×
Ad

ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಬಿಡುಗಡೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ

Update: 2022-08-27 23:10 IST

ಹೊಸದಿಲ್ಲಿ, ಆ. 27: ಬಿಲ್ಕಿಸ್ ಬಾನು ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಎಲ್ಲ 11 ಮಂದಿ ಆಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರಕಾರದ ನಿರ್ಧಾರ ವಿರೋಧಿಸಿ ದೇಶದ ಹಲವು ಭಾಗಗಳಲ್ಲಿ ಶನಿವಾರ ಪ್ರತಿಭಟನೆ ನಡೆದಿದೆ.  

ಬೆಂಗಳೂರು, ಗುಲ್ಬರ್ಗ, ಯಾದ್ಗಿರಿ, ದಾವಣಗೆರೆ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ಬಳ್ಳಾರಿ, ಬೀದರ್, ಮುಧೋಳ,   ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಹಾಗೂ ಬಿಜಾಪುರ ಸೇರಿದಂತೆ ಕರ್ನಾಟಕದ ವಿವಿಧ ಸ್ಥಳಗಳಲ್ಲಿ ಪ್ರತಿಭಟನೆ ನಡೆಯಿತು. 

ಬೆಂಗಳೂರಿನ ಫ್ರೀಡಂ ಪಾರ್ಕ್‌ನಿಂದ ಆರಂಭವಾದ ರ್ಯಾಲಿಯಲ್ಲಿ ಹಲವು ಸಮದಾಯದ ಸದಸ್ಯರು, ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಪಾಲ್ಗೊಂಡಿದ್ದರು. ಬಿಲ್ಕಿಸ್ ಬಾನು  ಹಾಗೂ ಅವರ ಕುಟುಂಬದ ಸದಸ್ಯರಿಗೆ ಬೆಂಬಲ ನೀಡುವುದಾಗಿ ರ್ಯಾಲಿಯಲ್ಲಿ ಪಾಲ್ಗೊಂಡವರು ಹೇಳಿದ್ದಾರೆ. 

ಅಪರಾಧಿಗಳಿಗೆ ಕ್ಷಮಾದಾನ ನೀಡಿದ ವಿರುದ್ಧ 200 ಜನರು ಸಹಿ ಹಾಕಿದ ಮನವಿಯನ್ನು ರಾಜ್ಯಪಾಲರಿಗೆ ಸಲ್ಲಿಸಲಾಯಿತು. 

ಹೊಸದಿಲ್ಲಿಯಲ್ಲಿ ಸಿಪಿಐ (ಎಂ) ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿತು. ಪ್ರಕರಣದ 11 ಅಪರಾಧಿಗಳ ಬಿಡುಗಡೆಯನ್ನು ರದ್ದುಗೊಳಿಸುವಂತೆ ಪಕ್ಷ ಆಗ್ರಹಿಸಿತು. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನಟಿ ಶಬನಾ ಅಜ್ಮಿ ಕೂಡ ಪಾಲ್ಗೊಂಡಿದ್ದರು. ಅವರು ತಮ್ಮ ಭಾಷಣದಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಿರುವ ನಿರ್ಧಾರವನ್ನು ಟೀಕಿಸಿದರು. 

ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಕೂಡ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದರು. ಅವರಲ್ಲಿ ಕೆಲವರು ಪ್ರತಿಭಟನ ಸ್ಥಳದಲ್ಲಿ ಧರಣಿ ನಡೆಸಿದರು. ಎನ್‌ಸಿಪಿಯ ಥಾಣೆ-ಪಾಲ್ಘಾರ್ ಘಟಕದ ಮಹಿಳಾ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದರು. 

ಥಾಣೆಯ ಶಿವಾಜಿ ಸ್ಕ್ವಾರ್‌ನಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಕೇಂದ್ರ ಹಾಗೂ ಗುಜರಾತ್‌ನ ಬಿಜೆಪಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. 
‘‘ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಸಬಲೀಕರಣ ಹಾಗೂ ಮಹಿಳೆಯರಿಗೆ ಗೌರವ ನೀಡುವ ಬಗ್ಗೆ ಮಾತನಾಡಿದ ಸಂದರ್ಭ ಈ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿದೆ’’ ಎಂದು ಎನ್‌ಸಿಪಿಯ ಮಹಿಳಾ ಘಟಕದ ಅಧ್ಯಕ್ಷೆ ರುತಾ ಅವ್ಹದ್ ಅವರು ಥಾಣೆ-ಪಾಲ್ಘಾರ್‌ನಲ್ಲಿ ಹೇಳಿದ್ದಾರೆ. 

ನಾಗಪುರ ಹಾಗೂ ಭೋಪಾಲದಲ್ಲಿ ಕೂಡ ಪ್ರತಿಭಟನೆ ನಡೆದವು. ಮುಂಬೈಯ ಕಾರ್ಟರ್ ರಸ್ತೆಯಲ್ಲಿ ಇನ್ನೊಂದು ಪ್ರತಿಭಟನೆ ರವಿವಾರ ಸಂಜೆ 5 ಗಂಟೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News