ಇಲ್ಲಿಂದ ತೆರಳುವಂತೆ ನಮಗೆ ಯಾರೂ ಹೇಳಿರಲಿಲ್ಲ: ನೊಯ್ಡಾ ಸೂಪರ್‌ಟೆಕ್ ಬಳಿಯ ಜೋಪಡಿ ನಿವಾಸಿಗಳು

Update: 2022-08-29 12:41 GMT
Photo: PTI

ನೊಯ್ಡ: ನೊಯ್ಡಾ(Noida)ದಲ್ಲಿ ಅಕ್ರಮವಾಗಿ ನಿರ್ಮಾಣಗೊಂಡಿದ್ದ ಸೂಪರ್‌ಟೆಕ್(Supertech towers) ಅವಳಿ ಕಟ್ಟಡಗಳಿಂದ ಕೆಲವೇ ಮೀಟರ್‌ಗಳ ದೂರದಲ್ಲಿ, ಜೆಪಿ ಫ್ಲೈಓವರ್‌ನ ಪಕ್ಕದಲ್ಲಿ ಮೂರು ಕುಟುಂಬಗಳು ರವಿವಾರ ಬೆಳಿಗ್ಗೆ ತಮ್ಮ ಗುಡಿಸಲುಗಳ ಹೊರಗೆ ಕುಳಿತು ಕಟ್ಟಡಗಳ ನೆಲಸಮ ಕಾರ್ಯಾಚರಣೆಯನ್ನು ವೀಕ್ಷಿಸುತ್ತಿದ್ದವು. ಗಗನಚುಂಬಿ ಕಟ್ಟಡಗಳಲ್ಲಿಯ ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು, ಆದರೆ ತಮ್ಮನ್ನು ಮಾತ್ರ ಯಾರೂ ಕೇಳಿಯೇ ಇರಲಿಲ್ಲ ಎಂದು ಈ ಕುಟುಂಬಗಳು ತಿಳಿಸಿವೆ ಎಂದು indianexpress.com ವರದಿ ಮಾಡಿದೆ. 

ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಹಂಸರಾಜ (50),ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರು ತಮ್ಮ ಆಹಾರ ಮತ್ತು ಟವೆಲ್‌ಗಳನ್ನು ಪ್ಯಾಕ್ ಮಾಡಿಕೊಳ್ಳಲು ಆರಂಭಿಸಿದ್ದರು. ‘ನಾವು ಕಳೆದ 10-12 ವರ್ಷಗಳಿಂದಲೂ ಫ್ಲೈಓವರ್ ಬದಿಯಲ್ಲಿ ವಾಸವಿದ್ದೇವೆ. ಸೂಪರ್‌ಟೆಕ್ ನಿರ್ಮಾಣ ಆರಂಭಗೊಂಡಿದ್ದು ನನಗೆ ನೆನಪಿದೆ. ನಾವೆಂದೂ ಕಟ್ಟಡದ ನಿರ್ಮಾಣ ಅಥವಾ ಕಾನೂನು ಉಲ್ಲಂಘನೆಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಕಟ್ಟಡಗಳ ನೆಲಸಮದ ಬಗ್ಗೆ ಕೆಲವು ದಿನಗಳ ಹಿಂದಷ್ಟೇ ನಮಗೆ ಗೊತ್ತಾಗಿತ್ತು. ಆದರೆ ಅದು ಸಂಭವಿಸುತ್ತದೆ ಎನ್ನುವುದು ನನಗೆ ಗೊತ್ತಿರಲಿಲ್ಲ. ನಮ್ಮನ್ನು ಯಾರೂ ಸಂಪರ್ಕಿಸಲಿಲ್ಲ ಅಥವಾ ಇಲ್ಲಿಂದ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಿಯೂ ಇರಲಿಲ್ಲ. ಕೆಲವು ಪೊಲೀಸರು ಬೆಳಿಗ್ಗೆ ಇಲ್ಲಿ ಕಾಣಿಸಿಕೊಂಡಿದ್ದರು ಮತ್ತು ರಸ್ತೆಯಾಚೆಯ ಮೈದಾನದಲ್ಲಿ ಹೋಗಿ ಉಳಿಯುವಂತೆ ಸೂಚಿಸಿದ್ದರು, ಆದರೆ ನಾವದನ್ನು ಕಡೆಗಣಿಸಿದ್ದೆವು’ ಎಂದು ಹಂಸರಾಜ ಹೇಳಿದರು.

‘ನಾವು ಬೇರೆಲ್ಲಿಗೆ ಹೋಗುವುದು? ನಾವು ಇಲ್ಲಿಯೇ ಕುಳಿತುಕೊಳ್ಳುತ್ತೇವೆ. ಬೆಳಿಗ್ಗೆಯೇ ಅಡಿಗೆ ಮಾಡಿಟ್ಟಿದ್ದು, ನೆಲಸಮ ಕಾರ್ಯಾಚರಣೆ ಆರಂಭಗೊಂಡಾಗ ಊಟ ಮಾಡುತ್ತೇವೆ’ಎಂದು ಹಂಸರಾಜರ ಪತ್ನಿ ಲೇಖಾ ಹೇಳಿದರು. ಅವರ ಗುಡಿಸಲುಗಳ ಹೊರಗೆ ಕುಳಿತಿದ್ದ ನೊಯ್ಡ ಪೊಲೀಸರು, ಮಧ್ಯಾಹ್ನ 1:30-2 ಗಂಟೆಯ ಸುಮಾರಿಗೆ ಈ ಕುಟುಂಬಗಳನ್ನು ಇಲ್ಲಿಂದ ಸ್ಥಳಾಂತರಿಸುತ್ತೇವೆ. ಅವರಿಗೆ ಆಹಾರ ಮತ್ತು ನೀರನ್ನು ಒದಗಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ನೆಲಸಮ ಕಾರ್ಯಾಚರಣೆ ವೇಳೆ ಬ್ಯಾರಿಕೇಡ್ ಬಳಿ ಕುಳಿತಿದ್ದ ಹಂಸರಾಜ ಕುಟುಂಬವು ಅದು ಮುಗಿದ ತಕ್ಷಣ ತಮ್ಮ ಗುಡಿಸಲಿಗೆ ಮರಳಿ ಅದಕ್ಕೆ ಬೀಗ ಹಾಕಿತ್ತು.

