×
Ad

ಬಳಕೆದಾರರಿಗೆ ʼಒಪ್ಪಿಕೊಳ್ಳಿ ಅಥವಾ ಬಿಟ್ಟುಬಿಡಿʼ ಆಯ್ಕೆ ನೀಡಿದ ವಾಟ್ಸ್ಯಾಪ್‍: ದಿಲ್ಲಿ ಹೈಕೋರ್ಟ್ ಕಿಡಿ

Update: 2022-08-26 17:53 IST

ಹೊಸದಿಲ್ಲಿ: ವಾಟ್ಸ್ಯಾಪ್ ಗೌಪ್ಯತೆ ನೀತಿ 2021(Whatsapp privacy policy) ಬಳಕೆದಾರರನ್ನು ʼಒಪ್ಪಿಕೊಳ್ಳಿ ಅಥವಾ ಬಿಟ್ಟು ಬಿಡಿʼ ಎನ್ನುವಂತಹ ಸನ್ನಿವೇಶಕ್ಕೆ ದೂಡಿದೆ ಹಾಗೂ ʼಆಯ್ಕೆಯನ್ನು ಮರೀಚಿಕೆʼಯಾಗಿಸಿ ಬಳಕೆದಾರರನ್ನು ಒಪ್ಪಂದಕ್ಕೆ ಬಲವಂತದಿಂದ ಒಪ್ಪಿಕೊಳ್ಳುವಂತೆ ಮಾಡಿದೆ ಎಂದು ದಿಲ್ಲಿ ಹೈಕೋರ್ಟ್ ಬುಧವಾರ ಹೇಳಿದೆ.

ವಾಟ್ಸ್ಯಾಪ್‍ನ ಗೌಪ್ಯತೆ ನೀತಿಯ ಕುರಿತು ಭಾರತದ ಕಾಂಪಿಟೀಷನ್ ಕಮಿಷನ್ ತನಿಖೆಯಲ್ಲಿ ಹಸ್ತಕ್ಷೇಪ ನಡೆಸಲು ಹೈಕೋರ್ಟಿನ ಏಕಸದಸ್ಯ ಪೀಠ ನಿರಾಕರಿಸಿದ್ದನ್ನು ಪ್ರಶ್ನಿಸಿ ವಾಟ್ಸ್ಯಾಪ್ ಮತ್ತದರ ಮಾತೃ ಸಂಸ್ಥೆ ಮೆಟಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ವೇಳೆ ದಿಲ್ಲಿ ಹೈಕೋರ್ಟ್(delhi high court) ಮೇಲಿನಂತೆ ಹೇಳಿದೆ.

ವಾಟ್ಸ್ಯಾಪ್ ಮತ್ತು ಮೆಟಾ(meta) ತಮ್ಮ ಅಪೀಲುಗಳಲ್ಲಿ ನೀಡಿರುವ ಕಾರಣಗಳು ಸಮರ್ಥನೀಯವಲ್ಲ ಹಾಗೂ ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ಆದೇಶ ಸರಿಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ಮತ್ತು ಜಸ್‍ಇಸ್ ಸುಬ್ರಮಣಿಯಂ ಪ್ರಸಾದ್ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿದೆ. ಈ ಪ್ರಕರಣದ ತೀರ್ಪನ್ನು ಈ ಹಿಂದೆ ಜುಲೈ 25 ರಂದು ವಿಚಾರಣೆ ನಂತರ ನ್ಯಾಯಾಲಯ ಕಾಯ್ದಿರಿಸಿತ್ತು.

"ವಾಟ್ಸ್ಯಾಪ್‍ಗೆ ಭಾರತೀಯ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನವಿದೆ ಹಾಗೂ ಅದಕ್ಕಿರುವ ಪ್ರಬಲ ಲಾಕ್-ಇನ್ ಎಫೆಕ್ಟ್ ನಿಂದಾಗಿ  ಅಸಮಾಧಾನ ಹೊಂದಿರುವ ಬಳಕೆದಾರರಿಗೂ ಬೇರೆ ಪ್ಲಾಟ್‍ಫಾರ್ಮ್‍ಗೆ ಬದಲಿಸಲು ಸಾಧ್ಯವಾಗುತ್ತಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ವಾಟ್ಸ್ಯಾಪ್‍ನ ಹೊಸ ಗೌಪ್ಯತೆ ನೀತಿಯು ಕಾಂಪಿಟೀಷನ್ ಕಾಯಿದೆ 2000 ಇದನ್ನು ಉಲ್ಲಂಘಿಸುತ್ತದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿ ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಆಯೋಗ ತನಿಖೆಗೆ ಆದೇಶಿಸಿತ್ತು.

ಜನವರಿ 2021 ರಲ್ಲಿ ತನ್ನ ಹೊಸ ಗೌಪ್ಯತೆ ನೀತಿ ಬಗ್ಗೆ ಬಳಕೆದಾರರಿಗೆ ಅಧಿಸೂಚನೆ ಕಳುಹಿಸಿದ್ದ ವಾಟ್ಸ್ಯಾಪ್ ತಾನು ಹೊಸ ನೀತಿಯನ್ನು ಸಿದ್ಧಪಡಿಸುತ್ತಿರುವುದಾಗಿ ಹಾಗೂ ಬಳಕೆದಾರರ ಸ್ವಲ್ಪ ಡೇಟಾವನ್ನು ಫೇಸ್ಬುಕ್ ಜೊತೆಗೆ ಹಂಚಿಕೊಳ್ಳುವ ಹಕ್ಕನ್ನು ತಾನು ಕಾಯ್ದಿರಿಸಿಕೊಳ್ಳುವುದಾಗಿ ತಿಳಿಸಿತ್ತು. ಇದು ಬಳಕೆದಾರರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News