ಈಗ ದೃಢೀಕೃತ ರೈಲ್ವೆ ಟಿಕೆಟ್,ಹೋಟೆಲ್ ಬುಕಿಂಗ್ ರದ್ದು ಮಾಡಿದರೂ ಜಿಎಸ್‌ಟಿ
ಹೊಸದಿಲ್ಲಿ,ಆ.29: ಕೇಂದ್ರ ವಿತ್ತ ಸಚಿವಾಲಯವು ಆ.3ರಂದು ಹೊರಡಿಸಿರುವ ಸುತ್ತೋಲೆಯಂತೆ ಈಗ ದೃಢೀಕೃತ ರೈಲ್ವೆ ಟಿಕೆಟ್‌ಗಳನ್ನು ರದ್ದುಪಡಿಸುವುದು ಜಿಎಸ್‌ಟಿಯನ್ನು ಆಕರ್ಷಿಸಲಿದೆ,ಇದರೊಂದಿಗೆ ಟಿಕೆಟ್‌ಗಳನ್ನು ರದ್ದುಗೊಳಿಸುವುದು ಪ್ರಯಾಣಿಕರಿಗೆ ಇನ್ನಷ್ಟು ದುಬಾರಿಯಾಗಲಿದೆ.
ವಿತ್ತ ಸಚಿವಾಲಯದ ತೆರಿಗೆ ಸಂಶೋಧನಾ ಘಟಕವು ಹೊರಡಿಸಿರುವ ಸುತ್ತೋಲೆಯಂತೆ ರೈಲ್ವೆ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸುವುದು ಒಂದು ‘ಒಪ್ಪಂದ’ವಾಗಿದೆ ಮತ್ತು ಇದರಡಿ ಐಆರ್‌ಸಿಟಿಸಿ/ಭಾರತೀಯ ರೈಲ್ವೆ ಬಳಕೆದಾರನಿಗೆ ಸೇವೆಯನ್ನೊದಗಿಸುವ ಭರವಸೆಯನ್ನು ನೀಡುತ್ತದೆ.
ಅಧಿಸೂಚನೆಯಂತೆ ಪ್ರಥಮ ದರ್ಜೆ ಅಥವಾ ಏಸಿ ಕೋಚ್‌ಗಾಗಿ ರದ್ದತಿ ಶುಲ್ಕವು ಶೇ.5ರಷ್ಟು ಜಿಎಸ್‌ಟಿಯನ್ನು ಆಕರ್ಷಿಸುತ್ತದೆ. ಇದೇ ತರ್ಕವು ವಿಮಾನ ಪ್ರಯಾಣದ ಟಿಕೆಟ್ ಅಥವಾ ಹೋಟೆಲ್ ವಸತಿಗೂ ಅನ್ವಯಿಸುತ್ತದೆ ಮತ್ತು ಪ್ರಧಾನ ಸೇವೆಗೆ ಅನ್ವಯವಾಗುವ ಜಿಎಸ್‌ಟಿ ದರವನ್ನೇ ರದ್ದತಿ ಶುಲ್ಕದ ಮೇಲೂ ವಿಧಿಸಲಾಗುತ್ತದೆ.
ಸಚಿವಾಲಯದ ಪ್ರಕಾರ ರದ್ದತಿ ಶುಲ್ಕವು ಒಪ್ಪಂದದ ಉಲ್ಲಂಘನೆಗೆ ಬದಲಾಗಿ ಪಾವತಿಸುವ ಮೊತ್ತವಾಗಿದೆ,ಹೀಗಾಗಿ ಅದರ ಮೇಲೆ ಜಿಎಸ್‌ಟಿಯನ್ನು ನೀಡಬೇಕು. ಇಂತಹ ಯಾವುದೇ ಸ್ಥಿತಿಯಲ್ಲಿ ಟಿಕೆಟ್‌ನ ರದ್ದತಿಯು ಈಗ ರದ್ದತಿ ಶುಲ್ಕದ ಮೇಲೆ ಶೇ.5ರಷ್ಟು ಜಿಎಸ್‌ಟಿಯನ್ನು ಆಕರ್ಷಿಸಲಿದೆ.
ಪ್ರಯಾಣಿಕರು ಒಪ್ಪಂದವನ್ನು ಉಲ್ಲಂಘಿಸಿದಾಗ ರದ್ದತಿ ಶುಲ್ಕದ ರೂಪದಲ್ಲಿ ಸಂಗ್ರಹಿಸಲಾಗುವ ಸಣ್ಣ ಮೊತ್ತವು ಸೇವಾ ಪೂರೈಕೆದಾರರಿಗೆ ಪರಿಹಾರವಾಗಿ ದೊರೆಯುತ್ತದೆ. ರದ್ದತಿ ಶುಲ್ಕವು ಪಾವತಿಯಾಗಿದೆ ಮತ್ತು ಒಪ್ಪಂದದ ಉಲ್ಲಂಘನೆಯಲ್ಲ,ಹೀಗಾಗಿ ಅದು ಜಿಎಸ್‌ಟಿಯನ್ನು ಆಕರ್ಷಿಸುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಉದಾಹರಣೆಗೆ ಒಂದು ದರ್ಜೆಯ ರೈಲ್ವೆ ಟಿಕೆಟ್‌ನ ರದ್ದತಿ ಶುಲ್ಕವು ಆ ದರ್ಜೆಯಲ್ಲಿ ಪ್ರಯಾಣಕ್ಕೆ ಅನ್ವಯವಾಗುವ ತೆರಿಗೆ ದರದಲ್ಲಿಯೇ ಜಿಎಸ್‌ಟಿಯನ್ನು ಆಕರ್ಷಿಸುತ್ತದೆ. (ಅಂದರೆ ಪ್ರಥಮ ದರ್ಜೆ ಅಥವಾ ಏಸಿ ದರ್ಜೆಯ ಟಿಕೆಟ್‌ಗಳ ಮೇಲೆ ಶೇ.5 ಮತ್ತು ದ್ವಿತೀಯ ಸ್ಲೀಪರ್ ದರ್ಜೆಯಂತಹ ಇತರ ಟಿಕೆಟ್‌ಗಳ ಶೂನ್ಯ ಜಿಎಸ್‌ಟಿ). ವಿಮಾನ ಪ್ರಯಾಣಕ್ಕೂ ಇದೇ ನಿಯಮ ಅನ್ವಯಿಸುತ್ತದೆ.