ಸೇಬುಗಳಿಗೆ ಉತ್ತಮ ಖರೀದಿ ಬೆಲೆ ಆಗ್ರಹಿಸಿ ಅದಾನಿ ಆಗ್ರೋಫ್ರೆಶ್ ಕೇಂದ್ರಗಳನ್ನು ಘೇರಾವ್ ಮಾಡಿದ ಹಿಮಾಚಲದ ಬೆಳೆಗಾರರು

Update: 2022-08-27 08:21 GMT
Photo: Thewire.in/Vivek Gupta

ಹೊಸದಿಲ್ಲಿ:  ಹಿಮಾಚಲ ಪ್ರದೇಶದ ಸೇಬು(Apple) ಬೆಳೆಗಾರರು ತಮಗೆ ತಮ್ಮ ಉತ್ಪನ್ನಗಳಿಗೆ ದೊರಕುತ್ತಿರುವ ಕಡಿಮೆ ಬೆಲೆ, ಪ್ಯಾಕೇಜಿಂಗ್ ಉತ್ಪನ್ನಗಳ ಮೇಲಿನ ಜಿಎಸ್‍ಟಿ ಹಾಗೂ ತಾವು ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ  ಆಗ್ರಹಿಸಿ ಇತ್ತೀಚೆಗೆ ರಾಜ್ಯ ಸರಕಾರದ ವಿರುದ್ಧ ಪ್ರತಿಭಟಿಸಿದ್ದರೆ ಬುಧವಾರ ತಮ್ಮ ಆಕ್ರೋಶವನ್ನು ಅದಾನಿ ಆಗ್ರೋಫ್ರೆಶ್(Adani Agrofresh) ಸಂಸ್ಥೆಯ ವಿರುದ್ಧ ಹೊರಹಾಕಿದ್ದಾರೆ. ಸೇಬು ಖರೀದಿ ಬೆಲೆಯನ್ನು ಪರಿಷ್ಕರಿಸಬೇಕೆಂದು ಅವರು ಅದಾನಿ ಸಂಸ್ಥೆಗೆ ಆಗ್ರಹಿಸಿ ಗಡುವು ವಿಧಿಸಿದ್ದಾರೆ.

ಸಂಯುಕ್ತ ಕಿಸಾನ್ ಮಂಚ್ ಆಶ್ರಯದಲ್ಲಿ ಹಿಮಾಚಲದ ಶಿಮ್ಲಾ(Shimla) ಜಿಲ್ಲೆಯಲ್ಲಿರುವ ರೋಹ್ರು, ರೇವಲಿ ಮತ್ತು ಸೈಂಜ್ ಇಲ್ಲಿನ ಅದಾನಿ ಆಗ್ರೋಫ್ರೆಶ್ ಕೇಂದ್ರಗಳನ್ನು ಸೇಬು ಬೆಳೆಗಾರರು ಘೇರಾವ್ ಮಾಡಿದ್ದಾರೆ ಹಾಗೂ ಸಂಸ್ಥೆ ಸೇಬುಗಳ ಖರೀದಿಗೆ ನೀಡುತ್ತಿರುವ ಕಡಿಮೆ ಬೆಲೆ ವಿರುದ್ಧ ಹರಿಹಾಯ್ದಿದ್ದಾರೆ.

ಖರೀದಿ ಬೆಲೆಯನ್ನು ಕನಿಷ್ಠ ಶೇ 30ರಷ್ಟು ಏರಿಕೆ ಮಾಡುವಂತೆ  ಹಾಗೂ ಪ್ರೀಮಿಯಂ ಸೇಬುಗಳಿಗೆ ಕೆಜಿಗೆ ರೂ 76ಕ್ಕೂ ಹೆಚ್ಚು ಬೆಲೆ ದೊರೆಯಬೇಕೆಂದು ಬೆಳೆಗಾರರು ಆಗ್ರಹಿಸುತ್ತಿದ್ದಾರೆ.

ಪ್ರಸ್ತುತ ಅದಾನಿ ಆಗ್ರೋಫ್ರೇಶ್ ಸಂಸ್ಥೆಯು ಸಿ ದರ್ಜೆಯ ಸೇಬುಗಳಿಗೆ ಕೆಜಿಗೆ ರೂ 15 ಹಾಗೂ ಪ್ರೀಮಿಯಂ ದರ್ಜೆ ಸೇಬಿಗೆ ರೂ 76ಗೆ ಖರೀದಿಸುತ್ತಿದೆ. ಆಫ್ ಸೀಸನ್‍ನಲ್ಲಿ ಕಂಪೆನಿ ತಲಾ ಕೆಜಿ ಸೇಬಿನಿಂದ ಕೆಜಿಗೆ ರೂ 250 ರಿಂದ ರೂ 300ರಷ್ಟು ಗಳಿಸುತ್ತದೆ ಎಂದು ಬೆಳೆಗಾರರು ಹೇಳುತ್ತಿದ್ದಾರೆ.

ತಮ್ಮಿಂದ ಖರೀದಿಸುವ ಉತ್ಪನ್ನಗಳನ್ನು ತಮ್ಮ ಕಣ್ಣೆದುರೇ ತೂಕ ಮಾಡಬೇಕೆಂಬ ಆಗ್ರಹವೂ ಬೆಳೆಗಾರರಿಂದ ಕೇಳಿ ಬಂದಿದೆ.

ಬೆಳೆಗಾರರ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅದಾನಿ ಆಗ್ರೋಫ್ರೆಶ್ ವಕ್ತಾರರೊಬ್ಬರು ಸ್ಥಳೀಯ ಮಂಡಿಗಳು ತಮ್ಮ ಖರೀದಿ ಬೆಲೆಯನ್ನು ನಿಗದಿಪಡಿಸಿದ ನಂತರವಷ್ಟೇ ಕಂಪೆನಿ ತನ್ನ ದರಗಳನ್ನು ಅಂತಿಮಗೊಳಿಸುತ್ತದೆ ಹಾಗೂ ಬೆಳೆಗಾರರ ಜೊತೆಗೆ ಚರ್ಚಿಸುತ್ತದೆ ಎಂದಿದ್ದಾರೆ.

ತಮ್ಮ ಕಂಪೆನಿ ಉತ್ತಮ ಬೆಲೆಗಳನ್ನು ನೀಡುತ್ತಿದೆ ಈ ಸೀಸನ್‍ನಲ್ಲಿ ಹತ್ತು ದಿನಗಳಲ್ಲಿ 7500 ಟನ್ ಸೇಬು ಖರೀದಿಸಿದೆ ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News