ಜಮಾತೆ ಇಸ್ಲಾಮಿ ಹಿಂದ್‌ನ ಮಾಜಿ ರಾಷ್ಟ್ರಾಧ್ಯಕ್ಷ ಜಲಾಲುದ್ದೀನ್‌ ಉಮ್ರಿ ನಿಧನ

Update: 2022-08-26 16:38 GMT

ಹೊಸದಿಲ್ಲಿ:  ಜಮಾತ್-ಎ-ಇಸ್ಲಾಮಿ ಹಿಂದ್ ನ ಮಾಜಿ ರಾಷ್ಟ್ರಾಧ್ಯಕ್ಷ  ಮತ್ತು ಖ್ಯಾತ ಮುಸ್ಲಿಮ್ ವಿದ್ವಾಂಸ ಮೌಲಾನಾ ಜಲಾಲುದ್ದೀನ್ ಉಮ್ರಿ ಶುಕ್ರವಾರ ಆಗಸ್ಟ್ 26 ರಂದು ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಮೌಲಾನಾ ಜಲಾಲುದ್ದೀನ್ ಉಮ್ರಿ ಅವರು 2007 ರಿಂದ 2019ರವರೆಗೆ ಜಮಾತ್-ಎ-ಇಸ್ಲಾಮಿ ಹಿಂದ್‌ನ ಅಮೀರ್ ಆಗಿದ್ದರು.

ತಮಿಳುನಾಡಿನ ಉತ್ತರ ಆರ್ಕಾಟ್ ಜಿಲ್ಲೆಯ ಗ್ರಾಮವೊಂದರಲ್ಲಿ 1935ರಲ್ಲಿ ಜನಿಸಿದ ಅವರು ತಮಿಳುನಾಡಿನ ಉಮರಾಬಾದ್‌ನ ಜಾಮಿಯಾ ದಾರುಸ್ಸಲಾಮ್‌ನಲ್ಲಿ ಪದವಿ ಪಡೆದರು. ಅವರು ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು.

ಜಲಾಲುದ್ದೀನ್ ಉಮ್ರಿ ತನ್ನ ವಿದ್ಯಾರ್ಥಿ ದಿನಗಳಲ್ಲಿ ಜಮಾತ್-ಎ-ಇಸ್ಲಾಮಿ ಹಿಂದ್‌ನೊಂದಿಗೆ ತನ್ನ ಒಡನಾಟವನ್ನು ಪ್ರಾರಂಭಿಸಿದ್ದರು. ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ಅದರ ಸಂಶೋಧನಾ ವಿಭಾಗಕ್ಕೆ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡರು. ಅವರು 1956 ರಲ್ಲಿ ಅಧಿಕೃತವಾಗಿ ಸಂಘಟನೆಯ ಸದಸ್ಯರಾದರು. ಅವರು ಅಲಿಘರ್‌ ನಗರ ಜಮಾಅತ್‌ನ ಅಮೀರ್ ಆಗಿ ಒಂದು ದಶಕದ ಕಾಲ ಸೇವೆ ಸಲ್ಲಿಸಿದರು ಮತ್ತು ಐದು ವರ್ಷಗಳ ಕಾಲ ಅದರ ಮಾಸಿಕ ʼಜಿಂದಗಿ-ಎ-ನೌʼ ಇದರ ಸಂಪಾದಕರಾಗಿ ಸೇವೆ ಸಲ್ಲಿಸಿದರು. 

ನಂತರ, ಜಮಾಅತ್ ಅವರನ್ನು ಸಂಘಟನೆಯ ಅಖಿಲ-ಭಾರತದ ಉಪ ಅಮೀರ್‌ ಆಗಿ ಆಯ್ಕೆ ಮಾಡಿತು. ಅವರು ಸತತ ನಾಲ್ಕು ಅವಧಿಗೆ (ಹದಿನಾರು ವರ್ಷಗಳು) ಸೇವೆ ಸಲ್ಲಿಸಿದರು. 2007 ರಲ್ಲಿ, ಜಮಾಅತ್‌ನ ಸೆಂಟ್ರಲ್ ಕೌನ್ಸಿಲ್ ಆಫ್ ರೆಪ್ರೆಸೆಂಟೇಟಿವ್ಸ್ ಅವರನ್ನು  ಅಮೀರ್ (ಮುಖ್ಯಸ್ಥ) ಆಗಿ ಆಯ್ಕೆ ಮಾಡಿತು. 2011ರಲ್ಲಿ ಜಮಾಅತ್‌ನ ಅಮೀರ್ ಆಗಿ ಮತ್ತೊಮ್ಮೆ ಆಯ್ಕೆಯಾದರು. ನಾಲ್ಕನೇ ಅವಧಿಗೆ  ಏಪ್ರಿಲ್ 2015 - ಮಾರ್ಚ್ 2019 ಅವಧಿಯಲ್ಲಿ ಜಮಾತ್-ಎ-ಇಸ್ಲಾಮಿ ಹಿಂದ್ ಅಮೀರ್ ಆಗಿ ಮತ್ತೊಮ್ಮೆ ಆಯ್ಕೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News