ದಮನಿತರಿಗೆ ನೀವೇನು ಕೊಟ್ಟಿರಿ ಎನ್. ಮಹೇಶ್‌ರವರೇ?

Update: 2022-08-27 04:24 GMT

ಮಾನ್ಯ, ಎನ್. ಮಹೇಶ್‌ರವರೇ? ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ‘ಸಮಾಜ ಸುಧಾರಣೆಯ ದಿವ್ಯಚೇತನ ಸಾವರ್ಕರ್’ ಲೇಖನ ಓದಿದೆ. ಈ ಲೇಖನ ನಿಮ್ಮ ಹೆಸರಲ್ಲೇ ಇದೇ ಎಂದ ಮೇಲೆ ಇದರ ಸಂಪೂರ್ಣ ಹೊಗಳಿಕೆ, ತೆಗಳಿಕೆ ಎರಡೂ ನಿಮ್ಮವೇ ಎಂದು ಹೇಳುತ್ತೇನೆ. ಈ ಲೇಖನ ಓದಿದ ಮೇಲೆ ನೀವು ನಿಜವಾಗಿಯೂ ಕೆಎಎಸ್‌ಅಧಿಕಾರಿಯಾಗಿ ಕೆಲಸ ಮಾಡಿದವರೋ ಎಂಬ ಅನುಮಾನ ಶುರುವಾಗಿದೆ. ಅಂತಹ ವ್ಯಕ್ತಿಯಾಗಿದ್ದಿದ್ದರೆ ಅಂದು ಇವೆಲ್ಲ ವಿಚಾರಗಳು ನಿಮ್ಮ ತಲೆಯಲ್ಲಿ ಇರಲಿಲ್ಲವೇ ಎನ್ನುವ ಪ್ರಶ್ನೆ ಕಾಡತೊಡಗಿದೆ. ನೀವು ಮೊದಲು ಕನಕಪುರಕ್ಕೆ ಬಂದು ಬೇರೆಯವರು ಕಟ್ಟಿ ಬೆಳೆಸುತ್ತಿದ್ದ ಬಿಎಸ್‌ಪಿಗೆ ಸೇರಿದವರು ನೀವು, ಅಂದಿನ ಪ್ರಧಾನಿ ವಾಜಪೇಯಿಯವರು ಜಾರಿಗೆ ತಂದಿದ್ದ ‘ಅಂತ್ಯೋದಯ ಅನ್ನ ಯೋಜನೆ’ಯ ಬಗ್ಗೆ ಗಂಟೆಗಟ್ಟಲೆ ಪುಂಖಾನುಪುಂಖವಾಗಿ ಮಾತನಾಡಿ ‘‘ವಾಜಪೇಯಿ ಸರಕಾರ ಅಂದರೆ ಬಿಜೆಪಿ ಬ್ರಾಹ್ಮಣರ ಸರಕಾರ, ಬಿಜೆಪಿ ಅಂದರೆ ಬ್ರಾಹ್ಮಣ ಜನತಾ ಪಾರ್ಟಿ’’ಎಂದು ಹೇಳಿದ್ದು ಇವತ್ತಿಗೂ ನಮ್ಮ ತಲೆಯಲ್ಲಿ ಹಾಗೆ ಉಳಿದಿದೆ. ಆದರೆ ಇಂದು ನೀವು ಅದೇ ಪಕ್ಷಕ್ಕೆ ಸೇರಿರುವುದಲ್ಲದೆ ನಿಮ್ಮ ಅಧಿಕಾರದ ಲಾಲಸೆಗಾಗಿ ಇತಿಹಾಸವನ್ನೇ ತಿರುಚುವ ಕೆಲಸ ಮಾಡಲು ನಿಮಗೆ ಹೇಗೆ ಮನಸ್ಸು ಬರಲು ಸಾಧ್ಯವಾಯಿತು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಿ.

