×
Ad

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ರಷ್ಯಾ ವಿರುದ್ಧ ಮೊದಲ ಬಾರಿ ಮತ ಚಲಾಯಿಸಿದ ಭಾರತ

Update: 2022-08-25 19:47 IST
Photo: Twitter/nexta_tv

ನ್ಯೂಯಾರ್ಕ್, ಆ.೨೫: ಉಕ್ರೇನ್ ವಿಷಯಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸಭೆಯಲ್ಲಿ ಬುಧವಾರ ನಡೆದ `ಕಾರ್ಯವಿಧಾನದ ಮತದಾನ'ದ ಸಂದರ್ಭ ಭಾರತ, ಇದೇ ಮೊದಲ ಬಾರಿಗೆ  ರಶ್ಯದ ವಿರುದ್ಧ ಮತ ಚಲಾಯಿಸಿದೆ. ಬಳಿಕ  ಸಭೆಯನ್ನುದ್ದೇಶಿಸಿ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಲು ಭದ್ರತಾ ಮಂಡಳಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿಗೆ ಅವಕಾಶ ನೀಡಿದೆ.

ಉಕ್ರೇನ್ ಮೇಲಿನ ರಶ್ಯದ ಆಕ್ರಮಣಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ರಶ್ಯ ವಿರುದ್ಧದ ನಿಲುವು ತಳೆದಿದೆ. ಇದಕ್ಕೂ ಮುನ್ನ ಉಕ್ರೇನ್ ವಿಷಯಕ್ಕೆ ಸಂಬಂಧಿಸಿ ನಡೆದಿದ್ದ ಹಲವು ಮತದಾನಗಳಿಂದ ಭಾರತ ದೂರ ಉಳಿದು ತಟಸ್ಥ ನಿಲುವು ತೋರಿತ್ತು. ಭಾರತವು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯನಾಗಿದೆ.

ಉಕ್ರೇನ್ ನ ೩೧ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭ ಬುಧವಾರ (ಆಗಸ್ಟ್ ೨೪) ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಉಕ್ರೇನ್-ರಶ್ಯ ನಡುವೆ ೬ ತಿಂಗಳಿAದಲೂ ಮುಂದುವರಿದಿರುವ ಸಂಘರ್ಷದ ಬಗ್ಗೆ ಪರಾಮರ್ಶೆ ನಡೆಸಲು ಸಭೆ ಸೇರಿತ್ತು. ಸಭೆ ಆರಂಭವಾಗುತ್ತಿದ್ದಂತೆಯೇ, ವೀಡಿಯೊ ಟೆಲಿಕಾನ್ಫರೆನ್ಸ್ ಮೂಲಕ ಸಭೆಯನ್ನುದ್ದೇಶಿಸಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತನಾಡುವ ಕಾರ್ಯಸೂಚಿಯ ಬಗ್ಗೆ ಆಕ್ಷೇಪಿಸಿದ ವಿಶ್ವಸಂಸ್ಥೆಗೆ ರಶ್ಯದ ರಾಯಭಾರಿ ವ್ಯಾಸಿಲಿ ಎ ನೆಬೆಂಝಿಯಾ, ಈ ವಿಷಯದ ಬಗ್ಗೆ `ಕಾರ್ಯವಿಧಾನದ ಮತದಾನ' ನಡೆಯಬೇಕು ಎಂದು ಆಗ್ರಹಿಸಿದರು.

