ಸೋನಾಲಿ ಫೋಗಟ್‌ರನ್ನು ಅತ್ಯಾಚಾರ ಎಸಗಿ ಹತ್ಯೆಗೈಯಲಾಗಿದೆ: ಕುಟುಂಬ ಆರೋಪ
ಪಣಜಿ, ಆ. 25: ತನ್ನ ಸಹೋದರಿಯನ್ನು ಆಕೆಯ ಆಪ್ತ ಸಹಾಯಕ ಸುಧೀರ್ ಸಂಗ್ವಾನ್ ಹಾಗೂ ಆತನ ಗೆಳೆಯ ಸುಖ್ವಿಂದರ್ ಅತ್ಯಾಚಾರ ಎಸಗಿ ಹತ್ಯೆಗೈದಿದ್ದಾರೆ ಎಂದು ಆರೋಪಿಸಿ ಸೋನಾಲಿ ಫೋಗಟ್ ಸಹೋದರ ರಿಂಕು ಧಾಕಾ ಅವರು ಗೋವಾ ಪೊಲೀಸರಿಗೆ ದೂರು ನೀಡಿದ್ದಾರೆ.
ಬಿಜೆಪಿಯ ನಾಯಕಿಯಾಗಿರುವ ಸೋನಾಲಿ ಫೋಗಟ್ ಅವರು ಆಗಸ್ಟ್ 23ರಂದು ಸಾವನ್ನಪ್ಪುವ ಕೆಲವು ಗಂಟೆಗಳಿಗೆ ಮುನ್ನ ತನ್ನ ತಾಯಿ, ಸಹೋದರಿ ಹಾಗೂ ಸೋದರಳಿಯನೊಂದಿಗೆ ಮಾತನಾಡಿದ್ದಾರೆ. ಮಾತುಕತೆಯ ಸಂದರ್ಭ ಅವರು ತನ್ನ ಸಿಬ್ಬಂದಿ ಬಗ್ಗೆ ದೂರಿದ್ದಾರೆ ಎಂದು ರಿಂಕು ಧಾಕಾ ದೂರಿನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆ; ಪುರಸಭೆ ಅಧ್ಯಕ್ಷರ ಪದಗ್ರಹಣ ವೇಳೆ ಕುರಾನ್ ಪಠಿಸಿದ ಆರೋಪ: ಸಭಾಂಗಣಕ್ಕೆ ಗೋಮೂತ್ರ ಸಿಂಪಡಿಸಿದ BJP ಸದಸ್ಯರು
‘‘ಸಂಗ್ವಾನ್ ತನಗೆ ಮತ್ತು ಬರುವ ಔಷಧ ಸೇರಿಸಿದ ಆಹಾರ ನೀಡಿದ್ದ. ತಾನು ಪ್ರಜ್ಞೆ ಕಳೆದುಕೊಂಡ ಬಳಿಕ ಅತ್ಯಾಚಾರ ಎಸಗಿದ್ದ ಹಾಗೂ ವೀಡಿಯೊ ಮಾಡಿದ್ದ. ಅನಂತರ ವೀಡಿಯೊವನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿದ್ದ ಎಂದು ಆಕೆ (ಸೋನಾಲಿ) ತಿಳಿಸಿದ್ದಾಳೆ’’ ಎಂದು ದೂರಿನಲ್ಲಿ ಹೇಳಲಾಗಿದೆ.
ರಾಜಕೀಯ ಹಾಗೂ ನಟನೆಯ ವೃತ್ತಿ ಬದುಕನ್ನು ನಾಶಮಾಡಲಾಗುವುದು ಎಂದು ಸಂಗ್ವಾನ್ ಬೆದರಿಕೆ ಕೂಡ ಒಡ್ಡಿದ್ದ. ಅಲ್ಲದೆ, ಆಕೆಯ ಮೊಬೈಲ್ ಫೋನ್, ಸೊತ್ತಿನ ದಾಖಲೆಗಳು, ಎಟಿಎಂ ಕಾರ್ಡ್ ಹಾಗೂ ಮನೆಯ ಕೀಲಿ ಕೈಗಳನ್ನು ವಶಪಡಿಸಿಕೊಂಡಿದ್ದ ಎಂದು ದೂರಿನಲ್ಲಿ ಪ್ರತಿಪಾದಿಸಲಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸೋನಾಲಿ ಫೋಗಟ್ ಅವರ ಸೋದರಳಿಯ ಮೋನಿಂದರ್ ಫೋಗಟ್, ನಮ್ಮ ಸಹೋದರಿಯನ್ನು ಅತ್ಯಾಚಾರಗೈದು ಹತ್ಯೆಗೈಯಲಾಗಿದೆ ಎಂಬದು ಖಚಿತವಾಗಿದೆ ಎಂದಿದ್ದಾರೆ. ಗೋವಾದಲ್ಲಿ ನಡೆಸಲಾದ ಮರಣೋತ್ತರ ಪರೀಕ್ಷೆ ಬಗ್ಗೆ ಸೋನಾಲಿ ಕುಟಂಬದ ಸದಸ್ಯರು ತೃಪ್ತರಾಗಿಲ್ಲ. ನಾವು ಹೊಸದಿಲ್ಲಿ ಏಮ್ಸ್‌ನಲ್ಲಿ ಸಹೋದರಿಯ ಮರಣೋತ್ತರ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲಿದ್ದೇವೆ ಎಂದು ರಿಂಕು ಧಾಕಾ ತಿಳಿಸಿದ್ದಾರೆ.
