ್ಲರೂ ಇದರ ಬಗ್ಗೆ ಆಲೋಚಿಸಬೇಕು. ಸರಕಾರವನ್ನು ಟೀಕಿಸುವ ವಿರೋಧ ಪಕ್ಷದ ನಾಯಕರಿಗೆ ನೀವು ದೂರು ಕೊಡುತ್ತೀರಿ. ನಿಮಗೆ ನ್ಯಾಯ ಸಿಗುವುದು ಎಲ್ಲಿ? ವಿರೋಧ ಪಕ್ಷ ನಾಯಕರ ಮನೆಯಂಗಳದಲ್ಲಿಯೇ?"
-ಕೋಟ ಶ್ರೀನಿವಾಸ ಪೂಜಾರಿ, ಸಚಿವರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News