×
Ad

ತಮ್ಮ ವಿರುದ್ಧ 'ದುರುದ್ದೇಶಿತ ಅಭಿಯಾನ' ನಡೆಸುವವರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಗಡ್ಕರಿ

Update: 2022-08-25 17:06 IST

 ಹೊಸದಿಲ್ಲಿ: ತಮ್ಮ ಹೇಳಿಕೆಗಳನ್ನು ತಿರುಚುವ ಮೂಲಕ ತಮ್ಮ ವಿರುದ್ಧ ದುರುದ್ದೇಶಿತ ಅಭಿಯಾನ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ(Nitin Gadkari) ನೀಡಿದ್ದಾರೆ.

ಮಂಗಳವಾರ ನಡೆದ ಪುಸ್ತಕ ಬಿಡುಗಡೆ(Book Release) ಸಮಾರಂಭವೊಂದರಲ್ಲಿ ತಾವು ನೀಡಿದ ಭಾಷಣದ ಕೆಲ ಆಯ್ದ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹರಿಯಬಿಟ್ಟಿರುವುದರಿಂದ ಆಕ್ರೋಶಗೊಂಡಿರುವ ಸಚಿವರು ಈ ಭಾಷಣದ ಯುಟ್ಯೂಬ್ ಲಿಂಕ್(Youtube link) ಅನ್ನು ಇಂದು ಟ್ವಿಟ್ಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

"ಇಂತಹ ದುರುದ್ದೇಶಿತ ಅಜೆಂಡಾಗಳಿಂದ ನಾನು ವಿಚಲಿತನಾಗುವುದಿಲ್ಲ ಆದರೆ ಇಂತಹ ಕಿಡಿಗೇಡಿ ಕೃತ್ಯವನ್ನು ಮುಂದೆಯೂ ಮಾಡಿದರೆ, ನಮ್ಮ ಸರಕಾರ, ಪಕ್ಷ ಮತ್ತು ನಿಷ್ಠಾವಂತ ಕಾರ್ಯಕರ್ತರ ಹಿತದೃಷ್ಟಿಯಿಂದ ಕಾನೂನಿನ ಮೊರೆ ಹೋಗಲು ನಾನು ಹಿಂಜರಿಯುವುದಿಲ್ಲ" ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ.

"ನನ್ನನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯ ಲಾಭಗಿಟ್ಟಿಸಲು ಕೆಲ ಮುಖ್ಯವಾಹಿನಿ ಮಾಧ್ಯಮಗಳು, ಸಾಮಾಜಿಕ ಜಾಲತಾಣಿಗರು ಹಾಗೂ ಕೆಲ ವ್ಯಕ್ತಿಗಳು ದುರುದ್ದೇಶಿತ ಅಭಿಯಾನ ನಡೆಸುತ್ತಿದ್ದಾರೆ ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿನ ನನ್ನ ಹೇಳಿಕೆಗಳನ್ನು ತಿರುಚುತ್ತಿದ್ದಾರೆ" ಎಂದು ಗಡ್ಕರಿ ಹೇಳಿದ್ದಾರೆ.

ತಮ್ಮ ನೇರಾನೇರ ಮಾತುಗಳಿಗೆ ಹೆಸರುವಾಸಿಯಾಗಿರುವ ಗಡ್ಕರಿ ಅವರನ್ನು ಇತ್ತೀಚೆಗೆ ಬಿಜೆಪಿ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿರುವುದನ್ನು ಇಲ್ಲಿ ಸ್ಮರಿಸಬಹುದು. ಮಂಗಳವಾರ ನಡೆದ ಡಾ ಧ್ಯಾನೇಶ್ವರ್ ಎಂ ಮುಲಯ್ ಅವರ 'ನೌಕರ್‍ಶಾಹಿ ಕೆ ರಂಗ್' ಎಂಬ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುವ ವೇಳೆ ಗಡ್ಕರಿ ಅವರು ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ರಸ್ತೆ ನಿರ್ಮಾಣ ಕುರಿತು ನಡೆದ ಹಳೆಯ ಘಟನೆಯೊಂದನ್ನು ನೆನಪಿಸಿಕೊಂಡಿದ್ದರು. ಆ ಸಂದರ್ಭ ಅವರು ಸಂಬಂಧಿತ ಅಧಿಕಾರಿಯನ್ನುದ್ದೇಶಿಸಿ "ನಾನು ಪರಿಣಾಮಗಳ ಬಗ್ಗೆ ಚಿಂತಿಸುವುದಿಲ್ಲ, ಆದರೆ ಈ ಕೆಲಸ ಮಾಡುತ್ತೇನೆ. ಸಾಧ್ಯವಿದ್ದರೆ ನನ್ನ ಜೊತೆ ನಿಲ್ಲಿ ಇಲ್ಲದೇ ಇದ್ದರೆ ನನಗೆ ಪರಿವೆಯಿಲ್ಲ" ಎಂದು ಹೇಳಿದ್ದನ್ನು ಗಡ್ಕರಿ ವಿವರಿಸಿದ್ದರು.

ಆದರೆ ಅವರಿಗೆ ತಮ್ಮ ಹುದ್ದೆಯ ಬಗ್ಗೆ ಚಿಂತೆಯಿಲ್ಲ ಎಂಬರ್ಥ ಬರುವ ರೀತಿಯಲ್ಲಿ ಆ ಕಾರ್ಯಕ್ರಮದ ವೀಡಿಯೋ ತುಣುಕನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಆಪ್ ನಾಯಕ ಸಂಜಯ್ ಸಿಂಗ್(Sanjay Singh) ಕೂಡ ಈ ತಿರುಚಿದ ವೀಡಿಯೋ ಟ್ವೀಟ್ ಮಾಡಿ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದಿದ್ದರು.

ಭಿನ್ನ ಹಾಗೂ ಆಕರ್ಷಕ ಹೇಳಿಕೆಗಳನ್ನು ಗಡ್ಕರಿ ನೀಡುತ್ತಿದ್ದಾರೆಂಬ ಕಾರಣಕ್ಕೆ ಬಿಜೆಪಿ ಮಾಜಿ ಅಧ್ಯಕ್ಷರಾಗಿರುವ ಗಡ್ಕರಿ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ ಎಂದು ಹಲವು ಪಕ್ಷ ಮೂಲಗಳನ್ನು ಉಲ್ಲೇಖಿಸಿ ಪ್ರಮುಖ ದೈನಿಕವೊಂದೂ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News