ಜಾರ್ಖಂಡ್ ರಾಜಕೀಯ ಬಿಕ್ಕಟ್ಟು: ಶಾಸಕರ ಖರೀದಿ ಭೀತಿ; ಲತರಾತು ಅಥಿತಿ ಗೃಹಕ್ಕೆ ತೆರಳಿದ ಶಾಸಕರು

Update: 2022-08-27 17:50 GMT
Photo:twitter

ರಾಂಚಿ, ಆ. 27: ಜಾರ್ಖಂಡ್‌ನ ರಾಜಕೀಯ ಬಿಕ್ಕಟ್ಟಿನ ನಡುವೆ ಬಿಜೆಪಿಯಿಂದ ಶಾಸಕರ ಖರೀದಿಯನ್ನು ತಪ್ಪಿಸಲು ರಾಜ್ಯದ ಆಡಳಿತಾರೂಢ ಜೆಎಂಎಂ-ಕಾಂಗ್ರೆಸ್ ಸರಕಾರ ಶನಿವಾರ ಯುಪಿಎ ಶಾಸಕರನ್ನು ರಾಜ್ಯದ ಖುಂಟಿ ಜಿಲ್ಲೆಯ ಲತರಾತುನಲ್ಲಿರುವ ಅತಿಥಿ ಗೃಹಕ್ಕೆ ವರ್ಗಾಯಿಸಿದೆ. 

ಇಂದು ಬೆಳಗ್ಗೆ ರಾಂಚಿಯ ಸೊರೇನ್ ಅವರ ನಿವಾಸದಲ್ಲಿ ಜರುಗಿದ ಸಭೆಯಲ್ಲಿ ಆಡಳಿತಾರೂಢ ಯುಪಿಎಯ ಶಾಸಕರು ಪಾಲ್ಗೊಂಡಿದ್ದರು. ಮೂರು ಸುತ್ತಿನ ಸಭೆಯ ಬಳಿಕ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರೊಂದಿಗೆ ಶಾಸಕರು ಬಸ್‌ಗಳಲ್ಲಿ ಲತರಾತುನಲ್ಲಿರುವ ಅತಿಥಿ ಗೃಹಕ್ಕೆ ತೆರಳಿದ್ದಾರೆ. 

ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ ಹಾಗೂ ಎಡ ಪಕ್ಷಗಳು ಈ ಮೈತ್ರಿಕೂಟದ ಭಾಗವಾಗಿದೆ. ಶಾಸಕರ ಖರೀದಿ  ತಪ್ಪಿಸುವ ಸಲುವಾಗಿ ಸೊರೇನ್ ಅವರ ನಿವಾಸದಿಂದ ಮೂರು ಬಸ್‌ಗಳು ಜಾರ್ಖಂಡ್‌ನ ಶಾಸಕರನ್ನು ಕರೆದೊಯ್ಯುತ್ತಿರುವುದನ್ನು ವೀಡಿಯೊ ದೃಶ್ಯಾವಳಿಗಳು ತೋರಿಸಿವೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಗ್ರಾಮೀಣ ಅಭಿವೃದ್ಧಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅಲಂಗಿರಿ ಅಲಂ, ಶಾಸಕರು ನೆರೆಯ ಖುಂಟಿ ಜಿಲ್ಲೆಯ ಲತರಾತುನಲ್ಲಿರುವ ‘ಮೂಮೆಂಟ್ ರಿಸೋರ್ಟ್’ಗೆ ಪಿಕ್ನಿಕ್‌ಗೆ ತೆರಳಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ ಶುಕ್ರವಾರ ಅವರು, ಆಡಳಿತಾರೂಢ ಮೈತ್ರಿಕೂಟದ ಶಾಸಕರನ್ನು ಖರೀದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಈ ನಡುವೆ ಶಾಸಕರು ಬಸ್ ಹಾಗೂ ಹಾಗೂ ದೋಣಿಗಳಲ್ಲಿ ಪ್ರಯಾಣಿಸುತ್ತಿರುವ ಭಾವಚಿತ್ರಗಳು ಸಾಮಾಜಿಕ ಜಾಲ ತಾಣದಲ್ಲಿ ಕಂಡು ಬಂದಿವೆ. 

ವಿಧಾನ ಸಭೆಯಿಂದ ಸೊರೇನ್ ಅವರನ್ನು ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ಸಲಹೆ ನೀಡಿದೆ ಎಂದು ಗುರುವಾರ ವರದಿ ಹೇಳಿತ್ತು. ಈ ಅಭಿಪ್ರಾಯವನ್ನು ರಾಜಭವನಕ್ಕೆ ಮುಚ್ಚಿದ ಲಕೋಟೆಯಲ್ಲಿ ಕಳುಹಿಸಲಾಗಿದೆ ಅದು ತಿಳಿಸಿತ್ತು. ಆದರೆ, ತನ್ನನ್ನು ಅನರ್ಹಗೊಳಿಸಲು ಶಿಪಾರಸು ಮಾಡಿರುವ ಬಗ್ಗೆ ಚುನಾವಣಾ ಆಯೋಗ ಅಥವಾ ರಾಜ್ಯಪಾಲರಿಂದ ಯಾವುದೇ ಮಾಹಿತಿ ಸ್ವೀಕರಿಸಿಲ್ಲ ಎಂದು ಸೊರೇನ್ ಹೇಳಿದ್ದಾರೆ. 

ಸೊರೇನ್ ಅವರು ತನ್ನ ಹೆಸರಿನಲ್ಲಿ ಗಣಿಗಾರಿಕೆ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ‘ಲಾಭದಾಯಕ ಹುದ್ದೆ’ ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಈ ಆದೇಶ ಹೊರಬಿದ್ದಿದೆ ಎನ್ನಲಾಗಿದೆ. ಜಾರ್ಖಂಡ್‌ನಲ್ಲಿ ಸೊರೇನ್ ಅವರು ಗಣಿಗಾರಿಕೆ ಖಾತೆಯನ್ನು ಹೊಂದಿದ್ದಾರೆ. 

ಸರಕಾರಿ ಗುತ್ತಿಗೆಗಳಿಗೆ ಶಾಸಕರನ್ನು ಅನರ್ಹಗೊಳಿಸುವುದನ್ನು ನಿಭಾಯಿಸುವ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 9 ಎ ಅನ್ನು ಸೊರೇನ್ ಅವರು ಉಲ್ಲಂಘಿಸಿದ್ದಾರೆ ಎಂದು ಕೂಡ ಬಿಜೆಪಿ ಆರೋಪಿಸಿದೆ. ಸೊರೇನ್ ಅವರು ಶುಕ್ರವಾರ ಕೂಡ ಆಡಳಿತಾರೂಢ ಮೈತ್ರಿಕೂಟದ ಶಾಸಕರ ಸಭೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News