ಅಂದು ಮನುವಾದಿಗಳಿಂದ ಈ ದೇಶ ನಾಶವಾಗುತ್ತಿದೆ ಎಂದು ಹೇಳಿದ ನೀವು ಇಂದು ಯಾಕೆ ಚಕಾರವೆತ್ತುತ್ತಿಲ್ಲ? ‘‘ಸಂವಿಧಾನ ಪರಾಮರ್ಶೆ ಮನುವಾದಿಗಳಿಗೆ ನೂರೊಂದು ಪ್ರಶ್ನೆ’’ ಪುಸ್ತಕ ಬರೆದು ಅಂದಿನ ವಾಜಪೇಯಿ ಸರಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟಿಸಿ, ಪ್ರತಿಕೃತಿ ದಹನ ಮಾಡಿದ ನೀವು ಇಂದು ಎಲ್ಲಿದ್ದೀರಾ?

‘‘ಜನಾಂಗವನ್ನು ಮರೆತ ನಾಯಕನನ್ನು ಜನಾಂಗವು ಮರೆಯುತ್ತದೆ’’ ಎಂದು ಎಲ್ಲರಿಗೂ ಹೇಳಿದವರು ನೀವು. ಹಾಗಾದರೆ ನಿಮ್ಮನ್ನು ನಾವು ಜ್ಞಾಪಿಸಿಕೊಳ್ಳಬೇಕೇ, ಮರೆಯಬೇಕೇ? ಮಹಾತ್ಮಾ ಜ್ಯೋತಿಬಾ ಫುಲೆಯವರ ಬಗ್ಗೆ, ಅವರು ಕಟ್ಟಿದ ಸತ್ಯಶೋಧಕ ಸಮಾಜದ ಬಗ್ಗೆ ಮಾತನಾಡುತ್ತಿದ್ದ ನೀವು ಇಂದು ಯಾವ ರೀತಿಯ ಸತ್ಯಶೋಧನೆ ಮಾಡಿ ಈ ಲೇಖನಕ್ಕೆ ವಿಷಯ ಒದಗಿಸಿಕೊಂಡಿದ್ದೀರಾ? ಒಮ್ಮೆ ಎಲ್ಲರಿಗೂ ಅದನ್ನು ತಿಳಿಸಿ. ‘‘ತಮಗೆ ಜನ್ಮ ನೀಡಿದ ಜನಾಂಗದ ಏಳಿಗೆಗೆ ಬದ್ಧರಾದ ಕರ್ತವ್ಯಶೀಲರೇ ಧನ್ಯರು. ತಮ್ಮ ಜನಾಂಗಕ್ಕೆ ತಗಲಿರುವ ಗುಲಾಮಗಿರಿಯ ಸಂಕೋಲೆಗಳನ್ನು ಕಡಿದೊಗೆಯಲು ತಮ್ಮದೆಲ್ಲವನ್ನು ತ್ಯಾಗ ಮಾಡುವವರೇ ಧನ್ಯರು, ಶೋಷಿತ ಜನಾಂಗವು ಹಕ್ಕು, ಅಧಿಕಾರವನ್ನು ಗಳಿಸುವ ತನಕ ಸನ್ಮಾನಕ್ಕೆ ಆಸೆ ಪಡದೆ, ಅಪಮಾನಕ್ಕೆ ಅಂಜದೆ, ಬಿಸಿಲು ಬಿರುಗಾಳಿಯನ್ನು ಲೆಕ್ಕಿಸದೆ ಮುನ್ನಡೆದು ಗುರಿ ಸಾಧಿಸುವವರೇ ಧನ್ಯರು’’ ಇದನ್ನು ನೀವು ನಮಗೆ ಬೋಧನೆ ಮಾಡಿದ್ದು ನಿಜವೇ ಆಗಿದ್ದಿದ್ದರೆ, ನಿಮಗೆ ಅಧಿಕಾರದ ಆಸೆ ಯಾಕೆ ಬರಬೇಕಿತ್ತು? ಹಾಗಾದರೆ ನಿಮ್ಮ ಶೋಷಿತ ಜನಾಂಗ ಎಲ್ಲಾ ಸಮಸ್ಯೆಯಿಂದ ಈಗ ಬಿಡುಗಡೆಯಾಗಿದೆಯೇ? ನಿಮಗೆ ಹಾಗೆ ಅನಿಸುತ್ತಿದೆಯೇ? ಬಾಬಾಸಾಹೇಬರು ಯಾವ ಪುಸ್ತಕದಲ್ಲಿ ವೀರ ಸಾವರ್ಕರ್ ಬಗ್ಗೆ ಮಾತನಾಡಿದ್ದಾರೆ ಸ್ವಲ್ಪತಿಳಿಸಿ.

