ಈ ಜವಾಬ್ದಾರಿ ನನಗೆ ಬೇಡ

Update: 2022-08-25 18:40 GMT

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ‘ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ’ದ ಅಧ್ಯಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಸುದ್ದಿ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ತೇಜಸ್ವಿ ಅವರ ಒಡನಾಟ ಮತ್ತು ಅವರ ಕುರಿತು ಒಂದಷ್ಟು ಬರವಣಿಗೆ, ಅವರ ಪತ್ರಗಳ ಸಂಪಾದನೆಯನ್ನು ನಾನು ಮಾಡಿರುವುದು ನಿಜ. ಈ ಕಾರಣಕ್ಕಾಗಿಯೇ ಸರಕಾರ ನನ್ನನ್ನು ಆಯ್ಕೆ ಮಾಡಿದೆ ಎಂದು ಅನೇಕ ಸ್ನೇಹಿತರು, ಬಂಧುಗಳು, ತೇಜಸ್ವಿ ಓದುಗರು ಅಭಿನಂದಿಸಿ ನನಗೆ ಸಂದೇಶ ಕಳುಹಿಸಿದ್ದಾರೆ. ಈ ಕುರಿತು ಘನ ಸರಕಾರಕ್ಕೂ ನನ್ನ ಧನ್ಯವಾದಗಳು. ಆದರೆ ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ. ಈ ಕುರಿತು ಸಂಬಂಧಿಸಿದ ಯಾವುದೇ ಇಲಾಖೆಯ ವ್ಯಕ್ತಿಗಳು, ಅಧಿಕಾರಿಗಳು ನನ್ನನ್ನು ಈವರೆಗೆ ಸಂಪರ್ಕಿಸಿಯೂ ಇಲ್ಲ. ಅಂತಹ ಪತ್ರ-ಆದೇಶ ನನಗೆ ಬಂದಿಲ್ಲ. ಒಂದು ವೇಳೆ ಅದು ಬಂದಾಗಲೂ ನನ್ನ ಈ ಅಭಿಪ್ರಾಯ ಬದಲಾಗುವುದಿಲ್ಲ. ದಯವಿಟ್ಟು ಯಾರೂ ಕೂಡಾ ಇದನ್ನು ನನ್ನ ಅಹಂ, ಉದ್ಧಟತನವೆಂದು ಭಾವಿಸಬಾರದು. ಇಂಥ ಸರಳ ಸೌಜನ್ಯ-ನಿರಾಕರಣೆಗೆ ನನಗೆ ತೇಜಸ್ವಿ ಅವರೇ ಸ್ಫೂರ್ತಿ. ಸರಕಾರ ಮುಂದೆ ಯಾರನ್ನೇ ಬೇಕಾದರೂ ಆಯ್ಕೆ ಮಾಡಲಿ, ತೇಜಸ್ವಿಯ ವಿಚಾರದಲ್ಲಿ ಅವರಿಗೆ ನನ್ನ ಸಹಾಯ ಇದ್ದೇ ಇದೆ. ಆದರೆ ಇಂತಹ ಪ್ರತಿಷ್ಠಾನ ಪ್ರಾಧಿಕಾರ ಅಕಾಡಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಅವರನ್ನು ಸಂಪರ್ಕಿಸಿ ಪೂರ್ವಾನುಮತಿಯನ್ನು ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ. ದಯವಿಟ್ಟು ಸಂಸ್ಕೃತಿ ಇಲಾಖೆ ಇದನ್ನು ಗಮನಿಸಬೇಕೆಂದು ವಿನಮ್ರ ಕೋರಿಕೆ...

Writer - -ನರೇಂದ್ರ ರೈ ದೇರ್ಲ

contributor

Editor - -ನರೇಂದ್ರ ರೈ ದೇರ್ಲ

contributor

Similar News