ಅವಿವಾಹಿತ ಪಾಲುದಾರಿಕೆ ಮತ್ತು ವಿಲಕ್ಷಣ ಸಂಬಂಧಗಳ ರೂಪದಲ್ಲಿಯೂ ಕುಟುಂಬಗಳಿರಬಹುದು: ಸುಪ್ರೀಂ ಕೋರ್ಟ್

Update: 2022-08-29 12:19 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಆ.29: ಕುಟುಂಬಗಳು ಕೌಟುಂಬಿಕ, ಅವಿವಾಹಿತ ಪಾಲುದಾರಿಕೆಗಳು ಮತ್ತು ವಿಲಕ್ಷಣ ಸಂಬಂಧಗಳ ರೂಪದಲ್ಲಿಯೂ ಇರಬಹುದು ಮತ್ತು ಅವು ಸಾಂಪ್ರದಾಯಿಕ ಕುಟುಂಬಗಳಂತೆ ಕಾನೂನಿನಡಿ ರಕ್ಷಣೆಗೆ ಮತ್ತು ಸಮಾಜ ಕಲ್ಯಾಣ ಶಾಸನದಡಿ ಲಭ್ಯ ಪ್ರಯೋಜನಗಳಿಗೆ ಸಮಾನವಾಗಿ ಅರ್ಹವಾಗುತ್ತವೆ ಎಂದು ಸರ್ವೋಚ್ಚ ನ್ಯಾಯಾಲಯವು(Supreme Court) ಇತ್ತೀಚಿನ ಮಹತ್ವದ ತೀರ್ಪೊಂದರಲ್ಲಿ ಹೇಳಿದೆ.

ಕುಟುಂಬವು ತಾಯಿ-ತಂದೆ ಮತ್ತು ಅವರ ಮಕ್ಕಳ ಬದಲಾಗದ ಏಕ ಘಟಕವನ್ನು ಒಳಗೊಂಡಿರುತ್ತದೆ ಎನ್ನುವುದು ಕಾನೂನಿನಲ್ಲಿ ಮತ್ತು ಸಮಾಜದಲ್ಲಿ ಕುಟುಂಬ ಪರಿಕಲ್ಪನೆಯ ಪ್ರಧಾನ ತಿಳುವಳಿಕೆಯಾಗಿದೆ ಎಂದು ಹೇಳಿರುವ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು, ಒಬ್ಬರ ಕೌಟುಂಬಿಕ ಸ್ವರೂಪದಲ್ಲಿ ಬದಲಾವಣೆಗೆ ಕಾರಣವಾಗಬಹುದಾದ ಹಲವು ಸಂದರ್ಭಗಳು ಮತ್ತು ಅನೇಕ ಕುಟುಂಬಗಳು ಆರಂಭದಲ್ಲಿ ಈ ನಿರೀಕ್ಷೆಯನ್ನು ಹೊಂದಿರುವುದಿಲ್ಲ ಎಂಬ ವಾಸ್ತವ, ಇವೆರಡನ್ನೂ ಈ ತಿಳುವಳಿಕೆಯು ಕಡೆಗಣಿಸುತ್ತದೆ. ಸಂಗಾತಿಯ ಸಾವು, ಪ್ರತ್ಯೇಕತೆ ಅಥವಾ ವಿಚ್ಛೇದನ; ಹೀಗೆ ಹಲವಾರು ಕಾರಣಗಳಿಂದ ಒಂದು ಕುಟುಂಬವು ಏಕ ಪೋಷಕ ಕುಟುಂಬವಾಗಿರಬಹುದು ಎಂದು ಅಭಿಪ್ರಾಯಿಸಿದೆ.