ಸಾಮಾನ್ಯ ಓದುಗನಿಗೂ ತಿಳಿಯಲಿ. ಪಾಲಘಾಟ್‌ನಲ್ಲಿ ನಡೆದ ಆರೆಸ್ಸೆಸ್ ಸಭೆಯ ಬಗ್ಗೆ ನಮಗೆ ತಿಳಿಸಿದವರು ನೀವು, ಗೋಳ್ವಾಲ್ಕರ್‌ರವರ ‘ಬಂಚ್ ಆಫ್ ಥಾಟ್’ ಬಗ್ಗೆ ವಿರುದ್ಧವಾಗಿ ಹೇಳಿದವರು ನೀವು, ಮನುಧರ್ಮ ಶಾಸ್ತ್ರವನ್ನು ಪ್ರಶ್ನಿಸಿದವರು ನೀವು, ‘‘ನಾವ್ಯಾರು ಹಿಂದೂಗಳೇ ಅಲ್ಲ, ನಾವು ಅಂಬೇಡ್ಕರ್ ಮೊಮ್ಮಕ್ಕಳು ಬೌದ್ಧರು’’ ಎಂದು ಹೇಳಿದವರು ನೀವು. ಆದರೆ ಇಂದು ನೀವು ಎಲ್ಲಿದ್ದೀರಾ ಹೇಳಿ? ‘‘ಸಂಘ ಪರಿವಾರದವರು ಭಾರತದ ತ್ರಿವರ್ಣ ಧ್ವಜವನ್ನು ವಿರೋಧಿಸಿ ಕೇಸರಿ ಧ್ವಜ ಹಾರಿಸಲು ಹೊರಟಿದ್ದಾರೆ, ಅದರಲ್ಲಿ ನನ್ನ ತಾತನ ಅಶೋಕ ಚಕ್ರವಿದೆ’’ ಎಂದು ಮಾತನಾಡಿದ್ದು ನಮಗೆ ಇಂದಿಗೂ ಜ್ಞಾಪಕವಿದೆ. ಆದರೆ ಇಂದು ಅವರನ್ನು ನೀವು ಸಮರ್ಥಿಸಿಕೊಂಡು ಅವರಿಗೂ ದಲಿತರ, ಅಸ್ಪೃಶ್ಯರ ಬಗ್ಗೆ ಕಾಳಜಿ ಇತ್ತು ಎಂದು ಹೇಳುತ್ತಿದ್ದೀರಿ. ಇದು ದಲಿತರ ಬಗೆಗಿನ ನಿಜವಾದ ಕಾಳಜಿಯೇ? ನೀವು ಗೆದ್ದಿರುವುದು ದಲಿತರಿಂದಲೇ ಅದನ್ನೂ ಮರೆಯಬೇಡಿ.

