ಅಗ್ನಿಪಥ್‌ ಕುರಿತು ಸರ್ವಾನುಮತದ ಅಭಿಪ್ರಾಯ ಹೊಂದುವ ತನಕ ನಮ್ಮ ಯುವಕರನ್ನು ನೇಮಕಗೊಳಿಸಬೇಡಿ: ನೇಪಾಳ ಸರಕಾರ

Update: 2022-08-25 14:24 GMT

 ಹೊಸದಿಲ್ಲಿ: ಅಗ್ನಿಪಥ್ ಯೋಜನೆ ಕುರಿತು ಹೆಚ್ಚು ಸ್ಪಷ್ಟತೆ ದೊರೆಯುವ ತನಕ ಭಾರತೀಯ ಸೇನೆಗೆ ನೇಪಾಳಿ (Nepal) ಯುವಕರ ನೇಮಕಾತಿಯನ್ನು ಮುಂದೂಡುವಂತೆ ನೇಪಾಳ ಸರಕಾರ ಭಾರತೀಯ ಸೇನೆಯನ್ನು(Indian Army) ಕೋರಿದೆ.

ನೇಪಾಳದ ವಿದೇಶಾಂಗ ಸಚಿವ ನಾರಾಯಣ್ ಖಡ್ಕ ಅವರು ಅಲ್ಲಿನ ಭಾರತೀಯ ರಾಯಭಾರಿ ನವೀನ್ ಶ್ರೀವಾಸ್ತವ ಅವರನ್ನು ತಮ್ಮ ಕಚೇರಿಗೆ ಕರೆಸಿ ಈ ಮನವಿ ಮಾಡಿದ್ದಾರೆ. ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಯ ಗೋರ್ಖಾ ರೆಜಿಮೆಂಟ್‍ಗೆ (Gorkha Regiment) ನೇಪಾಳಿ ಯುವಕರು ಸೇರಬಹುದಾಗಿದೆ.

ಭಾರತೀಯ ಸೇನೆಯು ಅಗ್ನಿಪಥ್(Agnipath) ಯೋಜನೆಗೆ ನೇಪಾಳಿಗಳನ್ನು  ಬುಟ್ವಾಲ್ ನಗರದಲ್ಲಿ ಇಂದು  ಆಯ್ಕೆ ಮಾಡುವ ಶಿಬಿರ  ನಡೆಸಲಿದ್ದರೆ ಸೆಪ್ಟೆಂಬರ್ 1ರಂದು ಧಾರಣ್ ನಗರದಲ್ಲಿ ನೇಮಕಾತಿ ಶಿಬಿರ ನಡೆಯಲಿತ್ತು.

ನೇಪಾಳದ ಎಲ್ಲಾ ರಾಜಕೀಯ ಪಕ್ಷಗಳು ಅಗ್ನಿಪಥ್ ಯೋಜನೆ ಬಗ್ಗೆ ಸರ್ವಾನುಮತದ ಅಭಿಪ್ರಾಯ ಹೊಂದುವ ತನಕ ಭಾರತ ಈ ಯೋಜನೆಯಡಿ ನೇಮಕಾತಿ ಸ್ಥಗಿತಗೊಳಿಸಬೇಕು ಎಂದು ಅಲ್ಲಿನ ವಿದೇಶಾಂಗ ಸಚಿವರು ಕೋರಿದ್ದಾರೆ.

ಜೂನ್ 14ರಂದು ಅಗ್ನಿಪಥ್ ಯೋಜನೆ ಘೋಷಣೆಯಾದ ನಂತರ ಭಾರತೀಯ ಸೇನೆ ನೇಪಾಳದ ರಾಜಧಾನಿ ಕಾಠ್ಮಂಡುವಿನಲ್ಲಿರುವ ಭಾರತೀಯ ದೂತಾವಾಸದ ಮೂಲಕ ನೇಪಾಳದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದು ನೇಪಾಳಿ ಯುವಕರನ್ನು ಈ ಯೋಜನೆಯಡಿ ನೇಮಕಾತಿಗೆ ಅನುಮೋದನೆ ಕೋರಿತ್ತು. ಆದರೆ ಈ ಕುರಿತು ಪ್ರತಿಕ್ರಿಯಿಸದೇ ಇದ್ದ ನೇಪಾಳ ಸರಕಾರ, ನೇಮಕಾತಿ ಶಿಬಿರಗಳು ಗುರುವಾರ ನಡೆಯಲಿದ್ದರೆ ಅದಕ್ಕಿಂತ ಒಂದು ದಿನ ಮುಂಚಿತವಾಗಿ, ಅಂದರೆ ಬುಧವಾರ, ನೇಮಕಾತಿ ನಡೆಸದಂತೆ ಸೂಚಿಸಿದೆ.

ಈ ಯೋಜನೆಯಡಿ ನೇಮಕಾತಿ ಪಡೆದವರು ನಾಲ್ಕು ವರ್ಷಗಳ ನಂತರ ಮತ್ತೆ ನೇಪಾಳಕ್ಕೆ ವಾಪಸ್ ಬರುವಾಗ ಅಲ್ಲಿ ಅದರಿಂದ ಉಂಟಾಗುವ ಸಾಮಾಜಿಕ ಪರಿಣಾಮಗಳ ಬಗ್ಗೆಯೂ ನೇಪಾಳಿ ರಕ್ಷಣಾ ವಿಶ್ಲೇಷಕರು ಕಳವಳ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News