ಆ.16ರಂದು ಕೇಂದ್ರ ಸರಕಾರದ ಮಹಿಳಾ ಉದ್ಯೋಗಿಯೋರ್ವರಿಗೆ ಪರಿಹಾರವನ್ನು ಒದಗಿಸಿದ ಸಂದರ್ಭದಲ್ಲಿ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ಮಹಿಳಾ ಉದ್ಯೋಗಿಯ ಪತಿಗೆ ಮೊದಲ ಮದುವೆಯಿಂದ ಇಬ್ಬರು ಮಕ್ಕಳಿದ್ದು, ಅವುಗಳಲ್ಲೊಂದರ ಪಾಲನೆಗಾಗಿ ಆಕೆ ರಜೆಯನ್ನು ಪಡೆದಿದ್ದರು ಮತ್ತು ಇದೇ ಕಾರಣದಿಂದ ತನ್ನ ಸ್ವಂತ ಮಗುವಿಗಾಗಿ ಹೆರಿಗೆ ರಜೆಯನ್ನು ಆಕೆಗೆ ನಿರಾಕರಿಸಲಾಗಿತ್ತು.

ಅರ್ಜಿದಾರರ ಪತಿಯು ತನ್ನ ಮೊದಲ ಮದುವೆಯಿಂದ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ ಎಂಬ ಅಂಶವು ಆಕೆಯ ಏಕೈಕ ಜೈವಿಕ ಮಗುವಿಗಾಗಿ ಹೆರಿಗೆ ರಜೆಯನ್ನು ಪಡೆಯುವ ಆಕೆಯ ಅರ್ಹತೆಗೆ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ. ತೀರ್ಪನ್ನು ರವಿವಾರ ಅಪ್‌ಲೋಡ್ ಮಾಡಲಾಗಿದೆ.

2018ರಲ್ಲಿ ಸರ್ವೋಚ್ಚ ನ್ಯಾಯಾಲಯವು ಸಲಿಂಗ ಕಾಮವನ್ನು ಅಪರಾಧಮುಕ್ತಗೊಳಿಸಿದ ಬಳಿಕ ಸಲಿಂಗ ವಿವಾಹಗಳಿಗೆ ಮಾನ್ಯತೆ ನೀಡುವಂತೆ ಮತ್ತು ಲಿವ್-ಇನ್ ದಂಪತಿಗಳಿಗೆ ದತ್ತು ಪಡೆಯಲು ಅವಕಾಶ ನೀಡುವಂತೆ ಹಲವಾರು ಮಾನವ ಹಕ್ಕು ಕಾರ್ಯಕರ್ತರು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಈ ಅಭಿಪ್ರಾಯವು ಮಹತ್ವವನ್ನು ಪಡೆದುಕೊಂಡಿದೆ.

ಮರುಮದುವೆ, ದತ್ತು ಪಡೆಯುವಿಕೆ ಅಥವಾ ಪೋಷಣೆಯೊಂದಿಗೆ ಮಕ್ಕಳ ಪೋಷಕರು ಮತ್ತು ಪಾಲಕರ ಪಾತ್ರಗಳು ಬದಲಾಗಬಹುದು ಎಂದು ತನ್ನ ತೀರ್ಪಿನಲ್ಲಿ ಹೇಳಿರುವ ಸರ್ವೋಚ್ಚ ನ್ಯಾಯಾಲಯವು, ಪ್ರೀತಿ ಮತ್ತು ಕುಟುಂಬಗಳ ಈ ಅಭಿವ್ಯಕ್ತಿಗಳು ವಿಶಿಷ್ಟವಲ್ಲದಿರಬಹುದು, ಆದರೆ ಅವು ಇತರ ಸಾಂಪ್ರದಾಯಿಕ ಕುಟುಂಬಗಳಂತೆ ನೈಜವಾಗಿರುತ್ತವೆ ಎಂದು ತಿಳಿಸಿದೆ.

ಇದನ್ನೂ ಓದಿ: ಕಮ್ಯುನಿಸ್ಟರು ದೇವಸ್ಥಾನಗಳ ಮೇಲೆ ನಿಯಂತ್ರಣ ಸಾಧಿಸುತ್ತಿದ್ದಾರೆ ಎಂದ ನಿವೃತ್ತ ನ್ಯಾಯಾಧೀಶೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News