ಸಿದ್ದರಾಮಯ್ಯನವರ ಸಂವಿಧಾನಬದ್ಧ ಸ್ವಾತಂತ್ರ್ಯ ಹತ್ತಿಕ್ಕದಿರಿ

Update: 2022-08-25 18:38 GMT

ಸಂವಿಧಾನ ಬದ್ಧವಾಗಿ ಪ್ರತಿಯೊಬ್ಬ ನಾಗರಿಕನ ಆಹಾರ ಪದ್ಧತಿ ಅವರವರಿಗೆ ಬಿಟ್ಟ ವಿಚಾರ ಅದನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ದಕ್ಷಿಣ ಹಾಗೂ ಉತ್ತರ ಭಾರತದಲ್ಲಿ ಇರುವ ಕೆಲವೊಂದು ದೇವರುಗಳಿಗೆ ಪ್ರಾಣಿ ಬಲಿ ಕೊಟ್ಟು ಮಾಂಸ ಹಾಗೂ ಮದ್ಯಪಾನ ವನ್ನು ನೈವೇದ್ಯ ಅರ್ಪಿಸುವ ಪದ್ಧತಿ ಸನಾತನ ಕಾಲದಿಂದಲೂ ಆಚರಣೆಯಲ್ಲಿ ಇದೆ. ಇಂದು ನಾವು ಶ್ರೇಷ್ಠರು ಎಂದು ಬೊಬ್ಬೆ ಹೊಡೆಯುವ ಮನುವಾದಿಗಳೇ ಹಾಗಾದರೆ ಈ ದೇವರೆಲ್ಲ ಯಾವ ಧರ್ಮಕ್ಕೆ ಸೇರಿದ್ದು? ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಲೋಹಿಯಾ, ಕುವೆಂಪು ಅವರಂತಹ ಸಮಾನತೆ ಸಾರಿದ ಈ ನೆಲದ ದಾರ್ಶನಿಕರ, ಹೋರಾಟಗಾರರ ಆದರ್ಶಗಳನ್ನು ಪಾಲನೆ ಮಾಡುತ್ತಿರುವ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಈ ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ನೀಡಿದ ಜನಪರ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದ್ದವು. ಹೀಗಾಗಿ ದಕ್ಷಿಣ ಭಾರತದಲ್ಲಿ ಮಾದರಿ ಮುಖ್ಯಮಂತ್ರಿಯಾಗಿ ಇಂದಿಗೂ ಬಿಂಬಿಸಲ್ಪಡುತ್ತಿದ್ದಾರೆ. ಕರ್ನಾಟಕಕ್ಕೆ ಗೌರವ ತಂದು ಕೊಟ್ಟ ಇಂತಹ ಪ್ರಾಮಾಣಿಕ ನಾಯಕನನ್ನು ಮೊಟ್ಟೆಯಲ್ಲಿ ಹೊಡೆಯಲು ಹೋಗಿರುವುದು ಕೀಳು ಮಟ್ಟದ ರಾಜಕೀಯವನ್ನು ತೋರಿಸುತ್ತದೆ ಹಾಗೂ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

 ಮಾನ್ಯ ಸಿದ್ದರಾಮಯ್ಯ ಅವರ ಸಂವಿಧಾನ ಬದ್ಧವಾದ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಇದೇ ರೀತಿ ಮುಂದುವರಿದರೆ ‘‘ಆರೆಸ್ಸೆಸ್ ಬಿಜೆಪಿ ಹಠಾವೊ, ಕರ್ನಾಟಕ ಬಚಾವೊ’’ ಎಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆಂದೋಲನಗಳನ್ನು ಹಮ್ಮಿಕೊಳ್ಳಲು ದಸಂಸ ಕರ್ನಾಟಕ ತೀರ್ಮಾನಿಸಿದೆ.
ಒಬ್ಬ ಜಾತ್ಯತೀತ ಸರ್ವ ಜನ, ಸರ್ವ ಧರ್ಮದ ಜನಕಲ್ಯಾಣದ ಆಶಯದ ಭಾರತ ಸಂವಿಧಾನ ರಕ್ಷಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೋರಾಟಗಳಿಗೆ ದಸಂಸ ಕರ್ನಾಟಕ ರಾಜ್ಯ ಸಮಿತಿ ಸಂವಿಧಾನ ಬದ್ಧವಾಗಿ ಸಂಪೂರ್ಣ ಬೆಂಬಲವನ್ನು ನೀಡುವುದಾಗಿ ಈ ಮೂಲಕ ತಿಳಿಸುತ್ತೇವೆ.
 ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಇಲ್ಲಿಯವರೆಗೂ ಎಲ್ಲಾ ಜಿಲ್ಲೆಗಳಲ್ಲಿ ಅಶಾಂತಿ, ಕೋಮುಗಲಭೆ ಮತ್ತು ಅಮಾಯಕ ಯುವಕರು ಆರೆಸ್ಸೆಸ್, ಬಿಜೆಪಿ ಮತ್ತು ಮನುವಾದಿಗಳ ಕುತಂತ್ರಕ್ಕೆ ಬಲಿಯಾಗಿದ್ದಾರೆ. ನಿಜಕ್ಕೂ ಇದು ಅಮಾನವೀಯ. ಬಿಜೆಪಿಯು ಸರಕಾರ ನಡೆಸಲು ಸಂಪೂರ್ಣ ವಿಫಲವಾಗಿದೆ. ಆದ್ದರಿಂದ ನೈತಿಕ ಹೊಣೆ ಹೊತ್ತು ಸರಕಾರ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಬೇಕೆಂದು ದಸಂಸ ಕರ್ನಾಟಕ ಈ ಮೂಲಕ ಆಗ್ರಹಿಸುತ್ತದೆ.

-ಅಣ್ಣಯ್ಯ, ರಾಜ್ಯ ಸಂಚಾಲಕರು,
ಪ್ರೊ.ಬಿ. ಗಂಗಾಧರ ಮೂರ್ತಿ, ಬೆನಗಾನಹಳ್ಳಿ ರಾಮಚಂದ್ರ, ಮಂಜುನಾಥ್ ಅಣ್ಣಯ್ಯ, ಬೆಂಗಳೂರು ವಿಭಾಗೀಯ ಸಂಚಾಲಕರು,
ಕಲಾವಿದ ಯಲ್ಲಪ್ಪ, ರಾಜ್ಯ ಕಲಾ ಸಂಚಾಲಕರು
ಸುರೇಶ್ ಬಾಬು, ಬಿಟಿಎಂ
ದಸಂಸ ಕರ್ನಾಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News