×
Ad

ಕೊರಗರ ವೈದ್ಯಕೀಯ ವೆಚ್ಚ ಮರುಪಾವತಿ ಅವಕಾಶ ರದ್ದುಪಡಿಸಿದ ಸರಕಾರ; ಪ್ರತಿಭಟನೆಯ ಎಚ್ಚರಿಕೆ

Update: 2022-08-29 20:34 IST

ಉಡುಪಿ: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ವಾಸವಾಗಿರುವ, ಅಳಿವಿನಂಚಿನಲ್ಲಿರುವ ಇಲ್ಲಿನ ಮೂಲನಿವಾಸಿ ಆದಿವಾಸಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಕೊರಗ ಜನಾಂಗದವರಿಗೆ ಕಳೆದ ಕೆಲವು ವರ್ಷಗಳಿಂದ ಲಭ್ಯವಿದ್ದ ‘ಆರೋಗ್ಯ ನಿಧಿ’ ವೈದ್ಯಕೀಯ ವೆಚ್ಚ ಮರುಪಾವತಿಯ ಅವಕಾಶವನ್ನು ರದ್ದುಪಡಿಸಿ ರಾಜ್ಯ ಸರಕಾರ ಆಗಸ್ಟ್ 17ರಂದು ಆದೇಶ ಹೊರಡಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ- ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಕೆ.ಪುತ್ರನ್ ಹಾಗೂ ಮಾಜಿ ಅಧ್ಯಕ್ಷೆ ಸುಶೀಲಾ ನಾಡ  ಈ ವಿಷಯ ತಿಳಿಸಿದ್ದಾರೆ. ಸರಕಾರದ ಈ ಆದೇಶದ ಕುರಿತಂತೆ ಒಕ್ಕೂಟ, ಮೊನ್ನೆ ಉಡುಪಿಗೆ ಆಗಮಿಸಿದ ರಾಜ್ಯಪಾಲರಿಗೆ ಹಾಗೂ  ಉಡುಪಿ ಶಾಸಕರಿಗೆ ಮನವಿ ಅರ್ಪಿಸಿದೆ. ಮುಂದಿನ ಒಂದು ತಿಂಗಳೊಳಗೆ ಸರಕಾರ ಆದೇಶವನ್ನು ವಾಪಾಸು ಪಡೆದು,  ಕೊರಗರ ವೈದ್ಯಕೀಯ ಚಿಕಿತ್ಸಾ ವೆಚ್ಚವನ್ನು ಮರುಪಾವತಿ ಮಾಡಲು ಒಪ್ಪದಿದ್ದರೆ ಒಕ್ಕೂಟ ಜಿಲ್ಲಾಧಿಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಸುಶೀಲ ನಾಡ ಎಚ್ಚರಿಕೆ ನೀಡಿದರು.

ಅಳಿವಿನಂಚಿನಲ್ಲಿ ಸಮುದಾಯ: ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳಲ್ಲಿ ಮೂಲ ನಿವಾಸಿ ಕೊರಗ ಜನಾಂಗ, ಈ ಭಾಗದಲ್ಲಿ ತೀರಾ ಹಿಂದುಳಿದ, ಬಡ, ಅನಕ್ಷರಸ್ಥ ಹಾಗೂ ಅಪೌಷ್ಠಿಕತೆಯಿಂದ ಬಳಲುತ್ತಿರುವ ಸಮುದಾಯವಾಗಿದ್ದು,  ವರ್ಷದಿಂದ ವರ್ಷಕ್ಕೆ ಇವರ ಜನ ಸಂಖ್ಯೆ ಇಳಿಮುಖ ವಾಗುತ್ತಿರುವುದನ್ನು ಸರಕಾರದ ಅಂಕಿಅಂಶಗಳೇ ಖಚಿತ ಪಡಿಸುತ್ತಿವೆ ಎಂದು ಕೆ.ಪುತ್ರನ್ ತಿಳಿಸಿದರು.