ಅದರಂತೆ ನಡೆದ ಮತದಾನದಲ್ಲಿ , ಪ್ರಸ್ತಾವನೆಯ ಪರ ೧೩, ವಿರೋಧವಾಗಿ ೧ (ರಶ್ಯ) ಮತ ಚಲಾವಣೆಯಾದರೆ, ಚೀನಾ ಮತದಾನದಿಂದ ದೂರ ಉಳಿಯಿತು. ಆಗ ಮತ್ತೆ ಆಕ್ಷೇಪ ಎತ್ತಿದ ನೆಬೆಂಝಿಯಾ, ಝೆಲೆನ್ಸ್ಕಿ ಮಾತನಾಡುವುದಕ್ಕೆ ತಮ್ಮ ದೇಶದ ಆಕ್ಷೇಪವಿಲ್ಲ, ಆದರೆ ಅವರು ವೈಯಕ್ತಿಕವಾಗಿ ಹಾಜರಾಗಿ ಮಾತನಾಡಬೇಕು. ಕೋವಿಡ್ ಸಾಂಕ್ರಾಮಿಕದ ಸಂದರ್ಭ ಅಳವಡಿಸಲಾಗಿದ್ದ ವೀಡಿಯೊ ಕಾನ್ಫರೆನ್ಸಿಂಗ್ ಪ್ರಕ್ರಿಯೆ ಈಗ ಅಗತ್ಯವಿಲ್ಲ ಎಂದು ವಾದಿಸಿದರು. ವೀಡಿಯೊ ಕಾನ್ಫರೆನ್ಸಿಂಗ್ ಭಾಷಣದ ಬಗ್ಗೆ ಮತ್ತೆ ಕಾರ್ಯವಿಧಾನದ ಮತದಾನ ನಡೆಯಲಿ ಎಂದು ನೆಬೆಂಝಿಯಾ ಪಟ್ಟು ಹಿಡಿದಾಗ ಭಾರತ ಸೇರಿದಂತೆ ೧೩ ಸದಸ್ಯ ದೇಶಗಳು ವಿರೋಧಿಸಿದವು. ಉಕ್ರೇನ್ನಲ್ಲಿ ಯುದ್ಧ ನಡೆಯುತ್ತಿರುವುದರಿಂದ ಅದರ ಅಧ್ಯಕ್ಷರು ದೇಶದಲ್ಲಿ  ಉಪಸ್ಥಿತರಿರುವ ಅಗತ್ಯವಿದೆ ಎಂದು ಅಲ್ಬಾನಿಯಾದ ರಾಯಭಾರಿ ವಾದಿಸಿದರು. ಇದಕ್ಕೆ ೧೩ ದೇಶಗಳ ಪ್ರತಿನಿಧಿಗಳು ಧ್ವನಿಗೂಡಿಸಿದರು.

ಬಳಿಕ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಭೆಯನ್ನುದ್ದೇಶಿಸಿ ಮಾತನಾಡಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಉಕ್ರೇನ್ ವಿರುದ್ಧದ ಆಕ್ರಮಣದ ಅಪರಾಧಗಳಿಗೆ ರಶ್ಯವನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು. ಯುದ್ಧದ ಸಂದರ್ಭದಲ್ಲಿ  ಅಂತರಾಷ್ಟ್ರೀಯ ಮಾನವೀಯ ಕಾನೂನು ಉಲ್ಲಂಘನೆಯಾಗಿರುವ ಆರೋಪದ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಕೂಡಾ ತೀವ್ರ ಆತಂಕ, ಕಳವಳ ವ್ಯಕ್ತಪಡಿಸಿದರು.

ರಶ್ಯದ ಗುರಿ ಎಂದಿನಂತೆ ಸ್ಪಷ್ಟವಾಗಿದೆ. ಉಕ್ರೇನ್ ಅನ್ನು ಜಾಗತಿಕ ನಕಾಶೆಯಿಂದ ಅಳಿಸಿ ಹಾಕುವುದು ಈ ಗುರಿಯಾಗಿದೆ. ಉಕ್ರೇನ್ನ ಇನ್ನಷ್ಟು ಪ್ರದೇಶಗಳನ್ನು ಅತಿಕ್ರಮಿಸಿಕೊಳ್ಳಲು ಸುಳ್ಳು ಮಾಹಿತಿ ಪ್ರಸಾರವನ್ನು ಆಯುಧವನ್ನಾಗಿ ಆ ದೇಶ ಬಳಸಿಕೊಳ್ಳುತ್ತಿದೆ. ಆದರೆ ಬಲವಂತದಿAದ ಉಕ್ರೇನ್ನ ಗಡಿಯನ್ನು ಬದಲಾಯಿಸುವ ಪ್ರಯತ್ನವನ್ನು ಅಂತರಾಷ್ಟಿçÃಯ ಸಮುದಾಯ ಯಾವತ್ತೂ ಮಾನ್ಯ ಮಾಡುವುದಿಲ್ಲ ಎಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್ಫೀಲ್ಡ್  ಸಭೆಯಲ್ಲಿ ಹೇಳಿದರು. ಫ್ರಾನ್ಸ್, ಐರ್ಲ್ಯಾಂಡ್, ನಾರ್ವೆ, ಬ್ರಿಟನ್, ಗಾಬನ್, ಘಾನಾ, ಮೆಕ್ಸಿಕೋ ಮತ್ತು ಚೀನಾದ ರಾಯಭಾರಿಗಳು ಸಭೆಯನ್ನುದ್ದೇಶಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ವಿಶೇಷ ವೀಕ್ಷಕರ ನೆಲೆಯಲ್ಲಿ ಹಾಜರಿದ್ದ ಯುರೋಪಿಯನ್ ಯೂನಿಯನ್ ಪ್ರತಿನಿಧಿಗೂ ಸಭೆಯಲ್ಲಿ ಮಾತನಾಡುವ ಅವಕಾಶ ದೊರಕಿತು ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News