‘‘ಇತಿಹಾಸ ಮತ್ತೆ ಮರುಕಳಿಸುತ್ತದೆ’’ ಎಂದಿದ್ದೀರಿ. ಅದನ್ನೂ ನೀವು ಮರೆಯುವಂತಿಲ್ಲ. ನೀವು ಬಾಬಾಸಾಹೇಬರ ಹೆಸರಿನಿಂದಲೇ ಮೇಲೆ ಬಂದು ಇಂದು ಅವರ ಬೆನ್ನಿಗೆ ಚೂರಿ ಹಾಕಿದ್ದೀರಿ. ಇದು ನಿಜವಾಗಿಯೂ ಜನಾಂಗ ದ್ರೋಹವೆ ತಾನೇ? ಎಷ್ಟೋ ವಿದ್ಯಾರ್ಥಿಗಳು ನಿಮಗಾಗಿ ಮನೆಯನ್ನೇ ಬಿಟ್ಟು ಬಂದರು, ಪುಸ್ತಕ ಮಾರಿದರು, ಕ್ಯಾಸೆಟ್ ಮಾರಿದರು, ಅದೆಷ್ಟೋ ದಲಿತ ಸಮುದಾಯದ ನೌಕರ ಬಂಧುಗಳು ಒಂದು ತಿಂಗಳ ಮಾಸಿಕ ವೇತನವನ್ನೇ ನಿಮಗೆ ಕೊಟ್ಟು ಅವರ ದೈನಂದಿನ ಆಸೆಗಳನ್ನು ತ್ಯಾಗಮಾಡಿದರು. ನಿಮಗಾಗಿ ದುಡಿಯಲು ಹೊರಟ ಎಷ್ಟೋ ಬುದ್ಧ್ದಿವಂತ ವಿದ್ಯಾವಂತರು ನೌಕರಿಯನ್ನೇ ಬಿಟ್ಟು ನಿಮಗಾಗಿ ದುಡಿದರು. ಲಕ್ಷಾಂತರ ಅಭಿಮಾನಿಗಳು ಲಕ್ಷ ಲಕ್ಷ ಹಣವನ್ನು ಸಾಲ ಮಾಡಿಕೊಂಡು, ಅದಕ್ಕಾಗಿ ಊರು ಬಿಟ್ಟು ಬೆಂಗಳೂರಿಗೆ ಬಂದು ಸಾಲ ತೀರಿಸಿದವರೆಷ್ಟೋ.. ಈ ಮಂದಿ ನಮ್ಮ ಕಣ್ಣ ಮುಂದೆಯೇ ಇದ್ದಾರೆ. ಅವರೆಲ್ಲರೂ ನಿಮಗಾಗಿ, ನಿಮ್ಮ ಗೆಲುವಿಗಾಗಿ ಹಣವನ್ನು ಕೊಟ್ಟರು, ನೀವೇನು ಕೊಟ್ಟಿರಿ? ‘‘ದಲಿತರು ಬುದ್ಧಿರಹಿತ ಭಾವಜೀವಿಗಳು’’ ‘‘ಬ್ರಾಹ್ಮಣರು ಭಾವನಾ ರಹಿತ ಬುದ್ಧ್ದಿಜೀವಿಗಳು’’ ಎಂದಿದ್ದೀರಿ. ಹಾಗಾದರೆ ನೀವು ನಿಜವಾಗಿಯೂ ದಲಿತರಲ್ಲಿ ಬಲಿತ ಬ್ರಾಹ್ಮಣರೇ? ಸುಳ್ಳನ್ನು ಸತ್ಯ ಮಾಡಲು, ಬಾಬಾಸಾಹೇಬರ ವಿಚಾರ ಗಳನ್ನು ಒತ್ತೆಯಿಟ್ಟು ಫುಲೆ, ಶಾಹು, ಪೆರಿಯಾರ್, ನಾಲ್ವಡಿಯವರ ಸಿದ್ಧಾಂತ ಗಳಿಗೆ ಮಸಿ ಬಳಿಯಲು ಪ್ರಯತ್ನ ಪಟ್ಟವರಿಗೆ ನಾವು ಪ್ರತಿಕ್ರಿಯಿಸಲೇ ಬೇಕಾಯಿತು. ಬಹುಜನರದು ಬದುಕಿಗಾಗಿ ನಿರಂತರ ಹೋರಾಟವೇ ಆಗಿದೆ. ಅದಕ್ಕಾಗಿ ನನ್ನ ಹೋರಾಟವನ್ನು ಹೀಗೆ ವ್ಯಕ್ತಪಡಿಸಬೇಕಾಯಿತು.

Writer - ಧಮ್ಮಪ್ರಿಯ ಬೆಂಗಳೂರು

contributor

Editor - ಧಮ್ಮಪ್ರಿಯ ಬೆಂಗಳೂರು

contributor

Similar News