2011ರ ಜನಗಣತಿಯ ಅಂಕಿಅಂಶಗಳಂತೆ ಕೊರಗ ಸಮುದಾಯ ಜನಸಂಖ್ಯೆ  ಉಡುಪಿ ಜಿಲ್ಲೆಯಲ್ಲಿ 11,133, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೪೮೫೮ ಹಾಗೂ ಕಾಸರಗೋಡಿನಲ್ಲಿ 1400 ಆಗಿದೆ. ಪ್ರತಿ ಜನಗಣತಿಯಲ್ಲಿ ಈ ಸಂಖ್ಯೆ ಇಳಿಮುಖವಾಗುತ್ತಿರುವುದನ್ನು ತೋರಿಸುತ್ತಿದೆ. ಇದರರ್ಥ ನಮ್ಮ ಸಮುದಾಯ ಅಳಿವಿನಂಚಿನಲ್ಲಿದೆ. ಇದಕ್ಕೆ ಕಾರಣಗಳು ನಿಗೂಢ ಎಂದು ಸುಶೀಲ ನಾಡ ವಿವರಿಸಿದರು.

ಕೊರಗ ಸಮುದಾಯ ನಶಿಸುತ್ತಿರುವ ಬಗ್ಗೆ ಮಹಮ್ಮದ್ ಪೀರ್ ಸಮಿತಿಯ ವರದಿಯಂತೆ  ಮಾನವಶಾಸ್ತ್ರ, ಸಮಾಜ ಶಾಸ್ತ್ರ ಹಾಗೂ ಮನೋಶಾಸ್ತ್ರಜ್ಞರನ್ನು ಒಳಗೊಂಡ ತಜ್ಞರ ಸಮಿತಿಯ ಮೂಲಕ ಅಧ್ಯಯನ ನಡೆಸುವಂತೆ ನಮ್ಮ ಸಮುದಾಯ ಕಳೆದ 20 ವರ್ಷಗಳಿಂದ ಒತ್ತಾಯ ಮಾಡುತಿದ್ದರೂ ಈವರೆಗೆ ಸರಕಾರವಾಗಲೀ, ಇಲಾಖೆಯಾಗಲೀ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದವರು ದೂರಿದರು.

ವರದಿ ತಿರಸ್ಕಾರ: ಇದಕ್ಕೆ ಬದಲು ಐಟಿಡಿಪಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ವೈದ್ಯರ ಮೂಲಕ ಅಧ್ಯಯನ ನಡೆಸಿದ್ದು, ಅವರು ಸಮುದಾಯದ ಆರೋಗ್ಯ ಹದಗೆಡುವುತ್ತಿರುವುದು ಹಾಗೂ ಕೊರಗರು ಬೇಗನೇ ಮರಣ ಹೊಂದಲು ಅವರ ದುಶ್ಚಟ ಹಾಗೂ ಮದ್ಯಪಾನವೇ ಕಾರಣ ಎಂದು ವರದಿ ನೀಡಿದ್ದು, ಅದನ್ನು ಜಿಲ್ಲಾಡಳಿತ ಹೇಳುತ್ತಿದೆ. ಆದರೆ ಇದನ್ನು ಸಮುದಾಯ ಸಾರಾಸಗಟಾಗಿ ತಿರಸ್ಕರಿಸುತ್ತದೆ. ಮಹಮ್ಮದ್ ಪೀರ್ ವರದಿಯಂತೆ ತಜ್ಞರ ಸಮಿತಿಯಿಂದ ಅಧ್ಯಯನ ನಡೆಸುವಂತೆ ಒತ್ತಾಯಿಸುತ್ತದೆ ಎಂದರು.

