ರಶ್ಯವನ್ನು ತಡೆಯದಿದ್ದರೆ ಜಾಗತಿಕ ವಿನಾಶವಾಗಲಿದೆ: ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ

Update: 2022-08-25 15:35 GMT

ಕೀವ್, ಆ.೨೫: ರಶ್ಯವನ್ನು ಈಗಲೇ ತಡೆದು ನಿಲ್ಲಿಸದಿದ್ದರೆ ಆ ದೇಶದ ಕೊಲೆಗಾರರು ಖಂಡಿತಾ ಇತರ ದೇಶಗಳತ್ತ ಕಣ್ಣು ಹಾಕುತ್ತಾರೆ. ಉಕ್ರೇನ್ ಮೇಲಿನ ಆಕ್ರಮಣದ ಸಂದರ್ಭ ನಡೆದಿರುವ ಅಪರಾಧ ಕೃತ್ಯಗಳಿಗೆ ರಶ್ಯವನ್ನು ಹೊಣೆಗಾರರನ್ನಾಗಿಸಲು ಅಂತರಾಷ್ಟ್ರೀಯ ಸಮುದಾಯ ಮತ್ತು ವಿಶ್ವಸಂಸ್ಥೆ ಕ್ರಮ ಕೈಗೊಳ್ಳಬೇಕು ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆಗ್ರಹಿಸಿದ್ದಾರೆ.

ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್ ಭೂಪ್ರದೇಶದಲ್ಲಿ ವಿಶ್ವದ ಭವಿಷ್ಯವನ್ನು ನಿರ್ಧರಿಸಲಾಗುತ್ತದೆ. ನಮ್ಮ ಸ್ವಾತಂತ್ರ್ಯವು ನಿಮ್ಮ ಭದ್ರತೆಯಾಗಿದೆ ಎಂದರು. ಝಪೋರಿಝಿಯ ಅಣುವಿದ್ಯುತ್ ಸ್ಥಾವರವನ್ನು ಯುದ್ಧವಲಯನ್ನಾಗಿ ಪರಿವರ್ತಿಸುವ ಮೂಲಕ ರಶ್ಯವು ವಿಶ್ವವನ್ನು ಪರಮಾಣು ದುರಂತದ ಅಂಚಿಗೆ ತಂದು ನಿಲ್ಲಿಸಿದೆ. 

ಚೆರ್ನೋಬಿಲ್ನಲ್ಲಿ ಒಂದು ರಿಯಾಕ್ಟರ್ ಸ್ಫೋಟಿಸಿದಾಗ ಆಗಿದ್ದ ವಿಪತ್ತನ್ನು ಅಂತರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ(ಐಎಇಎ) ಮರೆಯಬಾರದು. ಝಪೋರಿಝಿಯದಲ್ಲಿ ೬ ರಿಯಾಕ್ಟರ್ಗಳಿವೆ. ಆದ್ದರಿಂದ  ಐಎಇಎ ತಕ್ಷಣ ಇದನ್ನು ತನ್ನ ನಿಯಂತ್ರಣಕ್ಕೆ ಪಡೆಯಬೇಕು. ರಶ್ಯವು ಇಲ್ಲಿ ಪರಮಾಣು ಬ್ಲಾಕ್ಮೇಲ್ ನಡೆಸುವುದನ್ನು ಬಿಟ್ಟು ಕೂಡಲೇ ಹಿಂದೆ ಸರಿಯಬೇಕು  ಎಂದು ಝೆಲೆನ್ಸ್ಕಿ ಆಗ್ರಹಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News