ಹಸುಗಳನ್ನು ಥಳಿಸಿ ನದಿಗೆ ಜಿಗಿಯುವಂತೆ ಬಲವಂತಪಡಿಸುತ್ತಿರುವ ವಿಡಿಯೋ ವೈರಲ್: ಪ್ರಕರಣ ದಾಖಲು

Update: 2022-08-29 17:59 GMT
Photo: ndtv.com 

ಭೋಪಾಲ್: ಮಧ್ಯಪ್ರದೇಶದ(Madhya Pradesh) ಸತ್ನಾ ಜಿಲ್ಲೆಯಲ್ಲಿ ಹಸುಗಳನ್ನು(cows) ಥಳಿಸಿ ನದಿಗೆ ಜಿಗಿಯುವಂತೆ ಬಲವಂತಪಡಿಸುವ ವೀಡಿಯೊ ವೈರಲ್ ಆದ ನಂತರ, ಮಧ್ಯಪ್ರದೇಶ ಪೊಲೀಸರು ಆರೋಪಿಗಳ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಮುಕುಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಘುಯಿಸಾ ಮತ್ತು ಬಿಧುಯಿ ಖುರ್ದ್ ಗ್ರಾಮಗಳ ನಡುವಿನ ಬಿಹಾದ್ ನದಿಯ ಮೋರಿಯಲ್ಲಿ ಈ ಘಟನೆ ನಡೆದಿದೆ.

ಜೌಗು ಪ್ರದೇಶವಾದ ಕಿರಿದಾದ ಸೇತುವೆಯೊಳಗೆ ಹತ್ತಕ್ಕೂ ಹೆಚ್ಚು ಹಸುಗಳನ್ನು ಗುಂಪೊಂದು ಉದ್ದವಾದ ಮರದ ಕೋಲುಗಳಿಂದ ಕ್ರೂರವಾಗಿ ಥಳಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಹಸುಗಳು ಓಡಿಹೋಗಲು ಪ್ರಯತ್ನಿಸುತ್ತಿರುವಾಗ ಆರೋಪಿಯೊಬ್ಬ ನದಿಗೆ ತಳ್ಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಜನರ ಗುಂಪಿನ ಉಪಟಳಕ್ಕೆ ಹಲವಾರು ಹಸುಗಳು ನದಿಗೆ ಜಿಗಿದು, ನದಿಯಲ್ಲಿ ಕೊಚ್ಚಿ ಹೋಗಿವೆ. ಘಟನೆಗೆ ಸಂಬಂಧಿಸಿದಂತೆ, ಆರಕ್ಕೂ ಅಧಿಕ ಮಂದಿಯ ಮೇಲೆ ಪ್ರಕರಣ ದಾಖಲಿಸಲಾಗಿದೆ.

ವಿಶ್ವ ಹಿಂದೂ ಪರಿಷತ್ ಈ ಕೃತ್ಯವನ್ನು ಖಂಡಿಸಿದ್ದು, ವಿಡಿಯೋದಲ್ಲಿರುವ ವ್ಯಕ್ತಿಗಳ ವಿರುದ್ಧ ಕಠಿಣ ಶಿಕ್ಷೆಗೆ ಆಗ್ರಹಿಸಿದೆ.

ಪೊಲೀಸರು ವೀಡಿಯೊದ ಬಗ್ಗೆ ಪರಿಶೀಲಿಸಿದ್ದು, ಘಟನೆಯಲ್ಲಿ ಭಾಗಿಯಾಗಿರುವವರು ಘುಯಿಸಾ ಮತ್ತು ಬಿಧುಯಿ ಖುರ್ದ್‌ನವರು ಎಂದು ಕಂಡುಬಂದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಎಸ್‌ಕೆ ಜೈನ್ ಹೇಳಿದ್ದಾರೆ.

ಪರಿಶೀಲನೆಯ ನಂತರ ಲಾಲ್ ಭಾಯ್ ಪಟೇಲ್, ರಾಂಪಾಲ್ ಪಟೇಲ್, ಸುನೀಲ್ ಪಾಂಡೆ, ಲಲ್ಲು ಪಾಂಡೆ ಮತ್ತು ರಾಮದಯಾಳ್ ಪಾಂಡೆ ಸೇರಿದಂತೆ ಇತರರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಉತ್ತರ ಪ್ರದೇಶ: ಮನೆಯಲ್ಲಿ ಸಾಮೂಹಿಕ ನಮಾಝ್‌ ಮಾಡಿದ್ದಕ್ಕೆ ಎಫ್‌ಐಆರ್‌ ದಾಖಲು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News