ಗುಲಾಂ ನಬಿ ಆಝಾದ್ ಬೆಂಬಲಿಸಿ ಮತ್ತೆ ಮೂವರು ಕಾಂಗ್ರೆಸ್ ನಾಯಕರು ರಾಜೀನಾಮೆ
ಜಮ್ಮು, ಆ. 29: ಹಿರಿಯ ರಾಜಕಾರಣಿ ಗುಲಾಂ ನಬಿ ಆಝಾದ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾಜಿ ಉಪ ಸ್ಪೀಕರ್ ಗುಲಾಂ ಹೈದರ್ ಮಲಿಕ್ ಸೇರಿದಂತೆ ಮತ್ತೆ ಮೂವರು ಕಾಂಗ್ರೆಸ್ ನಾಯಕರು ಸೋಮವಾರ ಪಕ್ಷಕ್ಕೆ ತಮ್ಮ ರಾಜೀನಾಮೆ ಘೋಷಿಸಿದ್ದಾರೆ.
ಕಥುವಾ ಬಾನಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಮಲಿಕ್ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಸುಭಾಷ್ ಗುಪ್ತಾ ಹಾಗೂ ಶ್ಯಾಮ್ ಲಾಲ್ ಭಗತ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರತ್ಯೇಕವಾಗಿ ಪಕ್ಷದ ಹೈಕಮಾಂಡ್‌ಗೆ ರವಾನಿಸಿದ್ದಾರೆ.
‘‘ನಾವು ಮಲಿಕ್, ಗುಪ್ತಾ ಹಾಗೂ ಭಗತ್ ಅವರಿಂದ ಬೆಂಬಲ ಪತ್ರವನ್ನು ಸ್ವೀಕರಿಸಿದ್ದೇವೆ’’ ಎಂದು ಗುಲಾಂ ನಬಿ ಆಝಾದ್ ಅವರ ಆಪ್ತ ಹಾಗೂ ಮಾಜಿ ಸಚಿವ ಜಿ.ಎಂ. ಸರೂರಿ ಅವರು ಹೇಳಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್, ಮಾಜಿ ಸಚಿವರಾದ ಅಬ್ದುಲ್ ಮಜೀದ್ ವಾನಿ, ಮನೋಹರ್ ಲಾಲ್ ಶರ್ಮಾ, ಘರು ರಾಮ್ ಹಾಗೂ ಮಾಜಿ ಶಾಸಕ ಬಲ್ವಾನ್ ಸಿಂಗ್ ಕೂಡ ಗುಲಾಂ ನಬಿ ಆಝಾದ್ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ್ದು, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಬಳಿಕ ಮಂಗಳವಾರ ತಮ್ಮ ನಿಷ್ಠೆಯನ್ನು ಘೋಷಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನೂರಾರು ಪಂಚಾಯತ್ ರಾಜ್ ಸಂಸ್ಥೆಯ ಸದಸ್ಯರು, ಮುನ್ಸಿಪಲ್ ಕಾರ್ಪೊರೇಟರ್‌ಗಳು, ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ನಾಯಕರನ್ನು ಹೊರತುಪಡಿಸಿ ಮಾಜಿ ಸಚಿವರು ಹಾಗೂ ಶಾಸಕರು ಸೇರಿದಂತೆ 12ಕ್ಕೂ ಅಧಿಕ ಕಾಂಗ್ರೆಸ್‌ನ ಪ್ರಮುಖ ನಾಯಕರು ಜಮ್ಮು ಹಾಗೂ ಕಾಶ್ಮೀರದಲ್ಲಿ ರಾಷ್ಟ್ರಮಟ್ಟದ ಪಕ್ಷವನ್ನು ಶೀಘ್ರದಲ್ಲಿ ಆರಂಭಿಸಲಿರುವ ಆಝಾದ್ ಅವರಿಗೆ ಬೆಂಬಲ ವ್ಯಕ್ತಪಡಿಸಲು ಈಗಾಗಲೇ ಕಾಂಗ್ರೆಸ್ ತ್ಯಜಿಸಿದ್ದಾರೆ.