‘‘ನಮಗೆ ಇಲ್ಲಿ ತೃಪ್ತಿಯಾಗಿಲ್ಲ. ನಾವು ದಿಲ್ಲಿಯ ಏಮ್ಸ್‌ನಲ್ಲಿ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲಿದ್ದೇವೆ. ನನ್ನ ಸಹೋದರಿ ಬಿಜೆಪಿಗೆ ಬದ್ಧರಾಗಿದ್ದರು. ಆದರೆ, ಒಬ್ಬನೇ ಒಬ್ಬ ಬಿಜೆಪಿ ನಾಯಕ ನಮಗೆ ನೆರವು ನೀಡಲು ಇಲ್ಲಿಗೆ ಬಂದಿಲ್ಲ. ನಮಗೆ ನ್ಯಾಯ ಬೇಕು’’ ಎಂದು ರಿಂಕು ಧಾಕಾ ಹೇಳಿದ್ದಾರೆ.
ತನ್ನ ಸಹೋದರಿಗೆ ವಿಷ ಪ್ರಾಶನ ಮಾಡಲಾಗಿದೆ ಎಂದು ಆರೋಪಿಸಿರುವ ಅವರು, ‘‘ನನ್ನ ಸಹೋದರಿಯ ಮೃತ ದೇಹವನ್ನು ನೋಡಿದ್ದೇನೆ. ಆಕೆಯ ಮುಖ, ಕಿವಿ ನೀಲಿ ಬಣ್ಣಕ್ಕೆ ತಿರುಗಿತ್ತು. ದೇಹದ ಒಳಗೆ ವಿಷ ಇದ್ದರೆ ಮಾತ್ರ ಹೀಗಾಗುತ್ತದೆ. ಹೃದಯಾಘಾತದಿಂದ ಹೀಗಾಗುವುದಿಲ್ಲ’’ ಎಂದಿದ್ದಾರೆ.
ಈ ನಡುವೆ ಸೋನಾಲಿ ಫೋಗಟ್‌ನ 15 ವರ್ಷದ ಪುತ್ರಿ ಯಶೋಧರಾ, ‘‘ನನ್ನ ತಾಯಿಯ ಸಾವಿಗೆ ನ್ಯಾಯ ದೊರೆಯಬೇಕು. ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು’’ ಎಂದು ಹೇಳಿದ್ದಾಳೆ.
ಹರ್ಯಾಣದ ಹಿಸಾರ್ ಜಿಲ್ಲೆಯ 42ರ ಹರೆಯದ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಮಂಗಳವಾರ ಗೋವಾದಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿತ್ತು. ಅವರನ್ನು ಉತ್ತರ ಗೋವಾದ ಅಂಜುನಾದಲ್ಲಿರುವ ಸಂತ ಆ್ಯಂಟನಿ ಆಸ್ಪತ್ರೆಗೆ ತರಲಾಗಿತ್ತು. ಆದರೆ, ಅಲ್ಲಿಗೆ ಕರೆ ತರುವ ಮುನ್ನವೇ ಅವರು ಮೃತಪಟ್ಟಿದ್ದರು.
ಆಂಭದಲ್ಲಿ ಸೋನಾಲಿ ಫೋಗಟ್ ಅವರ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಅನಂತರ ಅವರ ಕುಟುಂಬ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು.
ಸಿಬಿಐ ತನಿಖೆಗೆ ಕುಟುಂಬ ಆಗ್ರಹ
ಸೋನಾಲಿ ಫೋಗಟ್ ಅವರ ಮೃತದೇಹದಲ್ಲಿ ಹಲವು ಗಾಯಗಳಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗಗೊಂಡ ಬಳಿಕ ಅವರ ಕುಟುಂಬ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದೆ.
ಈ ನಡುವೆ ಸೋನಾಲಿ ಫೋಗಟ್ ಅವರನ್ನು ಅತ್ಯಾಚಾರಗೈದು ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾದ ಅವರ ಆಪ್ತ ಕಾರ್ಯದರ್ಶಿ ಸುಧೀರ್ ಸಂಗ್ವಾನ್ ಹಾಗೂ ಆತನ ಗೆಳೆಯ ಸುಖ್ವಿಂದರ್ ವಿರುದ್ಧ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿ ದೇಹದಲ್ಲಿ ಹಲವು ಗಾಯಗಳ ಬಗ್ಗೆ ಉಲ್ಲೇಖಿಸಿದೆ. ಆದರೆ, ಸಾವಿಗೆ ಕಾರಣವನ್ನು ಉಲ್ಲೇಖಿಸಿಲ್ಲ. ಅಂಗಾಂಶಗಳ ರಾಸಾಯನಿಕ ವಿಶ್ಲೇಷಣೆ ಸೇರಿದಂತೆ ಹಲವು ಪರೀಕ್ಷೆಗಳು ಬಾಕಿ ಇವೆ.
ಇಬ್ಬರು ಆರೋಪಿಗಳ ಬಂಧನ
ಸೋನಾಲಿ ಫೋಗಟ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅವರ ಆಪ್ತ ಕಾರ್ಯದರ್ಶಿ ಸುಧೀರ್ ಸಂಗ್ವಾನ್ ಹಾಗೂ ಆತನ ಗೆಳೆಯ ಸುಖ್ವಿಂದರ್ ಅವರನ್ನು ಪೊಲೀಸರು ಗೋವಾದಿಂದ ಗುರುವಾರ ಬಂಧಿಸಿದ್ದಾರೆ.