ಜಿಲ್ಲೆಗಳಲ್ಲಿ ಕೊರಗ ಸಮುದಾಯ ರಕ್ತಹೀನತೆ, ಅಪೌಷ್ಛಿಕತೆ, ಟಿಬಿ, ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಂದ ಬಳಲುತಿದ್ದು, ಸರಿಯಾದ ಚಿಕಿತ್ಸೆ ಇಲ್ಲದೇ ಮರಣ ಹೊಂದುತಿದ್ದಾರೆ ಎಂಬುದು ಸಮುದಾಯದ ವಾದವಾಗಿದೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಹಾಗೂ ಓರ್ವ ಬಾಲಕಿ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದು, ದುಶ್ಚಟ, ಮದ್ಯಪಾನದ ವರದಿ ಸುಳ್ಳೆಂದು ಸಾಬೀತು ಪಡಿಸಿದೆ ಎಂದು ಹೇಳಿದರು.

1990ರ ಸುಮಾರಿಗೆ ಕೊರಗ ಸಮುದಾಯ ನಡೆಸಿದ ಸತತ ಹೋರಾಟದ ಹಿನ್ನೆಲೆಯಲ್ಲಿ ಮೂಲನಿವಾಸಿ ಅಭಿವೃದ್ಧಿ ಯೋಜನೆಯಡಿ 2008ರಿಂದ ಕೊರಗ ಮತ್ತು ಕೊಡಗಿನ ಜೇನುಕುರುಬ ಜನಾಂಗದವರ ಅಭಿವೃದ್ಧಿಗಾಗಿ ಪಿವಿಟಿಜಿ ಅಡಿ ಅನುದಾನವನ್ನು ಬಿಡುಗಡೆ ಮಾಡುತ್ತಿದೆ. ಈ ಅನುದಾನದ ಒಂದು ಭಾಗವನ್ನು  ನಮ್ಮಲ್ಲಿ ಕೊರಗ ಜನಾಂಗದವರ ಅರೋಗ್ಯ ನಿಧಿಗಾಗಿ ನೀಡಲಾಗುತ್ತಿದೆ. ಈ ಆರೋಗ್ಯನಿಧಿಯಲ್ಲಿ ಮಾರಕವಾದ ಕಾಯಿಲೆಗಾಗಿ ಕೊರಗು ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆಯಲು ಅವಕಾಶವಿದ್ದು, ಅದನ್ನು ಐಟಿಡಿಪಿ ಇಲಾಖೆ ಭರಿಸುತ್ತಿತ್ತು ಎಂದು ಸುಶೀಲ ನಾಡ ತಿಳಿಸಿದರು.

ಪಿವಿಟಿಜಿ ಅನುದಾನ 2008ರಿಂದ 2015ರವರೆಗೆ ಬಂದಿದ್ದು, ಅನಂತರ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಅನುದಾನ ಬರುವುದು ನಿಂತಿದೆ. ಆದರೂ ವಿವಿಧ ಯೋಜನೆಗಳ ಉಳಿಕೆಯ ಹಣ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಿಯಾಂಕ ಮೇರಿ ಜಿಲ್ಲಾಧಿಕಾರಿಯಾಗಿದ್ದಾಗ ಮಾಡಿದ ಆದೇಶದಂತೆ ಎಸ್‌ಸಿ, ಎಸ್‌ಟಿ ನಿಧಿಯಲ್ಲಿ ಕೊರಗರ ಒಂದು ಭಾಗದ ಮೂಲಕ ಆರೋಗ್ಯ ನಿಧಿಯನ್ನು ಇಲಾಖೆ ಭರಿಸುತಿತ್ತು ಎಂದು ಅವರು ವಿವರಿಸಿದರು. 

2016ರಲ್ಲಿ ಕೊರಗರ ಆರೋಗ್ಯನಿಧಿಗಾಗಿಯೇ ಸರಕಾರ ಒಂದು ಕೋಟಿ ರೂ. ಬಿಡುಗಡೆ ಮಾಡಿತ್ತು. ಆಮೇಲೆ ಯಾವುದೇ ಅನುದಾನ ಬಂದಿಲ್ಲ. ಇದೀಗ ಸಮಾಜ ಕಲ್ಯಾಣ ಇಲಾಖೆಯ ಉಪಕಾರ್ಯದರ್ಶಿಯವರು ಆ.17ರಂದು ನೀಡಿದ ಆದೇಶದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖಾಧಿಕಾರಿಗಳು ಕೊರಗ ಸಮುದಾಯದವರ ವೈದ್ಯಕೀಯ ವೆಚ್ಚ ಮರುಪಾವತಿಗೆ ಕೇಳಿರುವ ಅನುದಾನ 1.25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇನ್ನು ಮುಂದೆ ಯಾವುದೇ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

