ತನ್ನ ಮುಂದಿನ ನಡೆಯನ್ನು ಬಹಿರಂಗಪಡಿಸಿದ ಹಿರಿಯ ರಾಜಕಾರಣಿ ಗುಲಾಮ್ ನಬಿ ಆಝಾದ್

Update: 2022-08-26 09:55 GMT

ಹೊಸದಿಲ್ಲಿ: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ  India Today ಗೆ ಪ್ರತ್ಯೇಕವಾಗಿ ಮಾತನಾಡಿದ ಹಿರಿಯ ರಾಜಕಾರಣಿ ಗುಲಾಂ ನಬಿ ಆಝಾದ್ (Ghulam Nabi Azad)ಅವರು ತಮ್ಮ ತವರು ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ತಮ್ಮದೇ ಆದ ಪಕ್ಷವನ್ನು ರಚಿಸುವುದಾಗಿ ಹೇಳಿದ್ದಾರೆ.

ತಾನು  ಬಿಜೆಪಿ ಸೇರುತ್ತೇನೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಆಝಾದ್, “ನಾನು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗುತ್ತೇನೆ. ನಾನು ರಾಜ್ಯದಲ್ಲಿ ನನ್ನದೇ ಆದ ಪಕ್ಷವನ್ನು ರಚಿಸುತ್ತೇನೆ. ನಂತರ ರಾಷ್ಟ್ರೀಯ ಸಾಧ್ಯತೆಯನ್ನು ಪರಿಶೀಲಿಸುತ್ತೇನೆ'' ಎಂದರು.

ಆಝಾದ್ ಶುಕ್ರವಾರ ತನ್ನ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಕಾಂಗ್ರೆಸ್  ಪಕ್ಷದ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದರು.  ಇತ್ತೀಚಿನ ತಿಂಗಳುಗಳಲ್ಲಿ ಹಲವಾರು ಪ್ರಮುಖ ನಾಯಕರು ವಿದಾಯ ಹೇಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ಹೊಡೆತವನ್ನು ನೀಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಐದು ಪುಟಗಳ ಪತ್ರದಲ್ಲಿ, ಆಝಾದ್ ಅವರು ತಮ್ಮ ನಿರ್ಗಮನಕ್ಕೆ ಪಕ್ಷದಲ್ಲಿನ ಹಿರಿಯ ನಾಯಕರನ್ನು ದೂರವಿಡುವುದು ಹಾಗೂ  ಪಕ್ಷದಲ್ಲಿ ಬೆಳೆಯುತ್ತಿರುವ ಪಕ್ಷಪಾತವನ್ನು ದೂಷಿಸಿದ್ದಾರೆ. ರಾಹುಲ್ ಗಾಂಧಿಯವರನ್ನು "ಅಪ್ರಬುದ್ಧ" ಹಾಗೂ  "ಗಂಭೀರವಲ್ಲದ ವ್ಯಕ್ತಿ" ಎಂದು ಕರೆದಿದ್ದಾರೆ.

ಗಾಂಧಿ ಕುಟಂಬದ ವಿರುದ್ಧ ವಾಗ್ದಾಳಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಝಾದ್, "ನಾನು ವೈಯಕ್ತಿಕ ಮಟ್ಟದಲ್ಲಿ ಇಡೀ ಗಾಂಧಿ ಕುಟುಂಬದ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಇಲ್ಲಿ ನಾನು ವೈಯಕ್ತಿಕ ಸಂಬಂಧದ ಬಗ್ಗೆ ಮಾತನಾಡುತ್ತಿಲ್ಲ. ನಾನು ಕಾಂಗ್ರೆಸ್ ಪತನದ ಬಗ್ಗೆ ಮಾತನಾಡುತ್ತಿದ್ದೇನೆ" ಎಂದು ಹೇಳಿದರು.

ದುರದೃಷ್ಟವಶಾತ್ ರಾಹುಲ್ ಗಾಂಧಿ ಅವರು ರಾಜಕೀಯಕ್ಕೆ ಬಂದ ನಂತರ ವಿಶೇಷವಾಗಿ ಜನವರಿ 2013 ರ ನಂತರ ಅವರು ಉಪಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲು ಅಸ್ತಿತ್ವದಲ್ಲಿದ್ದ ಸಂಪೂರ್ಣ ಸಮಾಲೋಚನಾ ಕಾರ್ಯ ವಿಧಾನವನ್ನು ಅವರು ಬದಲಿಸಿದರು ಎಂದಿರುವ ಆಝಾದ್ ಅವರು ರಾಹುಲ್ ಗಾಂಧಿಯವರ ಮೇಲೆ ತೀವ್ರವಾಗಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News