×
Ad

ಪ್ರವಾಹ ಸಂತ್ರಸ್ತ ಪಾಕಿಸ್ತಾನಿ ಕುಟುಂಬಗಳಿಗೆ ಪ್ರಧಾನಿ ಮೋದಿ ಸಾಂತ್ವನ

Update: 2022-08-30 07:19 IST

ಹೊಸದಿಲ್ಲಿ: ಭೀಕರ ಪ್ರವಾಹ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲದ ಪರಿಸ್ಥಿತಿ ಸೃಷ್ಟಿಸಿದ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸೋಮವಾರ ನೆರೆ ಸಂತ್ರಸ್ತ ಪಾಕಿಸ್ತಾನಿ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ ಎಂದು timesofindia.com ವರದಿ ಮಾಡಿದೆ.

"ಪಾಕಿಸ್ತಾನ ಭೀಕರ ಪ್ರವಾಹಕ್ಕೆ ತುತ್ತಾಗಿರುವುದು ಅತೀವ ಬೇಸರ ತಂದಿದೆ. ಈ ಪ್ರಾಕೃತಿಕ ವಿಕೋಪದಿಂದ ಜೀವ ಕಳೆದುಕೊಂಡವರ ಕುಟುಂಬಗಳ ಸದಸ್ಯರಿಗೆ, ಗಾಯಗೊಂಡವರಿಗೆ ಮತ್ತು ಬಾಧಿತರಾದ ಎಲ್ಲರಿಗೂ ನಾವು ಹೃದಯಪೂರ್ವಕ ಸಾಂತ್ವನ ಹೇಳುತ್ತಿದ್ದೇವೆ ಮತ್ತು ಶೀಘ್ರವೇ ಸಹಜ ಪರಿಸ್ಥಿತಿ ನಿರ್ಮಾಣವಾಗಲಿ ಎಂದು ಆಶಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.

ಮೋದಿಯವರ ಸಂದೇಶದ ಬೆನ್ನಲ್ಲೇ, ಪ್ರವಾಹದಿಂದಾದ ಹಾನಿಯನ್ನು ಸರಿಪಡಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನ ಭಾರತದ ಜತೆಗಿನ ವ್ಯಾಪಾರ ಸಂಬಂಧವನ್ನು ಪುನರಾರಂಭಿಸಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಪಾಕಿಸ್ತಾನ ರವಿವಾರ ಘೋಷಿಸಿದ ಪ್ರಕಾರ, ಪ್ರವಾಹದಿಂದ ಕನಿಷ್ಠ ಒಂದು ಸಾವಿರ ಮಂದಿ ಮೃತಪಟ್ಟಿದ್ದು, ಕನಿಷ್ಠ ಒಂದು ಸಾವಿರ ಕೋಟಿ ಡಾಲರ್ ನಷ್ಟ ಉಂಟಾಗಿದೆ.

ಭಾರತದಿಂದ ಈರುಳ್ಳಿ ಹಾಗೂ ಟೊಮ್ಯಾಟೊದಂಥ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುವ ಬಗ್ಗೆ ಸರ್ಕಾರ ಪರಿಶೀಲಿಸಲಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫತ್ ಇಸ್ಮಾಯಿಲ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಭಾರತ 2019ರ ಆಗಸ್ಟ್ ನಲ್ಲಿ ವಾಪಾಸು ಪಡೆದ ಬಳಿಕ ಪಾಕಿಸ್ತಾನ ಭಾರತದ ಜತೆಗಿನ ಎಲ್ಲ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News