ಕೊರಗ ಸಮುದಾಯ ಮದ್ಯಪಾನ ಹಾಗೂ ಇತರ ದುಶ್ಚಟಗಳ ಕಾರಣದಿಂದ ತೀವ್ರತರ ಕಾಯಿಲೆ ಗಳಿಂದ ಬಳಲುತಿದ್ದಾರೆ ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದು,  ಇದನ್ನು ನಾವು ಖಂಡಿಸುವುದಾಗಿ ಕೆ.ಪುತ್ರನ್ ಹಾಗೂ ಸುಶೀಲ ನಾಡ ತಿಳಿಸಿದರು.

ಸರಕಾರ ಈ ಆದೇಶವನ್ನು ಒಂದು ತಿಂಗಳೊಳಗೆ ವಾಪಾಸು ಪಡೆದು, ಆರೋಗ್ಯನಿಧಿಯನ್ನು ಪುನರಾರಂಭಿಸುವ ಮೂಲಕ ನಶಿಸುತ್ತಿರುವ ಆದಿವಾಸಿ ಬುಡಕಟ್ಟು ಸಮುದಾಯವನ್ನು ರಕ್ಷಿಸುವಂತೆ ತಾವು ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ. ಇಲ್ಲದಿದ್ದರೆ ಸಮುದಾಯ ತೀವ್ರ ಹೋರಾಟಕ್ಕಿಳಿಯಲಿದೆ ಎಂದರು. ಇದರೊಂದಿಗೆ ಸಮುದಾಯದ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ಬೋಗ್ರ ಕೊರಗ, ಸುನಂದ ಹಾಗೂ ದಿವಾಕರ ಉಪಸ್ಥಿತರಿದ್ದರು.

ಕೊನೆಯ ಕಂತು 1.25 ಕೋಟಿ ರೂ.ಗೆ ಅನುಮತಿ

ದಕ್ಷಿಣ ಕನ್ನಡ ಜಿಲ್ಲೆಯ 192 ಮಂದಿ ಕೊರಗರ ಚಿಕಿತ್ಸೆಯ 108,70,865 ರೂ.ಹಾಗೂ ಉಡುಪಿ ಜಿಲ್ಲೆಯ 29 ಮಂದಿಯ 16,31,692 ರೂ. ಸೇರಿದಂತೆ ಒಟ್ಟು 221 ಮಂದಿಯ 125,02,557 ರೂ.ಗಳ (1.25ಕೋಟಿ ರೂ.) ಕೊರಗ ಸಮುದಾಯದ ವೈದ್ಯಕೀಯ ವೆಚ್ಚವನ್ನು ಮರು ಪಾವತಿಸಲು ಅನುದಾನ ಬೇಡಿಕೆಗೆ ಇನ್ನು ಮುಂದೆ ಯಾವುದೇ ವೈದ್ಯಕೀಯ ವೆಚ್ಚ ಮರು ಪಾವತಿಗೆ ಅವಕಾಶವಿರುವುದಿಲ್ಲ ಎಂಬ ಷರತ್ತಿಗೆ ಒಳಪಟ್ಟು ಮಂಜೂರಾತಿ ನೀಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇನ್ನು ಮುಂದೆ ಭಾರತ ಸರಕಾರ ಹಾಗೂ ರಾಜ್ಯ ಸರಕಾರವು ವಿವಿಧ ಯೋಜನೆಗಳ ಮೂಲಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತಿದ್ದು, ಈ ಆರೋಗ್ಯ ಸೌಲಭ್ಯಗಳನ್ನು ಬಳಸಿಕೊಳ್ಳುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News