×
Ad

ದ್ವೇಷ ಭಾಷಣ ಪ್ರಕರಣದ ಆರೋಪಿ ಜಿತೇಂದ್ರ ತ್ಯಾಗಿಗೆ ಸೆ. 2ರ ಒಳಗೆ ಶರಣಾಗಲು ಸುಪ್ರೀಂ ಸೂಚನೆ

Update: 2022-08-29 23:24 IST

ಹೊಸದಿಲ್ಲಿ, ಆ. 29: ಹರಿದ್ವಾರ ಧರ್ಮ ಸಂಸದ್ ದ್ವೇಷ ಭಾಷಣ ಪ್ರಕರಣದ ಆರೋಪಿಯಾಗಿರುವ ಜಿತೇಂದ್ರ ತ್ಯಾಗಿ ಆಲಿಯಾಸ್ ವಾಸಿಮ್ ರಿಝ್ವಿಗೆ ಸೆಪ್ಟಂಬರ್ 2ರ ಒಳಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ. 

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಹಾಗೂ ಬಿ.ವಿ. ನಾಗರತ್ನಾ ಅವರನ್ನು ಒಳಗೊಂಡ ಪೀಠ  ತ್ಯಾಗಿಗೆ ಶರಣಾಗುವಂತೆ ಸೂಚಿಸಿತು ಹಾಗೂ    ಪ್ರಕರಣದ ವಿಚಾರಣೆಯನ್ನು 2022 ಸೆಪ್ಟಂಬರ್ 9ಕ್ಕೆ ಮುಂದೂಡಿತು.  

‘‘ಶರಣಾಗತರಾಗಿ. ವೈದ್ಯಕೀಯ ನೆಲೆಯ  ಜಾಮೀನಿನಲ್ಲಿ ನೀವು ಮುಂದುವರಿಯಲು ಸಾಧ್ಯವಿಲ್ಲ. ನೀವು ವೃದ್ಧರಲ್ಲ. ನಿಮಗೆ ಕೇವಲ 51 ವರ್ಷ ಮಾತ್ರ ಆಗಿದೆ. ನೀವು ಶುಕ್ರವಾರ ಅಥವಾ ಶನಿವಾರ ಶರಣಾಗಿ. ನಾವು ಪ್ರಕರಣವನ್ನು ಮುಂದಿನ ಶುಕ್ರವಾರ ವಿಚಾರಣೆಗೆ ಎತ್ತಿಕೊಳ್ಳುತ್ತೇವೆ’’ ಎಂದು ನ್ಯಾಯಮೂರ್ತಿ ಅಜಯ್ ರಸ್ತೋಗಿ ಹೇಳಿದ್ದಾರೆ. 

ಉತ್ತರಾಖಂಡ ಪೊಲೀಸರು ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಉತ್ತರಾಖಂಡ ಉಚ್ಚ ನ್ಯಾಯಾಲಯ ನೀಡಿದ ತೀರ್ಪು ಪ್ರಶ್ನಿಸಿ ತ್ಯಾಗಿ ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News