‘ಬೇರೆ ಬೇರೆ ಸೊಸೈಟಿಗಳ ನಿವಾಸಿಗಳನ್ನು ಕ್ಲಬ್‌ಹೌಸ್‌ಗಳಿಗೆ ಸ್ಥಳಾಂತರಿಸಲಾಗಿದೆ ಎಂದು ನನ್ನ ಪತಿ ತಿಳಿಸಿದರು. ನಾವು ಫ್ಲೈಓವರ್ ಬಳಿ ವಾಸವಾಗಿದ್ದಕ್ಕಿರಬಹುದು,ನಮ್ಮ ಬಳಿ ಯಾರೂ ಬರಲಿಲ್ಲ. ಮಾಧ್ಯಮ ಪ್ರತಿನಿಧಿಗಳು ಮತ್ತು ಪೊಲೀಸರನ್ನು ಕಂಡಾಗ ನಮ್ಮನ್ನು ಇಲ್ಲಿಂದ ಹೊರದಬ್ಬುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ ಪೊಲೀಸರು ಹಾಗೆ ಮಾಡಲಿಲ್ಲ. ನಾವು ಇಲ್ಲಿ ಇರಬಹುದು,ಆದರೆ ಎರಡು ಗಂಟೆಯ ಸುಮಾರಿಗೆ ಮೈದಾನಕ್ಕೆ ತೆರಳಬೇಕು ಎಂದು ಅವರು ನಮಗೆ ತಿಳಿಸಿದ್ದರು. ನನ್ನ ಮಗ ನೆಲಸಮ ಕಾರ್ಯಾಚರಣೆ ನೋಡಲು ಬಯಸಿದ್ದಾನೆ, ಹೀಗಾಗಿ ನಾವು ಪಾರ್ಕ್‌ಗೆ ತೆರಳಬಹುದು’ ಎಂದು ರೇಷ್ಮಾ ಹೇಳಿದರು.

ಕುಟುಂಬವು ಫ್ಲೈಓವರ್ ಬಳಿಯ ಪುಟ್ಟ ಅರಣ್ಯದಲ್ಲಿ ಉಳಿದುಕೊಂಡಿತ್ತು ಮತ್ತು ಮೈದಾನಕ್ಕೆ ತೆರಳಿರಲಿಲ್ಲ. ಪೊಲೀಸರು ಅವರನ್ನು ಅಲ್ಲಿಂದ ಎಬ್ಬಿಸಿರಲಿಲ್ಲ.

ಗುಡಿಸಲು ವಾಸಿಗಳ ಕುರಿತು ಪ್ರಶ್ನೆಗೆ ನೊಯ್ಡ ಪ್ರಾಧಿಕಾರದ ಹಿರಿಯ ಅಧಿಕಾರಿಯೋರ್ವರು, ‘ಮಾಧ್ಯಮ ಪ್ರತಿನಿಧಿಗಳು ನೆಲಸಮ ಕಾರ್ಯಾಚರಣೆಯನ್ನು ನೋಡಲು ಫ್ಲೈಓವರ್ ಸುರಕ್ಷಿತ ಸ್ಥಳವಾಗಿದೆ. ನಾವು ಯಾರನ್ನೂ ಮರೆತಿಲ್ಲ ಅಥವಾ ಅವರನ್ನು ಅಪಾಯಕ್ಕೆ ಸಿಲುಕಿಸಿಲ್ಲ. ಅಲ್ಲದೆ ನೆಲಸಮ ಮತ್ತು ಆರೋಗ್ಯ ಅಪಾಯಗಳ ಬಗ್ಗೆ ಈ ಕುಟುಂಬಗಳಿಗೆ ವಾರಗಳ ಹಿಂದೆಯೇ ತಿಳಿಸಲಾಗಿತ್ತು. ಕಳೆದ ರಾತ್ರಿ ಹೆಚ್ಚಿನ ಕುಟುಂಬಗಳು ತಮ್ಮ ಗುಡಿಸಲುಗಳಿಂದ ಬೇರೆಡೆಗೆ ತೆರಳಿವೆ. ಕೇಲವೇ ಜನರು ಇಲ್ಲಿ ಉಳಿದಿದ್ದಾರೆ. ಸ್ಥಳೀಯರು ನೆಲಸಮ ಕಾರ್ಯಾಚರಣೆಯನ್ನು ನೋಡಲು ಇಲ್ಲಿ ಜಮಾಯಿಸಿದ್ದರಿಂದ ನಾವೂ ಅವರನ್ನು ಇಲ್ಲಿಂದ ಎಬ್ಬಿಸಲಿಲ್ಲ’ ಎಂದು ಉತ್ತರಿಸಿದರು.

ಇದನ್ನೂ ಓದಿ: ಅವಿವಾಹಿತ ಪಾಲುದಾರಿಕೆ ಮತ್ತು ವಿಲಕ್ಷಣ ಸಂಬಂಧಗಳ ರೂಪದಲ್ಲಿಯೂ ಕುಟುಂಬಗಳಿರಬಹುದು: ಸುಪ್ರೀಂ ಕೋರ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News