ಬಿಜೆಪಿ ಸರಣಿಹಂತಕನಂತೆ ರಾಜ್ಯ ಸರಕಾರಗಳನ್ನು ನಾಶಪಡಿಸುತ್ತಿದೆ: ಸಿಸೋಡಿಯಾ ಕಿಡಿ

Update: 2022-08-26 15:38 GMT

ಹೊಸದಿಲ್ಲಿ, ಆ.26: ತನ್ನ ವಿರುದ್ಧ ಸಿಬಿಐ ದಾಖಲಿಸಿರುವ ಎಫ್ಐಆರ್ ಸಂಪೂರ್ಣ ನಕಲಿಯೆಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಖಂಡಿಸಿದ್ದಾರೆ ಹಾಗೂ ಕೇಂದ್ರ ಸರಕಾರವು ಸರಣಿ ಹಂತಕನಂತೆ ರಾಜ್ಯ ಸರಕಾರಗಳನ್ನು ಪತನಗೊಳಿಸುತ್ತಿದೆಯೆಂದು ಆರೋಪಿಸಿದ್ದಾರೆ.

ಅವರು ದಿಲ್ಲಿ ವಿಧಾನಸಬೆಯ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇತರರು ಮಾಡುತ್ತಿರುವ ಉತ್ತಮ ಕಾರ್ಯಗಳನ್ನು ಕಂಡು ಮೋದಿಯವರಲ್ಲಿ ಅಭದ್ರತೆಯ ಭಾವನೆ ಕಾಡುತ್ತಿದೆಯೆಂದು ಟೀಕಿಸಿದರು.

‘‘ಮೋದಿಯವರಂತಹ ಅಭದ್ರತೆಯ ವ್ಯಕ್ತಿಯನ್ನು ನಾನೆಂದೂ ಕಂಡಿಲ್ಲ. ಒಂದು ವೇಳೆ ಅರವಿಂದ ಕೇಜ್ರಿವಾಲ್ ಪ್ರಧಾನಿಯಾಗಿರುತ್ತಿದ್ದರೆ ಮತ್ತು ನಾನು ಬೇರೊಂದು ಸರಕಾರದಲ್ಲಿ ಶಿಕ್ಷಣ ಸಚಿವನಾಗಿರುತ್ತಿ ದ್ದರೆ ಆಗ ಅವರು ನನ್ನ ವಿರುದ್ಧ ಸಿಬಿಐ ದಾಳಿಯಂತಹ ಕೃತ್ಯಗಳನ್ನು ನಡೆಸುತ್ತಿರಲಿಲ್ಲವೆಂದು ಸಿಸೋಡಿಯಾ ಸದನದಲ್ಲಿ ಹೇಳಿದರು.

ಕೇಂದ್ರ ಸರಕಾರದ ಎಲ್ಲಾ ಉತ್ತಮ ಉಪಕ್ರಮಗಳಿಗೆ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿಯವರನ್ನು ಬೆಂಬಲಿಸಿದ್ದರು. ಆದರೆ ಪ್ರಧಾನಿಯವರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡಿದ್ದತಾರೆಂದು ಸಿಸೋಡಿಯಾ ಹೇಳಿದರು. ತನ್ನ ನಿವಾಸದ ಮೇಲೆ 14 ತಾಸುಗಳ ಕಾಲ ನಡೆದ ದಾಳಿಯಲ್ಲಿ ಸಿಬಿಐ ಅಧಿಕಾರಿಗಳು ತನ್ನ ಉಡುಪುಗಳನ್ನು ಶೋಧಿಸಿದರು . ಮಾತ್ರವಲ್ಲದೆ ತನ್ನ ಮಕ್ಕಳ ಬಟ್ಟೆಗಳ ತಪಾಸಣೆಯನ್ನು ನಡೆಸಿದರು. ಆದರೆ ಅವರಿಗೆ ಏನೂ ದೊರೆಯಲಿಲ್ಲವೆಂದು ಸಿಸೋಡಿಯಾ ತಿಳಿಸಿದರು.

‘‘ನನ್ನ ವಿರುದ್ಧದ ಎಫ್ಐಆರ್ ಸಂಪೂರ್ಣವಾಗಿ ನಕಲಿಯಾಗಿದೆ. ನಾನು ಯಾವುದೇ ಭ್ರಷ್ಟಾಚಾರವನ್ನು ಎಸಗಿಲ್ಲ. ಬಿಜೆಪಿಯವರು ಇತರ ರಾಜ್ಯ ಸರಕಾರಗಳನ್ನು ಪತನಗೊಳಿಸಲು ಸರಣಿಹಂತಕನಂತೆ ವರ್ತಿಸುತ್ತಿದ್ದಾರೆ. ರಾಜ್ಯ ಸರಕಾರಗಳ ಕಗ್ಗೊಲೆಗೈಯಲು ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.ಅದರ ಬದಲು ಅವರು ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಲು ಹೆಚ್ಚು ಶ್ರಮಿಸಬೇಕಾಗಿದೆ’’ ಎಂದು ಸಿಸೋಡಿಯಾ ಹೇಳಿದರು.

ಇದೀಗ ಹಿಂತೆಗೆದುಕೊಳ್ಳಲಾಗಿರುವ ತನ್ನ ಸರಕಾರದ 2021-22ನೇ ಸಾಲಿನ ಅಬಕಾರಿ ನೀತಿಯನ್ನು ದಿಲ್ಲಿ ಉಪಮುಖ್ಯಮಂತ್ರಿ ಸಮರ್ಥಿಸಿಕೊಂಡರು. ಅಬಕಾರಿ ನೀತಿಯು ಜನರಿಗೆ ಯಾವುದೇ ರೀತಿಯ ಹೊರೆಯಾಗಿಲ್ಲ. ಅಲ್ಲದೆ ಸರಕಾರದ ಆದಾಯ ಕೂಡಾ ಹೆಚ್ಚಾಗಿದೆ. ಆದಾಗ್ಯೂ ಅದರಲ್ಲಿ ಭ್ರಷ್ಟಾಚಾರ ನಡೆದಿದೆಯೆಂದು ಇನ್ನೂ ಬಿಜೆಪಿಯು ಆಪಾದಿಸುತ್ತಾ ಬಂದಿದೆ’’ ಎಂದು ಸಿಸೋಡಿಯಾ ಸದನಕ್ಕೆ ತಿಳಿಸಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News