ಸೋನಾಲಿಗೆ ಬಲವಂತವಾಗಿ ವಿಷಪ್ರಾಷಣ: ಒಪ್ಪಿಕೊಂಡ ಆರೋಪಿಗಳು; ಪೊಲೀಸ್ ಹೇಳಿಕೆ

Update: 2022-08-27 04:51 GMT
ಸಾಂದರ್ಭಿಕ ಚಿತ್ರ

ಪಣಜಿ,ಆ.26: ನಿಗೂಢವಾಗಿ ಸಾವನ್ನಪ್ಪಿದ ನಟಿ ಹಾಗೂ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರಿಗೆ ಗೋವಾದ ನೈಟ್‌ ಕ್ಲಬ್‌ ನ ರೆಸ್ಟಾರೆಂಟೊಂದರಲ್ಲಿ ಮಾದಕದ್ರವ್ಯವಿದ್ದ ಪಾನೀಯವನ್ನು ಆಕೆಯ ಇಬ್ಬರು ಸಹಚರರು ಬಲವಂತವಾಗಿ ಕುಡಿಸಿದ್ದರು ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ. ಪಾನೀಯವನ್ನು ಸೇವಿಸಿದ ಬಳಿಕ ಆಕೆಗೆ ಅಸ್ವಸ್ಥಗೊಂಡಿದ್ದರು. ಆನಂತರ ಆಕೆಯನ್ನು ಅವರು ಉಳಿದುಕೊಂಡಿದ್ದ ಹೊಟೇಲ್ಗೆ ಕೊಂಡೊಯ್ಯಲಾಗಿತ್ತು . ಆದರೆ ಮರುದಿನ ಬೆಳಗ್ಗೆ ಸೋನಾಲಿ ಅವರನ್ನು ಮೃತಪಟ್ಟ ಸ್ಥಿತಿಯಲ್ಲಿ ಆಸ್ಪತ್ರೆಗೆ ತರಲಾಗಿತ್ತು.    

 ಪೋಗಟ್ ಅವರ ಸಹಚರರ ತಪ್ಪೊಪ್ಪಿಗೆ ಹಾಗೂ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಗೋವಾ ಪೊಲೀಸರು ಈ ವಿವರಗಳನ್ನು ನೀಡಿದ್ದಾರೆ. ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಸೋನಾಲಿ ಪೋಗಟ್ ಅವರ ಅಸಹಜ ಸಾವಿಗೆ ಸಂಬಂಧಿಸಿ ಆಕೆಯ ಇಬ್ಬರು ಸಹಚರರಾದ ಸುಧೀರ್ ಸಂಗ್ವಾನ್ ಹಾಗೂ ಸುಖವಿಂದರ್ ಸಿಂಗ್ ಅವರನ್ನು ಗುರುವಾರ ಸಂಜೆ ಪೊಲೀಸರು ಬಂಧಿಸಿದ್ದರು.ತಾವು ಉಳಿದುಕೊಂಡಿದ್ದ ಗ್ರಾಂಡ್ ಲಿಯೋನಿ ಹೊಟೇಲ್ಗೆ ತೆರಳುವ ಮೊದಲು ಆರೋಪಿ ಸುಧೀರ್ ಬಾಟಲಿಯೊಂದರಲ್ಲಿದ್ದ ದ್ರಾವಣವೊಂದನ್ನು ಸೋನಾಲಿಗೆ ಬಲವಂತವಾಗಿ ಕುಡಿಸುತ್ತಿರುವುದು ಸಿಸಿಟಿವಿ ವಿಡಿಯೋಚಿತ್ರಿಕೆಗಳಲ್ಲಿ ಕಂಡುಬಂದಿದೆ ಎಂದು ಪೊಲೀಸರ ಹೇಳಿಕೆ ತಿಳಿಸಿದೆ.

  ಸೋಮವಾರ ರಾತ್ರಿ ಕರ್ಲಿಸ್ ರೆಸ್ಟಾರೆಂಟ್ ಎಂಬ ಜನಪ್ರಿಯ ನೈಟ್‌ ಕ್ಲಬ್ ರೆಸ್ಟಾರೆಂಟ್ನಲ್ಲಿ 42 ವರ್ಷದ ಸೋನಾಲಿಗೆ ಈ ಪಾನೀಯವನ್ನು ಕುಡಿಸಲಾಗಿತ್ತು. ಆಗ ಆಕೆಯ ಇಬ್ಬರೂ ಸಹಚರು ಜೊತೆಗಿದ್ದರು. ಮರುದಿನ ಬೆಳಗ್ಗೆ ಆಕೆಯನ್ನು ಮೃತಪಟ್ಟ ಸ್ಥಿತಿಯಲ್ಲಿ ಉತ್ತರ ಗೋವಾದ ಅಂಜುನಾದಲ್ಲಿರುವ ಸೈಂಟ್ ಆ್ಯಂಟನಿ ಹೊಟೇಲ್ಗೆ ತರಲಾಗಿತ್ತು. ಆರಂಭದಲ್ಲಿ ಇದೊಂದು ಹೃದಯಾಘಾತದ ಪ್ರಕರಣವೆಂದು ಪರಿಗಣಿಸಲಾಗಿತ್ತು. ಆದರೆ ಆಕೆಯ ಕುಟುಂಬಿಕರು ಆಕೆಯ ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದ್ದರು.

ಆನಂತರ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಅವರು ಮಧ್ಯಪ್ರವೇಶಿಸಿದ ಪೊಲೀಸರು ಅದೊಂದು ಕೊಲೆ ಪ್ರಕರಣವೆಂದು ದಾಖಲಿಸಿಕೊಂಡಿದ್ದರು. ಗುರುವಾರ ಪ್ರಕಟವಾದ ಮರಣೋತ್ತರ ಪರೀಕ್ಷಾ ವರದಿಯು ಆಕೆಯ ದೇಹದ ಮೇಲೆ ಹಲವು ಗಾಯದ ಗುರುತುಗಳು ಕಂಡುಬಂದಿರುವ ಬಗ್ಗೆ ಬೆಳಕು ಚೆಲ್ಲಿದೆ. ಸಾವಿನ ಕಾರಣದ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News